Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮೆರಿಕಾ ಪ್ರವಾಸಕ್ಕೆ ತೆರಳಿದ ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ಭಾರತೀಯ ಮೂಲದ ನಿವಾಸಿಗಳು ಅದ್ದೂರಿ ಸ್ವಾಗತ ಕೋರಿದರು. ಭಾರತೀಯ ಅಮೆರಿಕನ್ ಸಮುದಾಯ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಸದಸ್ಯರು ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು.

ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಗೆ ಅಮೆರಿಕದಲ್ಲಿ ಭವ್ಯ ಸ್ವಾಗತ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ. ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರಕ್ಕೆ ಆಗಮಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ತಮ್ಮ ಭೇಟಿಯ ವಿವರ ದಾಖಲಿಸಿದ್ದಾರೆ.

ತಮ್ಮ ಈ ಭೇಟಿಯ ವೇಳೆ ಭಾರತ – ಅಮೆರಿಕ ಎರಡೂ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಅರ್ಥ ಪೂರ್ಣ ಚರ್ಚೆ ಮತ್ತು ಒಳನೋಟವುಳ್ಳ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ಅಮೆರಿಕಗೆ ಭೇಟಿ ನೀಡುತ್ತಿದ್ದಾರೆ. ಲೋಕಸಭಾ ವಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿ, ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ಸೆಪ್ಟೆಂಬರ್ 8 ರಂದು ಇರಲಿದ್ದಾರೆ. ಬಳಿಕ ಸೆಪ್ಟೆಂಬರ್ 9 ಹಾಗೂ 10 ರಂದು ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ರಾಹುಲ್ ಗಾಂಧಿ ಇರಲಿದ್ದಾರೆ.

ರಾಹುಲ್ ಗಾಂಧಿ ಅವರ ಅಮೆರಿಕ ಭೇಟಿ ಕುರಿತಾಗಿ ಬರೆದುಕೊಂಡಿದ್ದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೊಡಾ, ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಅಮೆರಿಕದಲ್ಲಿನ ಭಾರತೀಯ ಸಮುದಾಯ, ಎನ್‌ಆರ್‌ಐಗಳು, ತಾಂತ್ರಿಕ ತಜ್ಞರು, ಉದ್ಯಮ ಪ್ರಮುಖರು, ವಿದ್ಯಾರ್ಥಿಗಳು, ಮಾಧ್ಯಮ ಸಮೂಹ ಹಾಗೂ ಅಮೆರಿಕದಲ್ಲಿನ ರಾಜಕಾರಣಿಗಳೂ ಕೂಡಾ ಕುತೂಹಲದಿಂದ ಎದುರು ನೋಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!