Tuesday, November 24, 2026

ಪ್ರಾಯೋಗಿಕ ಆವೃತ್ತಿ

ಹೇಮಾವತಿ ಎಡದಂಡೆ ನಾಲೆ ಕಾಮಗಾರಿಯಲ್ಲಿ 500 ಕೋಟಿ ಅವ್ಯವಹಾರ

ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ 500 ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕೆಂದು ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಜಯರಾಮ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಮಾವತಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ 817.73 ಕೋಟಿ ಮತ್ತು ಶೇಕಡ 8 ಹೆಚ್ಚು ದರಗಳ ಪ್ರಕಾರ 883.15 ಕೋಟಿ ಮೊತ್ತಕ್ಕೆ ವಿಜಯಪುರ ಜಿಲ್ಲೆಯ ಗುತ್ತಿಗೆದಾರ ಎಂ.ವೈ. ಕಟ್ಟೀಮನಿ ಅವರಿಗೆ ವಹಿಸಲಾಗಿದ್ದು, 2018 ರಿಂದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರುವುದಲ್ಲದೆ ಶೇ.80ರಷ್ಟು ಭ್ರಷ್ಟಾಚಾರ ನಡೆಸಿ ಸಾರ್ವಜನಿಕರ ತೆರಿಗೆಯ ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಲೋಕಾಯುಕ್ತ, ನೀರಾವರಿ ಸಚಿವ,ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪ್ರಧಾನಮಂತ್ರಿಯವರು ‘ನಾ ಖಾವೂಂಗ ನಾ ಖಾನೆದೂಂಗ’ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ದೊಡ್ಡ ಭ್ರಷ್ಟಾಚಾರವೇ ನಡೆದಿದ್ದರೂ ಸುಮ್ಮನಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರಿಗೆ 40% ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೊಡಿ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಹೇಳುತ್ತಾರೆ. ನಾವು ಹೇಮಾವತಿ ಎಡದಂಡೆ ನಾಲೆಯಲ್ಲಿ ಆಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಸುಮಾರು 500 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರದ ಬಗ್ಗೆ ದಾಖಲೆ ನೀಡಿದರೂ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಇನ್ನು ಅಧಿಕೃತವಾಗಿ ಕಾಮಗಾರಿ ಮುಗಿದಿಲ್ಲ, ಆದರೂ ಗುತ್ತಿಗೆದಾರ ಎಂ.ವೈ. ಕಟ್ಟೀಮನಿಯವರಿಗೆ ಸುಮಾರು 1000 ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಎಂಬಿ ಬುಕ್ ಮಾಹಿತಿ ನೀಡಿಲ್ಲದಿದ್ದರೂ ಕಾಮಗಾರಿ ಪೂರ್ಣವಾಗಿದೆ ಎಂದು ಹೇಳಿ ಎಲ್ಲಾ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು.

ಸಚಿವ ನಾರಾಯಣಗೌಡ ಶಾಮೀಲು

ಹೇಮಾವತಿ ಎಡದಂಡೆ ನಾಲೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ಕೆ.ಆರ್. ಪೇಟೆಯಲ್ಲಿ ಅಹೋರಾತ್ರಿ ನಿರಂತರವಾಗಿ ಆರು ದಿನ ಧರಣಿ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಿಗೆ ರೇಷ್ಮೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ, ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇನ್ನೊಂದು ವಾರದಲ್ಲಿ ತನಿಖೆಗೆ ಆದೇಶಿಸುವುದಾಗಿ ಹೇಳಿ ಹೋದರು. ಇನ್ನು ಯಾವುದೇ ತನಿಖೆ ಆರಂಭಗೊಂಡಿಲ್ಲ. ಜಿಲ್ಲಾಧಿಕಾರಿಯವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ನಂತರ ಮೂವರು ನಿವೃತ್ತ ಮುಖ್ಯ ಇಂಜಿನಿಯರ್ ಗಳ ಸಮಿತಿ ಮಾಡಿದರು. ಈ ಸಮಿತಿಯಿಂದ ಸತ್ಯಾಂಶ ಹೊರತರುವ ಬಗ್ಗೆ ವಿಶ್ವಾಸವಿಲ್ಲ ಎಂದರು.

