Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿರೋಧದ ಪತ್ರಿಭಟನೆ : ಅತ್ಯಾಚಾರಿಗಳ ಪ್ರತಿಕೃತಿ ದಹಿಸಿ ಆಕ್ರೋಶ

ಅತ್ಯಾಚಾರ ವಿರೋಧಿ ಆಂದೋಲನ ಮತ್ತು ಮಹಿಳಾ ಮುನ್ನಡೆ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಪ್ರತಿರೋಧದ ಪ್ರತಿಭಟನೆ ನಡೆಸಿ, ಅತ್ಯಾಚಾರಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

ಹೆಣ್ಣು ಮಕ್ಕಳ ಅತ್ಯಾಚಾರಿಗಳ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ನಗಾರಿ ಬಾರಿಸುವ ಮೂಲಕ ಮಳವಳ್ಳಿ ಸರ್ಕಾರಿ ಬಸ್ ಬಸ್ ನಿಲ್ದಾಣದಿಂದ ಮೆರವಣಿಗೆ ಪ್ರಾರಂಭಿಸಿ, ಅಲ್ಲಿಂದ ಮೆರವಣಿಗೆ ಅತ್ಯಾಚಾರಿಗಳ ಪ್ರತಿಕತಿಯ ಚಟ್ಟದ ಮೆರವಣಿಗೆಯನ್ನು ಹೆಣ್ಣು ಮಕ್ಕಳೆ ಹೊತ್ತು ನಗಾರಿ ಬಾರಿಸಿ ರಾಜಕುಮಾರ ರಸ್ತೆಯ ಮೂಲಕ ಮೆರವಣಿಗೆ ಹಾದು ಹೋಗಿ ಕೊಳ್ಳೇಗಾಲ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳು ಹೆಚ್ಚಾಗುತ್ತಿದ್ದು, ನ್ಯಾಷನಲ್ ಕ್ರೈಂ ಬ್ಯೂರೋ ಪ್ರಕಾರ ಈ ಹಿಂದಿಗಿಂತಲೂ ಶೇಕಡ 18 ರಷ್ಟು ಮಹಿಳಾ ದೌರ್ಜನ್ಯಗಳು ಹೆಚ್ಚಾಗಿವೆ. ಹಲವು ಬಗೆಯ ಹಿಂಸೆಗಳಿಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಅಲ್ಲದೆ ತಮ್ಮ ಬಾಳ ಸಂಗಾತಿಗಳನ್ನೇ ತುಂಬಾ ವಿಕೃತವಾಗಿ ಕೊಚ್ಚಿ ಕೊಲೆ ಮಾಡಿ, 36, 46 ತುಂಡುಗಳನ್ನಾಗಿ ಮಾಡಿ, ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟು ಯಾವುದೋ ಕಾಡಿನಲ್ಲಿ ನಾಯಿ ನರಿಗೆ ಬಿಸಾಕುವಂತಹ ವಿಕೃತ ಮನಸ್ಥಿತಿ ಈ ದಿನ ಬೆಳೆಯುತ್ತಿರುವಂತಹದ್ದು ಬಹಳ ಆಘಾತಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿನ ಬೆಳಗಾದರೆ ದುಡಿಯುವ ಸ್ಥಳಗಳಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಎಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಹ ವಾತಾವರಣ ನಿರ್ಮಾಣವಾಗಿರುವಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಒಂದು ಸಂತೋಷ ಮತ್ತು ಸಂಭ್ರಮದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವ ಕಾಲಘಟ್ಟದಲ್ಲಿ ಉಳಿದಿಲ್ಲ, ಆ ಕಾರಣಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಂದು ಪ್ರತಿರೋಧದ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಅತ್ಯಾಚಾರ ವಿರೋಧಿ ಆಂದೋಲನದ ಸದಸ್ಯರಾದ ಮಳವಳ್ಳಿಯ ಕಿರಣ ಮಾತನಾಡಿ, ದಿನೇ ದಿನೇ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದೆ, ಇವತ್ತಿನ ರಾಜಕೀಯ ಪಕ್ಷಗಳೇ, ಅತ್ಯಾಚಾರಿಗಳನ್ನು ಬೆಂಬಲಿಸುತ್ತಿರುವಂತದ್ದು ಮತ್ತು ಅವರಿಗೆ ಹೂವಿನ ಹಾರ ಹಾಕಿ ಸಿಹಿ ತಿನಿಸುವ ಮುಖಾಂತರ ಸ್ವಾಗತಿಸಿರುವಂತದ್ದು ಬಹಳ ಒಂದು ಆತಂಕಕಾರಿಯಾದಂತಹ ಘಟನೆ ಕಳವಳ ವ್ಯಕ್ತಪಡಿಸಿದರು.

