Wednesday, September 18, 2024

ಪ್ರಾಯೋಗಿಕ ಆವೃತ್ತಿ

ಬಡ ಪ್ರತಿಭಾವಂತ ಮಕ್ಕಳ ಕೌಶಲ್ಯ ವೃದ್ದಿಗೆ ಒಡಂಬಡಿಕೆ: ಡಾ. ಸುಧಾಕರ್

ರಾಜ್ಯದ ಸರ್ಕಾರಿ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಒಳಪಡುವ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಬಡ ಪ್ರತಿಭಾವಂತ ಮಕ್ಕಳ ಕೌಶಲ್ಯ ವೃದ್ದಿಸಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಮೊದಲ ಹಾಗೂ ಎರಡನೇ ವರ್ಷದ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣ ಬೋಧಿಸಿ ಶ್ರದ್ದೆ ಹಾಗೂ ಶ್ರಮವಹಿಸಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲೇ ಉದ್ಯೋಗ ದೊರಕಿಸುವ ಚಿಂತನೆ ರಾಜ್ಯ ಸರ್ಕಾರಕ್ಕಿದ್ದು, ಈ ನಿಟ್ಟಿನಲ್ಲಿ ಟಯೋಟೋ ಕಿಲೋಸ್ಕರ್, ಟಾಟಾ, ಇನ್ಫೋಸಿಸ್ ಮತ್ತಿತರರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ವಿಶ್ವದ ಜಾಗತಿಕ ಸ್ಪರ್ಧೆಗೆ ನಮ್ಮ ಪದವೀಧರರನ್ನು ಸಜ್ಜುಗೊಳಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರ ಅನುಷ್ಟಾನಗೊಳಿಸಿದೆ ಎಂದು ತಿಳಿಸಿದರು.

ಕುಲಪತಿಗೆ ಕಾರ್ಯಕ್ಕೆ ಸಚಿವರ ಪ್ರಶಂಸೆ

ನೂತನ ವಿಶ್ವವಿದ್ಯಾನಿಲಯ ಆರಂಭದ ವರ್ಷಗಳಲ್ಲಿ ಎದುರಾಗುವ ಸಂಕಷ್ಟಗಳ ಕ್ಲಿಷ್ಟ ಸ್ಥಿತಿಯಲ್ಲೂ ಶಕ್ತಿಮೀರಿ ಮಂಡ್ಯ ವಿಶ್ವವಿದ್ಯಾನಿಲಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಕುಲಪತಿ ಡಾ.ಪುಟ್ಟರಾಜು ಕಾರ್ಯವೈಖರಿಯನ್ನು ಉನ್ನತ ಶಿಕ್ಷಣ ಸಚಿವರು ಪ್ರಶಂಸಿಸಿದರು. 

ಹೊಸ ಶೈಕ್ಷಣಿಕ ಸಂಸ್ಥೆಯ ಆರಂಭದ ದಿನಗಳಲ್ಲ ಸಿಬ್ಬಂದಿ, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ವಿಭಜನೆ ಅಥವಾ ನಿಯುಕ್ತಿ ಸುಲಭವಾಗಿರುವುದಿಲ್ಲ, ಕಾನೂನು ತೊಡಕು ಹಾಗೂ ಭಿನ್ನರಾಗದ ಬಗ್ಗೆ ಉಪಕುಲಪತಿಗಳು ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯವೆಂದರು.