ನಾಲಾ ಕಾಮಗಾರಿಯುದ್ದಕ್ಕೂ ಹಲವು ಭಾಗಗಳಲ್ಲಿ ಲೈನಿಂಗ್ ಕುಸಿದಿರುವುದು ಕಳಪೆ ಕಾಮಗಾರಿ ನಡೆದಿದೆ ಎನ್ನುವುದಕ್ಕೆ ಸಾಕ್ಷಿ. ಚನ್ನರಾಯಪಟ್ಟಣ ತಾಲೂಕಿನಿಂದ ಕೆ.ಆರ್. ಪೇಟೆಯ ಮೂಲಕ ನಾಗಮಂಗಲ ತಾಲೂಕಿನವರೆಗೂ ನಡೆದಿರುವ ಈ ಕಾಮಗಾರಿಯಲ್ಲಿ 500 ಕೋಟಿಗೂ ಹೆಚ್ಚು ಹಣ ಭ್ರಷ್ಟರ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ನಾರಾಯಣಗೌಡ ಸೇರಿದಂತೆ ಬಹುತೇಕ,ಶಾಸಕರು, ಮಂತ್ರಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಇಂಜಿನಿಯರ್‌ಗಳು, ಗುತ್ತಿಗೆದಾರರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ 2019ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು,ಈಗಾಗಲೇ ಪ್ರಧಾನಮಂತ್ರಿಗೆ ದೂರು ನೀಡಿದ್ದರೂ, ಮತ್ತೊಂದು ದೂರು ನೀಡುವುದಾಗಿ ತಿಳಿಸಿದರು.

250 ಕೋಟಿ ಗ್ರಾವೆಲ್ ಮಣ್ಣು

ರೈತನಾಯಕ ಮಧುಚಂದನ್ ಮಾತನಾಡಿ, ಕಾಮಗಾರಿಗೆ ಸುಮಾರು 40 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಗ್ರಾವೆಲ್ ಮಣ್ಣು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಗುತ್ತಿಗೆದಾರರು ಮಣ್ಣು ಯಾವ ಸ್ಥಳದಿಂದ ತುಂಬಿದ್ದೇವೆ ಎಂದು ಹೇಳಿದ್ದಾರೋ ಆ ಜಾಗದಲ್ಲಿ ಒಂದು ಹಿಡಿ ಗ್ರಾವೆಲ್ ಮಣ್ಣನ್ನು ತೆಗೆದಿರುವುದಿಲ್ಲ. ಇನ್ನು ಗ್ರಾವೆಲ್ ಮಣ್ಣು ತೆಗೆದಿದ್ದು ಎಂದು ಹೇಳುವ ಚೌಡಹಳ್ಳಿ ಎಂಬ ಗ್ರಾಮ ಕೆ.ಆರ್. ಪೇಟೆ ತಾಲೂಕಿನಲ್ಲಿ ಇಲ್ಲವೇ ಇಲ್ಲ. ಗ್ರಾವೆಲ್ ಮಣ್ಣಿಗೆ 250 ಕೋಟಿ ರೂ.ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲೂ ಕೂಡ ಗ್ರಾವೆಲ್ ಮಣ್ಣು ಉಪಯೋಗಿಸಿಲ್ಲ.ಇದೊಂದರಲ್ಲೇ 250 ಕೋಟಿ ರೂ.ಭ್ರಷ್ಟರ ಪಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗೆಯೇ ಮರಳು ಗಣಿಗಾರಿಕೆ ನಿಷೇಧ ವಿದ್ದಾಗಲೂ ಕೆ.ಆರ್. ಪೇಟೆಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮೈಸೂರಿನ ಟಿ. ನರಸೀಪುರ ಬಳಿ ಕಾವೇರಿ ನದಿಯಿಂದ 2.40 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಮರಳನ್ನು ತೆಗೆದಿದ್ದೇವೆ ಎಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ಇಲ್ಲಿ ಮರಳುಗಾರಿಕೆ ನಿಷೇಧವಾಗಿದ್ದು, ಈ ಭಾಗದಲ್ಲಿ ಮರಳನ್ನು ತೆಗೆಯಲು ಅನುಮತಿ ನೀಡಿರುವುದಿಲ್ಲ ಮತ್ತು ಈ ಪ್ರಮಾಣದ ಮರಳನ್ನು ಈ ಭಾಗದಲ್ಲಿ ಎತ್ತುವಳಿ ಮಾಡಿರುವುದಿಲ್ಲ ಎಂದು ಮೈಸೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಲಿಖಿತವಾಗಿ ಹಿಂಬರಹ ನೀಡಿದೆ. ಹೀಗಿದ್ದರೂ ಭಾರೀ ಮೊತ್ತದ ಹಣವನ್ನು ಮರಳು ತಂದಿದ್ದೇವೆ ಎಂದು ನುಂಗಿ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ರೈತ ಸಂಘ ಈ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧವಿದೆ ಎಂದರು.