ಮಠ ಮಂದಿರಗಳಲ್ಲಿ ಸ್ವಾಮೀಜಿಗಳು ಅಂತ ಅನಿಸಿಕೊಂಡಿರುವವರು ಕೂಡ ಹೆಣ್ಣು ಮಕ್ಕಳನ್ನು ತಮ್ಮ ಕಾಮದ ತೃಷೆಗೆ ಬಳಸಿಕೊಳ್ಳುತ್ತಿರುವಂತಹ ವಾತಾವರಣವನ್ನು ನಾವು ಚಿತ್ರದುರ್ಗದ ಮುರುಗ ಮಠದ ಪ್ರಕರಣವನ್ನು ಗಮನಿಸಿದಾಗ ನೋಡಬಹುದು. ಇಂತಹ ಕಳ್ಳ ಕಾಕ ಸ್ವಾಮಿಗಳ ಪರ, ಬಿಲ್ಕಿಸ್ ಬಾನೊ ಪ್ರಕರಣದ ಘೋರ ಅತ್ಯಾಚಾರ ಮತ್ತು ಕೊಲೆಗಡುಕರ ಪರವಾಗಿ ಇವತ್ತಿನ ಸರ್ಕಾರ ನಿಲ್ಲುತಿದೆ ಎಂದಾದರೆ ನಮ್ಮ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇನ್ನೆಲ್ಲಿ ಎಂದು ಪ್ರಶ್ನಿಸಿದರು.

ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಮಾತನಾಡಿ, ಇವತ್ತು ಬಹಿರಂಗವಾಗಿ ಹೆಣ್ಣು ಮಕ್ಕಳು ಅತ್ಯಾಚಾರಿಗಳ ಪ್ರತಿಕೃತಿಯನ್ನು ಮಾಡಿ ಪ್ರತಿಯೊಬ್ಬ ಅತ್ಯಾಚಾರಿಗಳ ಫೋಟೋವನ್ನು ಹಾಕಿ ಪ್ರತಿಕೃತಿಗೆ ಬೆಂಕಿಯನ್ನು ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸುವಂತಹ ಮಟ್ಟಕ್ಕೆ ಇವತ್ತಿನ ಸಮಾಜ ನಮ್ಮ ಹೆಣ್ಣು ಮಕ್ಕಳನ್ನು ತಂದು ನಿಲ್ಲಿಸಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಎಂಬುದು ಇಲ್ಲದಂತಾಗಿದೆ. ಇವತ್ತಿನ ಕಾನೂನುಗಳು ಕೂಡ ಅತ್ಯಾಚಾರಿಗಳ ಪರವಾಗಿದ್ದು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತಿರುವಂತಹ ಸನ್ನಿವೇಶದಲ್ಲಿ, ಇವತ್ತಿನ ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆ ತಲೆತಗ್ಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಕೃಷ್ಣ ಎಂ.ವಿ., ಕರ್ನಾಟಕ ಜನಶಕ್ತಿಯ ಮುಖಂಡ ನಗರಗೆರೆ ಜಗದೀಶ್, ಕೂಲಿ ಕಾರ್ಮಿಕ ಸಂಘಟನೆಯ ಮುಖಂಡ ಶಿವಕುಮಾರ್, ರೈತ ಮುಖಂಡ ಶಿವಲಿಂಗಣ್ಣ, ವಿಮೋಚನಾ ಮಹಿಳಾ ಸಂಘಟನೆ ಇಂಪನಾ, ಮಹಿಳಾ ಮುನ್ನಡೆಯ ಜ್ಯೋತಿ ,ಶಿಲ್ಪ, ಮಮತ, ಸೌಮ್ಯ, ಪಂಕಜ, ಸರೋಜ, ಕರ್ನಾಟಕ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಉದಯ್, ನಿತ್ಯಾ, ಪೂಜಾ, ನಂದಿತ ಮುಂತಾದವರು ಭಾಗವಹಿದ್ದರು. ಹಲವಾರು ಪ್ರಗತಿಪರ ಸಂಘಟನೆಯ ಮುಖಂಡರು, ಪ್ರಗತಿಪರರು, ಚಿಂತಕರು ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!