Saturday, November 21, 2026

ಪ್ರಾಯೋಗಿಕ ಆವೃತ್ತಿ

ಕುಂಭಮೇಳ : ಅ.13ರಂದು ಕೆ.ಆರ್.ಪೇಟೆಗೆ ಜ್ಯೋತಿ ರಥಯಾತ್ರೆ


  • ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯ  3 ಸಾವಿರ ಕಲಾವಿದರಿಂದ ಉತ್ಸವ

  • 100 ಜಾನಪದ ಕಲಾತಂಡಗಳು – 5 ಸಾವಿರ ಕಾಲೇಜು ವಿದ್ಯಾರ್ಥಿಗಳು ಭಾಗಿ

ಕೆ.ಆರ್.ಪೇಟೆ ತಾಲ್ಲೂಕಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾಕುಂಭ ಮೇಳದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 13 ರ ಗುರುವಾರದಂದು ಮಹದೇಶ್ವರ ಜ್ಯೋತಿ ರಥಯಾತ್ರೆಯು  ಕೆ.ಆರ್.ಪೇಟೆಗೆ ಆಗಮಿಸಲಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ  ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಳ್ವಾಸ್ ನುಡಿಸಿರಿ ವ್ಯವಸ್ಥಾಪಕ ಸಿಬ್ಬಂದಿಗಳು, ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.

ಅಕ್ಟೋಬರ್ 13ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಮಿನಿವಿಧಾನಸೌಧದ ಆವರಣದಿಂದ ಆರಂಭವಾಗುವ ಮಹದೇಶ್ವರ ಜ್ಯೋತಿ ರಥ ಯಾತ್ರೆಯಲ್ಲಿ 100 ಜಾನಪದ ಕಲಾತಂಡಗಳು, 3 ಸಾವಿರ ಕಲಾವಿದರು, 5 ಸಾವಿರ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಕಲಾವಿದರು ವಿವಿಧ ವೇಷಭೂಷಣಗಳನ್ನು ತೊಟ್ಟು ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೈವಿಧ್ಯಮಯ ಮೆರವಣಿಗೆ ನಡೆಸಿ ಪುರಸಭಾ ಕಾರ್ಯಾಲಯದ ಪಕ್ಕದಲ್ಲಿರುವ ಬೃಹತ್ ಮೈದಾನ ತಲುಪಲಿದ್ದಾರೆ. ಸಂಜೆ 6ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಪ್ರಸಂಗಗಳ ಪ್ರದರ್ಶನವು ನಡೆಯಲಿದೆ ಎಂದರು.

ಮಹದೇಶ್ವರ ಜ್ಯೋತಿ ರಥಯಾತ್ರೆಯು ಹಾದು ಹೋಗುವ ಮಾರ್ಗದುದ್ದಕ್ಕೂ ರಂಗೋಲಿಗಳನ್ನು ಹಾಕಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಕೆ.ಆರ್.ಪೇಟೆ ಪಟ್ಟಣದ ಜನತೆ ಜಿಲ್ಲಾ ಮಟ್ಟದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಕುಂಭಮೇಳದ ಯಶಸ್ಸಿಗೆ ಕೈಜೋಡಿಸಬೇಕು. ಮಹಾಕುಂಭಮೇಳ ಕಾರ್ಯಕ್ರಮದಲ್ಲಿ ಕನಿಷ್ಠ 6 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, 4 ದಿನಗಳ ಕಾಲ ನಡೆಯಲಿರುವ ಮಹಾ ದಾಸೋಹಕ್ಕೆ ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ, ಅಡುಗೆ ಎಣ್ಣೆ, ನಂದಿನಿ ತುಪ್ಪ ಸೇರಿದಂತೆ ಅವಶ್ಯಕ ವಸ್ತುಗಳನ್ನು ಉದಾರವಾಗಿ ದಾನ ಮಾಡಬೇಕು ಎಂದು ಮನವಿ ಮಾಡಿದರು.

ಆಳ್ವಾಸ್ ಜಾನಪದ ಉತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ಖ್ಯಾತಿಯ ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಜಾನಪದ ಉತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದ್ದು, 3 ಸಾವಿರ ಕಲಾವಿದರು ಹಾಗೂ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ತಹಶೀಲ್ದಾರ್ ಎಂ.ವಿ.ರೂಪ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಪುರಸಭೆ ಮುಖ್ಯಾಧಿಕಾರಿ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