Friday, September 20, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಯಾತ್ರೆಗೆ ಶಾಸಕ ಎಂ.ಶ್ರೀನಿವಾಸ್ ಚಾಲನೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸುವ ಸಲುವಾಗಿ ಆಯೋಜಿಸಿರುವ ಧರ್ಮಸ್ಥಳ ಯಾತ್ರೆಗೆ ಶಾಸಕ ಎಂ‌.ಶ್ರೀನಿವಾಸ್ ಚಾಲನೆ ನೀಡಿದರು.

ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಯಾತ್ರೆಗೆ ಗುರುವಾರ ಬೆಳಿಗ್ಗೆ ಶಾಸಕ ಎಂ. ಶ್ರೀನಿವಾಸ್ ಚಾಲನೆ ನೀಡಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಯೋಗೇಶ್ ಮಾತನಾಡಿ, ಶಾಸಕ ಶ್ರೀನಿವಾಸ್ ಅವರ ಹೆಸರಿನಲ್ಲಿ ಧರ್ಮಸ್ಥಳ ಯಾತ್ರೆ ಮಾಡಬೇಕು ಎನ್ನುವುದು ಒಂದು ವರ್ಷದ ಹಿಂದೆಯೇ ತೀರ್ಮಾನ ಮಾಡಲಾಗಿತ್ತು.

ಆದರೆ ಕೋವಿಡ್ ಮತ್ತಿತರ ಕಾರಣಗಳಿಂದ ಆಗಿರಲಿಲ್ಲ. ಇಂದು ಅಧಿಕೃತವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಧರ್ಮಸ್ಥಳ ಯಾತ್ರೆ ಮಾಡಿಸಲು ಚಾಲನೆ ನೀಡಲಾಗಿದೆ ಎಂದರು.

ಸುಮಾರು ಹತ್ತಕ್ಕೂ ಹೆಚ್ಚು ಬಸ್ಸುಗಳಲ್ಲಿ ಸುಮಾರು 700 ಜನರನ್ನು ಧರ್ಮಸ್ಥಳ ಯಾತ್ರೆಗೆ ಕಳುಹಿಸಲಾಗುತ್ತಿದೆ. ಇಂದು ಧರ್ಮಸ್ಥಳದಲ್ಲಿ ದರ್ಶನ ಮಾಡಿಸಿ,ನಾಳೆ ಸೌತಡ್ಕ ಗಣಪತಿ ಹಾಗೂ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿ ಕರೆತರಲಾಗುವುದು ಎಂದು ತಿಳಿಸಿದರು.

ಯಾತ್ರೆಗೆ ತೆರಳುವ ಪ್ರತಿಯೊಬ್ಬರಿಗೂ ಊಟ, ವಸತಿ, ಮಾತ್ರೆ ಸೇರಿ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ. ಮಹಿಳಾ ಸಂಘಗಳಲ್ಲಿನ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ನಮ್ಮ ಪಕ್ಷದ ಮುಖಂಡರ ಅಭಿಪ್ರಾಯದಂತೆ ಧರ್ಮಸ್ಥಳ ಯಾತ್ರೆ ಪ್ರಾರಂಭಿಸಲಾಗಿದೆ ಎಂದರು.

ಚುನಾವಣೆ ಉದ್ದೇಶವಲ್ಲ

ಶಾಸಕರ ಹೆಸರಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಧರ್ಮಸ್ಥಳ ಯಾತ್ರೆಯನ್ನು ಮಾಡಿಸಬೇಕೆಂಬುದು ನಮ್ಮ ಉದ್ದೇಶವೇ ಹೊರತು ಚುನಾವಣೆಯ ಉದ್ದೇಶವಲ್ಲ.ನಮ್ಮ ಪ್ರತಿ ಊರಿನಲ್ಲೂ ಇರುವ ಕಾರ್ಯಕರ್ತರ ಅಮ್ಮಂದಿರು, ಅಕ್ಕ,ತಂಗಿಯರು ಅವರಿಗೆ ಧರ್ಮಸ್ಥಳ ಯಾತ್ರೆ ಮಾಡಿಸುವುದು ನಮ್ಮ ಉದ್ದೇಶ.

ಹೀಗಾಗಿ ಪ್ರತಿ ಊರಿನಲ್ಲಿಯೂ ಅವರು ಹೇಳಿದ ಹಾಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಯಾತ್ರೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಲ್ಲದೆ ಇತರೆಡೆಯಿಂದಲೂ ಜನ ಬಂದಿದ್ದಾರೆ. ಜನರ ಜೊತೆ ಮುಂದಿನ ದಿನಗಳಲ್ಲಿ ನಿಲ್ಲಲು ಸಹಕಾರಿಯಾಗಲಿದೆ ಎಂದರು.

ನಾನು ಪ್ರಬಲ ಆಕಾಂಕ್ಷಿ

ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
ನಮ್ಮ ಬೆಂಬಲಿಗರು, ಪಕ್ಷದ ಮುಖಂಡರು ತಾವೇ ಸ್ವಂತ ಕಾರುಗಳಲ್ಲಿ ಹೋಗಿ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ತೆರಳಿದ್ದರು.

ಅದು ಪೂರ್ವ ನಿಯೋಜಿತ ಭೇಟಿ ಆಗಿರಲಿಲ್ಲ.ರಾಜಕೀಯಕ್ಕೂ ಬರುವ ಮೊದಲೇ ನಾನು 60 ಲಕ್ಷ ವೆಚ್ಚದಲ್ಲಿ ಉದ್ಯೋಗ ಮೇಳ ಮಾಡಿದ್ದೇನೆ.ಸಕ್ರಿಯ ರಾಜಕಾರಣದಲ್ಲಿದ್ದು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಉಳಿವಿಗಾಗಿ ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಲು ನಿರ್ಧರಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಹೆಚ್.ಎಸ್.ಮಂಜು,ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಪುಟ್ಟಸ್ವಾಮಿ,ಸದಸ್ಯರಾದ ನಾಗೇಶ್,ಕುಮಾರ್, ಮಾಜಿ ಸದಸ್ಯ ಗೌರೀಶ್,ಮುಖಂಡರಾದ ಪುಟ್ಟಸ್ವಾಮಿ, ರಮೇಶ್, ಸುರೇಶ್, ಜಯರಾಮ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!