Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಣಪತಿ ಮೆರವಣಿಗೆ ವೇಳೆ ಕೋಮು ಸಂಘರ್ಷ: ನಾಗಮಂಗಲ ಉದ್ವಿಗ್ನ

ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ವೇಳೆ ಹಿಂದೂ- ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಇಡೀ ಪಟ್ಟಣ ಉದ್ವಿಗ್ನವಾಗಿದೆ.

 

ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನ ಗಣಪತಿ ಉತ್ಸವ ಮೆರವಣಿಗೆಯು ಮೈಸೂರು ರಸ್ತೆಗೆ ಆಗಮಿಸಿದ ಸಂದರ್ಭದಲ್ಲಿ ಮುಸ್ಲಿಂ ಮತ್ತು ಹಿಂದೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ತಾರಕ್ಕೇರಿದೆ. ಈ ವೇಳೆ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಆದರೂ ಎರಡು ಗುಂಪುಗಳು ಚದುರದೆ, ಮುಸ್ಲಿಂ ಯುವಕರು ಮೈಸೂರು ರಸ್ತೆಯಲ್ಲಿ ನಿಂತು ಅಲ್ಲಾ..ಹೋ..ಅಕ್ಬರ್ ಎಂದು ಕೂಗುತ್ತಿದ್ದರೆ, ಇತ್ತ ಹಿಂದೂ ಯುವಕರು ಜೈಶ್ರೀರಾಮ್ ಎಂದು ಕೂಗುತ್ತಿದ್ದರು.

ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದ ಕಾರಣ ಗಲಾಟೆಯನ್ನು ಹತೋಟಿಗೆ ತರಲು ವಿಫಲರಾದರು. ಬಾಟ್ಲು, ಕಲ್ಲು ತೂರಾಟದಿಂದ ಜನಸಾಮಾನ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು. ಎರಡು ಗುಂಪುಗಳು ಪೊಲೀಸರಿಗೂ ಹೆದರದೆ ಪರಸ್ಪರ ಕೂಗಾಟ ನಡೆಸುತ್ತಿದ್ದರು. ಇದರಿಂದಾಗಿ ಇಡೀ ಪಟ್ಟಣದ ಅಂಗಡಿ- ಮುಂಗಟ್ಟುಗಳು ಮುಚ್ಚಿ ಬಂದ್ ವಾತಾವರಣ ಸೃಷ್ಟಿಯಾಗಿತ್ತು.

ಬದರಿಕೊಪ್ಪಲಿನ ಯುವಕರು ಗಣಪತಿ ವಿಗ್ರಹವನ್ನು ಪೋಲಿಸ್ ಠಾಣೆ ಮತ್ತು ಟಿ.ಮರಿಯಪ್ಪ ಸರ್ಕಲ್ ನಲ್ಲಿ ನಿಲ್ಲಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದರು. ಪೋಲಿಸರು ಎರಡು ಗುಂಪುಗಳನ್ನು ಚದುರಿಸಲು ಹಲವು ಬಾರಿ ಲಾಠಿ ಪ್ರಹಾರ ನಡೆಸಿದರು.

ರಾತ್ರಿ 9.30 ಗಂಟೆಯಾದರೂ ಎರಡು ಗುಂಪುಗಳ ಘರ್ಷಣೆಯನ್ನು ತಡೆಯುವಲ್ಲಿ ಪೋಲಿಸರು ಹರಸಾಹಸ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಘಟನೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಘಟನೆ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಚ್ಚಿನ ಪೊಲೀಸರು ಆಗಮಿಸಿದರೂ ಗಲಾಟೆ ಹತೋಟಿಗೆ ಬಂದಿಲ್ಲ. ಕತ್ತಲೆಯಾಗಿರುವುದರಿಂದ ಹಿಂದೂ ಮತ್ತು ಮುಸ್ಲಿಂ ಯುವಕರು ಕಲ್ಲು ಮತ್ತು ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಇದರಿಂದಾಗಿ ಮಂಡ್ಯ ರಸ್ತೆ ಮತ್ತು ಮೈಸೂರು ರಸ್ತೆ , ತುಮಕೂರು ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!