Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತನ ಬಲಿ ಪಡೆದ ಎತ್ತಿನಗಾಡಿ ಓಟದ ಸ್ಪರ್ಧೆ : ಆಯೋಜಕರು ಪರಾರಿ


  • ಕೀಲಾರ ಗ್ರಾಮದ ನಾಗರಾಜು ಎಂಬ ರೈತ ಎತ್ತಿನಗಾಡಿಗೆ ಬಲಿ

  • ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದ ದುರ್ಘಟನೆ

     

ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಯುತ್ತಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿ ಹರಿದು ರೈತಸಂಘದ ಕಾರ್ಯಕರ್ತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಇಂದು ಸಂಜೆ 4 ಗಂಟೆ ಸುಮಾರಿಗೆ ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದಿದೆ.

ರೈತಸಂಘದ ಕಾರ್ಯಕರ್ತ ಹಾಗೂ ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯ ಫೀಲ್ಡ್ ಎಕ್ಸಿಕ್ಯುಟಿವ್ ಆಗಿದ್ದ
ಕೀಲಾರ ಗ್ರಾಮದ ನಾಗರಾಜು(55)ಎಂಬುವರು ಎತ್ತಿನಗಾಡಿ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರೆ, ಹುಲಿವಾನ ಗ್ರಾಮದ ಹೃತಿಕ್ (10) ಬಾಲಕ ಗಾಯಗೊಂಡು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈತನ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಚಿಕ್ಕಮಂಡ್ಯ ಗ್ರಾಮದ ಬಳಿ ಕೀಲಾರ ಮಧು, ಚಿಕ್ಕಮಂಡ್ಯದ ನರಸಿಂಹ, ರಾಜಪ್ಪ ಹಾಗೂ ಆನಂದ ಎಂಬುವರು ಸೇರಿ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಗೆ ಸ್ಥಳೀಯವಾಗಿ ಪಂಚಾಯಿತಿಯಿಂದ ಅಧಿಕೃತವಾಗಿ ಪರವಾನಗಿ ಪಡೆದಿರಲಿಲ್ಲ. ಕಂದಾಯ ಅಧಿಕಾರಿ ಕೂಡ ಪರವಾನಗಿ ನೀಡಿರಲಿಲ್ಲ. ಈ ಬಗ್ಗೆ ಅವರು ಜಿಲ್ಲಾಧಿಕಾರಿ ಅವರಿಗೂ ವರದಿ ನೀಡಿದ್ದರು. ಆದರೂ ಎತ್ತಿನಗಾಡಿ ಓಟದ ಸ್ಪರ್ಧೆ ಶನಿವಾರ ನಡೆದಿತ್ತು. ಭಾನುವಾರ ಅಂತಿಮ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯೇ ದುರ್ಘಟನೆ ಕಾರಣವಾಗಿದೆ.

ಪರವಾನಗಿ ಇಲ್ಲದಿದ್ದರೂ ಆಯೋಜಕರಾದ ಕೀಲಾರ ಮಧು, ಚಿಕ್ಕಮಂಡ್ಯದ ನರಸಿಂಹ, ಆನಂದ ಹಾಗೂ ರಾಜಪ್ಪ ಎಂಬುವವರು ಸುಮಾರು ಒಂದು ಜೊತೆ ಎತ್ತಿಗೆ 4,000 ರೂ. ಶುಲ್ಕ ನಿಗದಿಪಡಿಸಿ ಸ್ಪರ್ಧೆ ಆಯೋಜಿಸಿದ್ದರು. ಸ್ಪರ್ಧೆಗೆ ರಾಜ್ಯದ ನಾನಾ ಕಡೆಗಳಿಂದ ಸುಮಾರು 84 ಜೊತೆ ಎತ್ತುಗಳು ಬಂದಿದ್ದವು.