ಶೇ. 80ರಷ್ಟು ಲೂಟಿ

ರೈತ ನಾಯಕ ಪ್ರಸನ್ನ ಗೌಡ ಮಾತನಾಡಿ, ಮಾನ್ಯ ಪ್ರಧಾನಮಂತ್ರಿಯವರು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಶೇ. 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎನ್ನಲು 500 ಕೋಟಿ ಅವ್ಯವಹಾರದ ಈ ಕಾಮಗಾರಿ ಸಾಕ್ಷಿಯಾಗಿದೆ. ಮಾಹಿತಿ ಹಕ್ಕು ಕಾಯಿದೆ ಬಳಸಿಕೊಂಡು ಎರಡು ವರ್ಷಗಳ ಕಾಲ ಈ ಹಗರಣದ ಮಾಹಿತಿಯನ್ನು ಹೊರತೆಗೆಯಲಾಗಿದೆ.

ತಲಕಾಡು ಭಾಗದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲದಿದ್ದರೂ, ಒಂದು ಹಿಡಿ ಮರಳನ್ನು ತರದಿದ್ದರೂ, ಮರಳು ತಂದಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ನಾಲೆಯ ಬಹುತೇಕ ಕಡೆಗಳಲ್ಲಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಕಬ್ಬಿಣವನ್ನು ಅಳವಡಿಸಿರುವುದಿಲ್ಲ. ಈ ಕಾಮಗಾರಿಯಲ್ಲಿ ಸುಮಾರು 600 ಟನ್ ಕಬ್ಬಿಣವನ್ನು ಉಪಯೋಗಿಸುವುದಾಗಿ ಹೇಳಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ಕಬ್ಬಿಣ ಹಾಕದ ಪರಿಣಾಮ ನಾಲೆ ಕಿತ್ತು ಬಂದಿದೆ. ಶೇ. 80ರಷ್ಟು ಅವ್ಯವಹಾರ ನಡೆದಿದೆ ಎಂದು ತಿಳಿಸಿದರು.

