Sunday, May 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸಲು ತಕ್ಷಣ ಕ್ರಮ

ಭಾರೀ ಮಳೆಯಿಂದ ತೊರೆಕಾಡನಹಳ್ಳಿಯ ನೀರು ಸರಬರಾಜು ಕೇಂದ್ರಕ್ಕೆ ನೀರು ನುಗ್ಗಿ ತೊಂದರೆಯಾಗಿದ್ದು,ಕೂಡಲೇ ನೀರನ್ನು ಹೊರಹಾಕಿ ಬೆಂಗಳೂರಿಗರಿಗೆ ಕಾವೇರಿ ನೀರನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿರು ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಮಳೆಯಿಂದ ಜಲಾವೃತವಾಗಿದ್ದ ಸ್ಟೇಜ್ 3 ಮತ್ತು ಫೇಸ್ 2 ನೀರು ಸರಬರಾಜು ಕೇಂದ್ರಗಳ ಪರಿಶೀಲನೆ ನಡೆಸಿ ಅವರ ಮಾತನಾಡಿದರು.

ಅತಿ ಹೆಚ್ಚು ಮಳೆಯಿಂದ ತೊರೆಕಾಡನಹಳ್ಳಿಯ ಪಂಪ್ ಹೌಸ್ ಬಳಿಯಿರುವ ಭೀಮೇಶ್ವರ ನದಿ ಹಾಗೂ ಕೆರೆ ತುಂಬಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎರಡು ಪಂಪ್ ಹೌಸ್ ಗೆ ನುಗ್ಗಿ ಬಹಳ ಹಾನಿಯಾಗಿದೆ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಭೀಮೇಶ್ವರ ನದಿ ಉಕ್ಕಿ ಹರಿದಿದೆ.ನದಿ ನೀರು ಹೆಚ್ಚಾಗಿ ನೀರು ಸರಬರಾಜು ಘಟಕಕ್ಕೆ ನುಗ್ಗಿ ಬಹಳ ಹಾನಿಯಾಗಿದೆ. 75 ವರ್ಷದ ಬಳಿಕ ಈ ನದಿಯಲ್ಲಿ ಇಷ್ಟು ಪ್ರಮಾಣದ ನೀರು ಬಂದಿದೆ.

5 ಘಟಕಗಳ ಪೈಕಿ 2 ಪಂಪ್ ಹೌಸ್ ಗಳಿಗೆ ನೀರು ನುಗ್ಗಿದೆ.ಇದನ್ನು ತಕ್ಷಣ ಸರಿಪಡಿಸಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳವುದಾಗಿ ತಿಳಿಸಿದರು.

1,450 ಎಂ.ಎಲ್.ಡಿ ಸಾಮರ್ಥ್ಯದ ಪಂಪ್ ಹೌಸ್‌ಗಳಿದ್ದು, 550 ಮತ್ತು 350 ಎಂ.ಎಲ್.ಡಿ ಸಾಮರ್ಥ್ಯದ ಘಟಕಗಳಿದ್ದು,550 ಎಂ.ಎಲ್.ಡಿ ಸಾಮರ್ಥ್ಯದ ಪಂಪ್ ಹೌಸ್ ಗಳು ಈಗಾಗಲೇ ಕೆಲಸ ಮಾಡುತ್ತಿದ್ದು, ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ ಎಂದರು. ನೀರು ತುಂಬಿದ ಎರಡು ಪಂಪ್ ಹೌಸ್ ಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.


ಸ್ಟೇಜ್ 4 ಪಂಪ್ ಹೌಸ್ ನಲ್ಲಿ 12 ಅಡಿ ನೀರು ಹೊರ ತೆಗೆಯಲಾಗಿದೆ, ಇನ್ನೂ 11 ಅಡಿ ನೀರು ತೆಗೆಯಬೇಕು. ಮಧ್ಯರಾತ್ರಿ ಅಥವಾ ನಾಳೆ ಬೆಳಿಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ ಎಂದು ಹೇಳಿದರು.

ಯಂತ್ರೋಪಕರಣಗಳನ್ನು ಡ್ರೈ ಮಾಡಿದ ಬಳಿಕ 350 ಎಂಎಲ್ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ನೀರನ್ನು ಬೆಂಗಳೂರಿಗೆ ಒದಗಿಸಲು ಸಾಧ್ಯವಾಗುತ್ತದೆ.
ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಪಂಪ್ ಹೌಸ್ ಸುತ್ತ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ.ರಾಜ್ಯದ ಎಲ್ಲಾ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಮಳೆನೀರು, ಕೆರೆನೀರು ಒಟ್ಟಾಗಿ ಹರಿದು ಪ್ರವಾಹದ ಪರಿಸ್ಥಿತಿ ಎದುರಾಗಿದೆ.ಇದರ ಬಗ್ಗೆ ಜಾಗ್ರತೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಂದಾಯ ಇಲಾಖೆ ಸಚಿವರಾದ ಆರ್.ಆಶೋಕ್,ನಗರಾಭಿವೃದ್ಧಿ ಖಾತೆ ಸಚಿವರಾದ ಬೈರತಿ ಬಸವರಾಜು, ಶಾಸಕರಾದ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಅಶ್ವತಿ,ಪೊಲೀಸ್ ವರಿಷ್ಠಾಧಿಕಾರಿ ಎಸ್.ಯತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!