Monday, November 23, 2026

ಪ್ರಾಯೋಗಿಕ ಆವೃತ್ತಿ

ಅದ್ದೂರಿ ಶ್ರೀರಂಗಪಟ್ಟಣ ದಸರಾ ಆಚರಣೆಗೆ ನಿರ್ಧಾರ

ಮೈಸೂರು ದಸರಾದಂತೆ ಅದ್ದೂರಿಯಾಗಿ ಶ್ರೀರಂಗಪಟ್ಟಣದಲ್ಲೂ ದಸರಾಚರಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತಿಯ ಕಾವೇರಿ ಜವಾಂಗಣದಲ್ಲಿ ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆ.28 ರಿಂದ ಆ.02 ರವರೆಗೆ ಐದು ದಿನಗಳ ಕಾಲ ನಾಡ ಹಬ್ಬ ದಸರಾವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ದಸರಾ ಸಮಿತಿಯಿಂದ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಇನ್ನು ಒಂದು ಕೋಟಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು‌.

ಸರ್ಕಾರದ ವಿವಿಧ ಇಲಾಖೆಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ನೆರವು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಡ ಹಬ್ಬ ಯಶಸ್ವಿಗೆ ಶಮಿಸಬೇಕೆಂದರು.

ದಸರಾವನ್ನು ವೈಭವದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಉದ್ದೇಶದಿಂದ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು.

ಜಂಬೂ ಸವಾರಿ,ರೈತರು,ಮಹಿಳೆಯರು, ಮಕ್ಕಳು,ಉದ್ಯೋಗ ದಸರಾ ಆಚರಿಸಲಾಗುವುದು. 4-5 ಆನೆಗಳನ್ನು ಕರೆಸಲು ನಿರ್ಧರಿಸಲಾಗಿದೆ. ಪೊಲೀಸ್ ಬ್ಯಾಂಡ್,ಕಲಾತಂಡ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಜೊತೆ ವೇದಿಕೆಯಲ್ಲಿ ಯುವ ದಸರಾ ಹಾಗೂ ಯೋಗ ಪ್ರದರ್ಶನ ಆಯೋಜನೆಗೆ ನಿರ್ಧರಿಸಲಾಯಿತು.

ಕಬಡ್ಡಿ,ಕ್ರಿಕೆಟ್ ಮೊದಲಾದ ಕ್ರೀಡೆಗಳನ್ನು ಆಡಿಸಲಾಗುವುದು. ಗ್ರಾಮೀಣ ಕಲೆಗಳ ಪ್ರದರ್ಶನಕ್ಕೆ ಹೆಚ್ಚ ಗಮನ ಹರಿಸಲಾಗುವುದು ಎಂದರು.

ದೇವೇಗೌಡರಿಂದ ಉದ್ಘಾಟನೆ

ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆಹ್ವಾನಿಸುವಂತೆ ತೀರ್ಮಾನ ಮಾಡಿದ್ದೇವೆ.

ದೇವೇಗೌಡರು ಆಗದಿದ್ದರೆ ಸಿ ಎಫ್ ಟಿ ಆರ್ ಐ ನಿರ್ದೇಶಕರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಕಳೆದ ಸಾಲಿನ ದಸರಾದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಹಾಗೂ ಗುತ್ತಿಗೆದಾರರಿಗೆ ಬಟವಾಡೆ ವಿಳಂಬವಾದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುವುದಿಲ್ಲ. ಮೈಸೂರು ದಸರಾ ಮಾದರಿಯಲ್ಲಿ ಕಲಾವಿದರಿಗೆ ಮುಂಗಡವಾಗಿ ಹಣ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ದಸರಾ ಆಚರಣೆಗೆ ಸರ್ಕಾರ ನೀಡುವ ಅನುದಾನ ಎಷ್ಟು ಎಂಬ ಬಗ್ಗೆ ಹಾಗೂ ವಿವಿಧ ಇಲಾಖೆಗಳಿಂದ ಎಷ್ಟು ಅನುದಾನ ಸಿಗುತ್ತದೆ ಎಂಬುದು ತಿಳಿದ ನಂತರ ಎಷ್ಟು ದಿನ ದಸರಾ ಆಚರಣೆ ಮಾಡಬೇಕು,ಹೇಗೆ ಆಚರಣೆ ಮಾಡಬೇಕೆಂದು ಎಂಬುದನ್ನು ತೀರ್ಮಾನ ಮಾಡುತ್ತೇವೆ.ದಸರಾ ಆಚರಣೆ ಸಂಬಂಧ ಸಾಕಷ್ಟು ಸಲಹೆಗಳನ್ನು ನೀಡಿದ್ದೇನೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