Saturday, May 18, 2024

ಪ್ರಾಯೋಗಿಕ ಆವೃತ್ತಿ

ಹೋರಾಟಗಾರರು – ಕ್ರೀಡಾಪಟುಗಳ ಮೇಲೆ ಪೊಲೀಸ್ ದೌರ್ಜನ್ಯ AIDSO ಖಂಡನೆ

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಪೆಡರೇಷನ್‌ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಂಧನ ಮಾಡಬೇಕೆಂದು ಆಗ್ರಹಿಸಿ ಹೋರಾಟಗಾರರು ಹಾಗೂ ಕುಸ್ತಿಪಟುಗಳು ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟಗಾರರು ಹಾಗೂ ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ, ಬಂಧಿಸಿದರುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO)ರಾಜ್ಯ ಸಮಿತಿ ಅತ್ಯಂತ ಉಗ್ರ ಪದಗಳಲ್ಲಿ ಖಂಡಿಸಿದೆ.

ದೆಹಲಿಯಲ್ಲಿ ಹೋರಾಟನಿರತ ಮಹಿಳಾ ಕುಸ್ತಿ ಪಟುಗಳು ನೀಡಿದ್ದ ಮಹಾ ಪಂಚಾಯತ್ ಕರೆಗೆ ಸ್ಪಂದಿಸಿ, ಬೆಂಬಲವನ್ನು ಸೂಚಿಸಲು ದೆಹಲಿಯ ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ಹಲವು ಕಾರ್ಯಕರ್ತರು ಹಾಗೂ ಸಾಮಾಜಿಕ ಚಳವಳಿಯ ಪ್ರಮುಖ ನಾಯಕರನ್ನು ದೆಹಲಿ ಪೊಲೀಸ್ ಬಂಧಿಸಿರುವುದು ಅತ್ಯಂತ ಖಂಡನೀಯ.  ಒಂದೆಡೆ ಪ್ರಧಾನಿಯವರು ನೂತನ ಸಂಸತ್ತಿನ ಕಟ್ಟಡವನ್ನು “ಪ್ರಜಾತಂತ್ರದ ದೇವಸ್ಥಾನ” ಎಂದು ಕರೆದು ಅದರ ಉದ್ಘಾಟನೆ ನಡೆಸುತ್ತಿದ್ದಾರೆ, ಕೆಲವೇ ಕಿ.ಮೀ. ಅಂತರದಲ್ಲಿರುವ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರ ಬೆಂಬಲಿತ ದೆಹಲಿ ಪೊಲೀಸ್ ಪ್ರಜಾತಂತ್ರದ ಹಕ್ಕುಗಳನ್ನು ದಮನಗೊಳಿಸುತ್ತಿದ್ದಾರೆ ಎಂದು AIDSO ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ಪ್ರಕಟಣೆಯಲ್ಲಿ ದೂರಿದ್ದಾರೆ.

ಹೋರಾಟ ನಿರತ ಕುಸ್ತಿ ಪಟುಗಳನ್ನು ಬೆಂಬಲಿಸುವ ಉದ್ದೇಶದಿಂದ ಇಂದು ಜಂತರ್ ಮಂತರ್ ನಲ್ಲಿ ಮಹಿಳಾ ಮಹಾಪಂಚಾಯತ್ ಅನ್ನು ಕರೆಯಲಾಗಿತ್ತು. ಈ ಬೃಹತ್ ಪ್ರತಿಭಟನೆಗೆ ಹಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಮುಖ ನಾಯಕರುಗಳು ಆಗಮಿಸುತ್ತಿದ್ದರು. ಪ್ರಜಾತಾಂತ್ರಿಕ ಹಕ್ಕುಗಳಿಗೆ ಕನಿಷ್ಠ ಗೌರವವನ್ನೂ ನೀಡದೆ, ಮಹಾಪಂಚಾಯತ್ ಅನ್ನು ವಿಫಲಗೊಳಿಸುವ ದುರುದ್ದೇಶದಿಂದ, ದೆಹಲಿ ಸರ್ಕಾರವು ಪ್ರತಿಭಟನೆಗೆ ತೆರಳುತ್ತಿದ್ದ ಹಲವರನ್ನು ಬಂಧಿಸಿದೆ, ಕೆಲವರನ್ನು ಗೃಹ ಬಂಧನದಲ್ಲಿ ಇರಿಸಿದೆ. AIDSO ವಿದ್ಯಾರ್ಥಿ ಸಂಘಟನೆಯ ಸೋದರ ಸಂಘಟನೆಗಳಾದ AIMSS (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ), AIKKMS (ಅಖಿಲ ಭಾರತ ಕೃಷಿ ಖೇತ್ ಮಜದೂರ್ ಸಂಘಟನ್) ನ ನಾಯಕರುಗಳನ್ನು ಬಂಧಿಸಲಾಗಿದೆ ಎಂದು ಖಂಡಿಸಿದ್ದಾರೆ.

ನೂತನ ಸಂಸತ್ ಭವನ, ಪ್ರಜಾತಂತ್ರದ ಚಿನ್ಹೆಯೆಂಬ ಅಬ್ಬರದ ಪ್ರಚಾರದೊಂದಿಗೆ ಉದ್ಘಾಟನೆಯಾಗುತ್ತಿರುವ ದಿನವೇ, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೂಲಭೂತ ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ, ಅವರುಗಳನ್ನು ಬಂಧನದಲ್ಲಿ ಇರಿಸಲಾಗಿದೆ. ಲೈಂಗಿಕ ಕಿರುಕುಳದ ಆರೋಪ ಮತ್ತು ಪೋಕ್ಸೊ ಕಾಯ್ದೆಯಡಿ ಅಪರಾಧಿ ಆಗಿರುವ ಬಿಜೆಪಿ ಸಂಸದನ ರಕ್ಷಣೆಗೆ ಬಿಜೆಪಿ ಸರ್ಕಾರವು ಬದ್ಧವಾಗಿರುವುದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾತಾಂತ್ರಿಕ ಹಕ್ಕುಗಳ ಮೇಲಿನ ಈ ದಾಳಿಯನ್ನು AIDSO ರಾಜ್ಯ ಸಮಿತಿ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಮತ್ತು ಹೋರಾಟಕ್ಕೆ ಸಂಬಂಧಪಟ್ಟ ಎಲ್ಲ ನಾಯಕರುಗಳನ್ನು ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಅವರು, ಇಂತಹ ದಾಳಿಯನ್ನು ಹಿಮ್ಮೆಟ್ಟಿಸಲು ರಾಜ್ಯದ ಜನತೆ, ವಿದ್ಯಾರ್ಥಿಗಳು ಮತ್ತು ಎಲ್ಲ ಪ್ರಗತಿಪರ ಚಿಂತನೆಯುಳ್ಳ ನಾಗರಿಕರು ಒಂದಾಗಿ, ಪ್ರತಿರೋಧ ಚಳುವಳಿಯನ್ನು ಬೆಳೆಸುತ್ತಾ ಮತ್ತು ಹೋರಾಟನಿರತ ಕುಸ್ತಿ ಪಟುಗಳ ಚಳುವಳಿಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!