Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಆರಂಭವಾಗಲು ಕಾರಣರಾದ ಮುಖ್ಯಮಂತ್ರಿಗಳಿಗೆ ಅಭಿನಂದನೆ

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಷುಗರ್ ಕಾರ್ಖಾನೆ ಆರಂಭವಾಗಲು ಕಾರಣಕರ್ತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾ ಬಿಜೆಪಿ ಘಟಕದಿಂದ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿಯ  ಜಿಲ್ಲಾ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾರಂಭಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡು ನಮ್ಮದು ರೈತ ಪರ ಸರ್ಕಾರ ಎನ್ನುವುದನ್ನು ಮುಖ್ಯಮಂತ್ರಿಯವರು ತೋರಿಸಿದ್ದಾರೆ. ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭೂತಪೂರ್ವ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲೆಯ ರೈತರು ಹಾಗೂ ಸಂಘಟನೆಗಳಿಗೆ ಮಾತು ಕೊಟ್ಟಂತೆ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಮುಂದೆ ಬರುವ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕಾರ್ಖಾನೆಯನ್ನು ಅಭಿವೃದ್ಧಿ ಮಾಡಲಾಗುವುದು.ಓ ಅಂಡ್ ಎಂ ಮಾದರಿಯಲ್ಲ.ಕಾರ್ಖಾನೆಗೆ 290 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ.ಈ ವರ್ಷ 4000 ಟನ್ ಕಬ್ಬು ಅರೆಯಲು ಯೋಚನೆ ಮಾಡಲಾಗಿದೆ ಎಂದರು.

ನಾಲ್ಕು ವರ್ಷದಿಂದ ಕಾರ್ಖಾನೆ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ಮುಂದೆ ಯಾವ ಆಧಾರದಲ್ಲಿ ಕಾರ್ಖಾನೆ ಪ್ರಾರಂಭ ಮಾಡಬೇಕೆನ್ನುವ ನಿರ್ಧಾರವನ್ನು ಜಿಲ್ಲೆಯ ಜನರನ್ನೇ ಕೇಳಲಾಗಿತ್ತು. ಎಲ್ಲರೂ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯುವಂತೆ ಸಲಹೆ ನೀಡಿದ ಮೇರೆಗೆ ಅದೇ ರೀತಿ ನಿರ್ಧಾರ ಮಾಡಿ, ಬಜೆಟ್‌ನಲ್ಲಿ ಕೋಟ್ಯಾಂತರ ರೂ. ಅನುದಾನ ನೀಡಿ ಕಾರ್ಖಾನೆ ಪ್ರಾರಂಭಿಸಲಾಗಿದೆ.

ಇದರೊಂದಿಗೆ ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಜಿಲ್ಲೆಯ ಜನರ ಭಾವನೆಗೆ ಸ್ಪಂದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಹಿಂದೆ ಪಿಎಸ್‌ಎಸ್‌ಕೆ ಕೂಡ ಸ್ಥಗಿತಗೊಂಡಿತ್ತು. ಅದನ್ನು ಕೂಡ ಪ್ರಾರಂಭಿಸಿದ ನಂತರ ಆ ಭಾಗದ ಕಬ್ಬು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಿದೆ‌.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮಸ್ಯೆಗಳ ಬಗೆಹರಿಸುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿಲ್ಲ‌ಮಾಡುತ್ತಲೂ ಇಲ್ಲ.  ಎರಡು ಪಕ್ಷದ ನಾಯಕರು ಟೀಕೆ ಮಾಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಆ ಪಕ್ಷದವರಿಗೆ ಅಧಿಕಾರಕ್ಕಷ್ಟೇ ಜಿಲ್ಲೆಯ ಜನರು ಬೇಕು. ಅವರಿಗೆ ಅಭಿವೃದ್ಧಿಗಿಂತ ಅಧಿಕಾರವೇ ಮುಖ್ಯ. ಅವರ ಸರ್ಕಾರಗಳು ಇದ್ದಾಗ ಕಾರ್ಖಾನೆಗಳ ಬಗ್ಗೆ ಗಮನಹರಿಸಲಿಲ್ಲ. ಜಿಲ್ಲೆಯಲ್ಲಿ ಒಬ್ಬರೇ ಬಿಜೆಪಿ ಶಾಸಕರಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಜನರು ನಂಬಿಕೆ ಇಟ್ಟು ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಮಾದರಿಯನ್ನಾಗಿಸುತ್ತಿದ್ದಾರೆ. ಕೋಟ್ಯಂತರ ರೂಗಳ ಕಾಮಗಾರಿ ಮಾಡಿಸಿದ್ದಾರೆ.ಬಿಜೆಪಿ ಪಕ್ಷಕ್ಕೆ ಜನರು ಆಶೀರ್ವದಿಸ‌ ಬೇಕೆಂದರು.

ಹಾಗೆಯೇ ಇದರೊಟ್ಟಿಗೆ ಜಿಲ್ಲೆಯವರೇ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಡ್ಯ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಘೋಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಇದರಿಂದ ಪ್ರತಿ ವರ್ಷ ಸಾವಿರಾರೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಹಿಂದೆ ಉನ್ನತ ಶಿಕ್ಷಣಕ್ಕೆ ಮೈಸೂರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಆದರೀಗ ಜಿಲ್ಲೆಯಲ್ಲಿಯೇ ಉನ್ನತ ಶಿಕ್ಷಣ ಪಡೆಯುವಂತಾಗಲಿದೆ.

ಹೊಸ ವಿಶ್ವವಿದ್ಯಾನಿಲಯದಿಂದ ಹಲವು ಸೌಲಭ್ಯ ಬರಲಿದೆ. ಆದ್ದರಿಂದ ಜಿಲ್ಲೆಯ ಜನರು ಬರೀ ಮಾತನಾಡುವ ಜೆಡಿಎಸ್, ಕಾಂಗ್ರೆಸ್‌ನವರನ್ನು ಬಿಟ್ಟು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಮಾತನಾಡಿ, ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಯುತ್ತಿದ್ದು,ಓ ಅಂಡ್ ಎಂ ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. ಇದನ್ನು ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಕಾರ್ಖಾನೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದರು.

ಬಿಜೆಪಿ ಮುಖಂಡರಾದ ಎಲೆಚಾಕನಹಳ್ಳಿ ಬಸವರಾಜ್, ಕಾಡೇನಹಳ್ಳಿ ನಾಗಣ್ಣಗೌಡ, ಪ‌.ನಾ.ಸುರೇಶ್,ಸಿ.ಟಿ.ಮಂಜುನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!