ಇನ್ನು ಕಾಮಗಾರಿಯಲ್ಲಿ ದನ-ಕರುಗಳಿಗೆ ಅನುಕೂಲವಾಗಲಿ ಎಂದು ನಾಲೆಯಲ್ಲಿ ರ‌್ಯಾಂಪ್ ಹಾಕಿದ್ದೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಯೂ ರ‌್ಯಾಂಪ್ ಹಾಕಿಲ್ಲ. ಅನ್ಯಾಯಕ್ಕೂ ಇತಿ ಮಿತಿ ಬೇಡವೇ? ಇಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದ್ದರೂ ಸರ್ಕಾರ ಸುಮ್ಮನಿರುವುದು ನಾಚಿಕೆಗೇಡು.ನಾವು ಬಹಿರಂಗ ವಿಚಾರಣೆಗೆ ಸಂಪೂರ್ಣ ಸಿದ್ಧವಿದ್ದು, ಸಚಿವರಿಗೆ,ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಅಧಿಕಾರಿಗಳಿಗೆ ನೈತಿಕತೆ ಇದ್ದರೆ ಬನ್ನಿ, ಭ್ರಷ್ಟಾಚಾರ ನಡೆದಿರುವುದನ್ನು ತೋರಿಸಿ ಎಂದು ಹೇಳಬೇಕಿತ್ತು. ಆದರೆ ಇದುವರೆಗೂ ಆ ರೀತಿ ಮಾಡಿಲ್ಲದಿರುವುದನ್ನು ನೋಡಿದರೆ ದೊಡ್ಡ ಭ್ರಷ್ಟಾಚಾರ ನಡೆದಿರುವುದು ಬಗ್ಗೆ ಅನುಮಾನ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ಶೇ. 40ರಷ್ಟು ಕಮಿಷನ್ ಬಗ್ಗೆ ದಾಖಲೆ ಕೊಡಿ ಎಂದು ಕೇಳುತ್ತಾರೆ. ನಾವು ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ದಾಖಲೆಯನ್ನು ನೀಡುತ್ತೇವೆ. ನೀವು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ರೈತ ನಾಯಕ ರಾಜೇಗೌಡ ಮಾತನಾಡಿ, ಶ್ರವಣಬೆಳಗೊಳದಿಂದ ನಾಗಮಂಗಲದವರೆಗಿನ ಹೇಮಾವತಿ ಎಡದಂಡೆ ನಾಲೆಯಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಶೇ. 20ರಷ್ಟು ಮಾತ್ರ ಕೆಲಸ ಮಾಡಿ ಉಳಿಕೆ ಶೇ. 80ರಷ್ಟು ಹಣವನ್ನು ಗುಳುಂ ಮಾಡಲಾಗಿದೆ.

ನೆಲೆಯಲ್ಲಿ ಟರ್ಫಿಂಗ್ ಸಂಪೂರ್ಣ ಮಾಡಿರುವುದಿಲ್ಲ, ಚರಂಡಿ ಮಾಡಿರುವುದಿಲ್ಲ, ರಕ್ಷಣಾ ಕಲ್ಲುಗಳು, ಪ್ರೆಷರ್ ರಿಲೀಫ್ ಪೈಪ್ಗಳನ್ನು ಹಾಕಿರುವುದಿಲ್ಲ,ಯು ಸಿ ಆರ್ ಲೈನಿಂಗ್ ಕೈಗೊಂಡಿರುವುದಿಲ್ಲ, ಕಬ್ಬಿಣ ಹಾಕಿಲ್ಲ. ಇಷ್ಟೆಲ್ಲಾ ದೊಡ್ಡ ಹಗರಣ ನಡೆದಿದ್ದರೂ ಸರ್ಕಾರ ಯಾಕೆ ಇದನ್ನು ತನಿಖೆಗೆ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.

ರೈತಸಂಘ ಗುತ್ತಿಗೆದಾರರಿಂದ ಎಷ್ಟೆಲ್ಲ ಬೆದರಿಕೆ ಬಂದರೂ ಹೋರಾಟ ಕೈಬಿಟ್ಟಿಲ್ಲ. ಮುಂದೆ ಕಾನೂನು ಹೋರಾಟ ನಡೆಸಿ ನ್ಯಾಯ ಪಡೆಯುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ನಾಗೇಗೌಡ, ಶ್ರೀಕಾಂತ್, ಪಣಕನಹಳ್ಳಿ ಧನಂಜಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