ಪ್ರತಿ ಜೋಡಿ ಎತ್ತುಗಳ ಮಾಲೀಕರಿಂದ ಸ್ಪರ್ಧೆಯ ಪ್ರವೇಶಕ್ಕೆ ಎಂದು ನಾಲ್ಕು ಸಾವಿರ ರೂಗಳನ್ನು ಸಂಗ್ರಹ ಮಾಡಲಾಗಿತ್ತು. ಪ್ರವೇಶ ಶುಲ್ಕದಿಂದಲೇ 3.36 ಲಕ್ಷ ಹಣ ಸಂಗ್ರಹಿಸಲಾಗಿತ್ತು.ಅಲ್ಲದೆ ಪ್ರಾಯೋಜಕರು ಮತ್ತು ಸ್ಥಳೀಯ ರಾಜಕಾರಣಿಗಳಿಂದಲೂ ಓಟದ ಸ್ಪರ್ಧೆಗೆ ಹಣ ಸಂಗ್ರಹಿಸಿದ್ದರು. ಶನಿವಾರ ಒಂದು ಸುತ್ತಿನ ಸ್ಪರ್ಧೆ ನಡೆದು ಮುಕ್ತಾಯಗೊಂಡಿತ್ತು. ಭಾನುವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಈ ದುರ್ಘಟನೆ ನಡೆದಿದೆ. ರಭಸವಾಗಿ ಬಂದ ಎತ್ತಿನಗಾಡಿ ಜನಸ್ತೋಮದ ಕಡೆಗೆ ನುಗ್ಗಿತು. ಆಗ ಜನರ ಗುಂಪಿನಲ್ಲಿದ್ದ ನಾಗರಾಜು ಎತ್ತಿನಗಾಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆ ಹೃತಿಕ್ ಎಂಬ ಹತ್ತು ವರ್ಷ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.

ಆಯೋಜಕರೇ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣ

ರೈತಸಂಘದ ಕಾರ್ಯಕರ್ತ ನಾಗರಾಜು ಸಾವನ್ನಪ್ಪಲು ಹಾಗೂ ಪುಟ್ಟ ಬಾಲಕ ಹೃತಿಕ್ ತೀವ್ರವಾಗಿ ಗಾಯಗೊಳ್ಳಲು ಆಯೋಜಕರೇ ನೇರ ಕಾರಣವಾಗಿದ್ದಾರೆ. ಪರವಾನಗಿ ನೀಡದಿದ್ದರೂ ಅನಧಿಕೃತವಾಗಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಿದ್ದಲ್ಲದೆ, ಸ್ಪರ್ಧೆ ನಡೆಯುವ ಅಂಕಣದ ಸುತ್ತಲೂ ಬ್ಯಾರಿಕೇಡ್ ಹಾಕಿರಲಿಲ್ಲ. ಕನಿಷ್ಠ ಮರಗಳನ್ನು ಹಾಕಿ ಜನರು ಅದರ ಹಿಂದೆ ನಿಲ್ಲುವುದಕ್ಕೆ ಅವಕಾಶ ಮಾಡಿದ್ದರೆ, ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ‌ ಎಂಬುದು ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಅವರು ತಮ್ಮ ಇಲಾಖೆಯ ಸಿಬ್ಬಂದಿಗಳ ಮೂಲಕ ಕೂಡಲೇ ಆಯೋಜಕರನ್ನು ಬಂಧಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ರೈತ ನಾಗರಾಜು ಸಾವಿಗೆ ಕಾರಣರಾದ ಆಯೋಜಕರಿಂದಲೇ ಅವರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆಯೋಜಕರು ಪರಾರಿ

ಈ ದುರ್ಘಟನೆ ನಡೆಯುತ್ತಿದ್ದಂತೆ ಆಯೋಜಕರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿತರಿಸಲು ತಂದಿದ್ದ ಆರು ಬೈಕ್ ಗಳೊಂದಿಗೆ ಪರಾರಿಯಾಗಿದ್ದಾರೆ. ಮುಂಜಾಗ್ರತೆ ತೆಗೆದುಕೊಂಡು ಓಟದ ಸ್ಪರ್ಧೆ ನಡೆಸಿದ್ದರೆ, ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ, ಇದಕ್ಕೆ ಆಯೋಜಕರೇ ನೇರ ಹೊಣೆ, ಅವರನ್ನು ಬಂಧಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!