ಮೈಸೂರು ವಿ.ವಿ ಯ ಭಾಗವಾಗಿದ್ದ ಸ್ವಾಯತ್ತ ಕಾಲೇಜು ಪ್ರಸ್ತುತ ವಿ.ವಿ ಯಾಗಿ ರೂಪುಗೊಂಡಿದೆ. ಹಂತ -ಹಂತವಾಗಿ ಸೌಲಭ್ಯಗಳನ್ನು ನೀಡಿ ಮೈಸೂರು, ಬೆಂಗಳೂರು ಮತ್ತು ಧಾರಾವಾಡ ವಿಶ್ವ ವಿದ್ಯಾನಿಲಯಗಳಂತೆ ಅತ್ಯುತ್ತಮ ಶೈಕ್ಷಣಿಕ ಪ್ರಗತಿಯಲ್ಲಿ ಮಂಡ್ಯ ವಿವಿ ಅಭಿವೃದ್ದಿ ಕಾಣಲಿ ಎಂದು ಸಚಿವರು ಹಾರೈಸಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್. ರಾಜಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. 2155 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕೈಗಾರಿಕೆ, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕೌಶಲ್ಯತೆಯನ್ನು ಶಿಕ್ಷಣದ ಜೊತೆ ಕಲಿಸುವ ಗುರಿ ಹೊಂದಲಾಗಿದ್ದು, ಭವಿಷ್ಯದ ಉದ್ಯೋಗವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಆದ್ಯತಾ ವಲಯವಾಗಿ ಕೌಶಲ್ಯ ಶಿಕ್ಷಣ ನೀಡಿ ಜಾಗತಿಕ ಪ್ರಪಂಚದ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಲು ಇಂಗ್ಲೀಷ್ ಭಾಷೆಯ ನೈಪುಣ್ಯತೆ ಬಿತ್ತಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ರಾಜ್ಯದ 45 ಸರ್ಕಾರಿ ಕಾಲೇಜುಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲು 1400 ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ರಿಲಯನ್ಸ್, ಟಾಟಾ, ಕ್ರೋಮ ಔಟ್ ಲೆಟ್ ಗಳಲ್ಲಿ ಉದ್ಯೋಗ ಒದಗಿಸುವ ಚಿಂತನೆ ಸಾಗಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ 7 ಸಾವಿರದಿಂದ 20 ಸಾವಿರದವರೆಗೆ ಸ್ಟೇ ಫಂಡ್ ನೀಡಿ ಉದ್ಯೋಗದಾತರಾಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಒಂದು ವರ್ಷದ ಆಳ್ವಿಕೆಯಲ್ಲಿ ಕಲಿಕೆ ಜತೆ ಕೌಶಲ್ಯ ವೃದ್ದಿಸಲು ಹೆಚ್ಚು ಆಸಕ್ತಿ ತೋರಲಾಗಿದೆ. ಸೆಂಟರ್ ಫಾರ್ ಎಕ್ಸಲೆನ್ಸ್ ಯೋಜನೆ ಜಾರಿಗೊಳಿಸಿ ಕೈಗಾರಿಕಾ ಸ್ನೇಹಿ ಪಠ್ಯದ ಬೋಧನೆಗೆ ಉನ್ನತ ಶಿಕ್ಷಣ ಇಲಾಖೆ ಒತ್ತು ನೀಡಿದೆ ಎಂದರು.

ಬ್ರಿಟಿಷ್ ಕೌನ್ಸಿಲ್ ಜೊತೆಗಿನ ಒಪ್ಪಂದದಿಂದ ಪ್ರತಿವರ್ಷ 13 ವಿದ್ಯಾರ್ಥಿಗಳನ್ನು ಲಂಡನ್ನ ದಂಡಿ ವಿಶ್ವವಿದ್ಯಾನಿಲಯದ ಅಧ್ಯಯನ ಪ್ರವಾಸಕ್ಕೆ ಅನುವು ಮಾಡಲಾಗಿದ್ದು, ಉಪನ್ಯಾಸಕರು, ಪ್ರಾಧ್ಯಾಪಕರಿಗೆ ತರಬೇತಿಯೂ ದೊರೆಯುತ್ತಿದೆ ಎಂದರು.

ನವೆಂಬರ್ ತಿಂಗಳಲ್ಲಿ 30 ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿ ಬುದ್ದಿಮತ್ತೆ ವೃದ್ದಿಸುವ ಮತ್ತು ಬ್ರಿಟಿಷ್ ಗ್ರಂಥಾಲಯದ ಮಾಹಿತಿ ಪಡೆಯುವ ಡಿಜಿಟಲ್ ಲೈಬ್ರರಿ ಯೋಜನೆಗೆ ಸರ್ಕಾರ ನೆರವು ನೀಡಿದ್ದು, ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಭವಿಷ್ಯದ ಹೆಜ್ಜೆಯಲ್ಲಿ ಎದುರಾಗುವ ಆತಂಕದಿಂದ ಧೃತಿಗೆಡದೇ ನಿರಂತರ ಪ್ರಯತ್ನ, ಶ್ರಮವಹಿಸಿ ಯಶಸ್ಸುಗೊಳಿಸಲು ಸಜ್ಜುಗೊಳಿಸಲಾಗುವುದೆಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ವಿವಿಯ ಸಿಂಡಿಕೇಟ್ ಸದಸ್ಯ ಮಧು ಮಾದೇಗೌಡ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್, ವಿ, ಕುಲಪತಿ ಪ್ರೊ.ಪುಟ್ಟರಾಜು, ಕುಲ ಸಚಿವರಾದ ಪ್ರೊ. ಕೆ. ಯೋಗನರಸಿಂಹಚಾರಿ, ಡಾ.ಸುರೇಶ್ ಎಸ್.ಎಲ್ ಇತರರು ಉಪಸ್ಥಿತದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!