Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಡಾ ಹೆಸರಿನಲ್ಲಿ ಪಾದಯಾತ್ರೆ| ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ: ಸಚಿವ ರಾಜಣ್ಣ

ಬಿಜೆಪಿಯವರು ಮುಡಾ ಆರೋಪ ಮಾಡಿ ಸಿದ್ದರಾಮಯ್ಯನವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ. ಇದೊಂದು ಕೇಂದ್ರ ಸರ್ಕಾರದ ಯೋಜಿತ ಮತ್ತು ಪ್ರಯೋಜಿತ ಹುನ್ನಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿ ಎಂ ಸಿದ್ದರಾಮಯ್ಯನವರ ಮೇಲೆ ಮಾಡುವ ಆರೋಪ ಇಡೀ ಅಹಿಂದ ವರ್ಗದ ಮೇಲೆ ಆರೋಪ‌ ಮಾಡಿದಂತೆ. ಹಾಗಾಗಿ ಬಿಜೆಪಿಯವರು ಪಾದಯಾತ್ರೆ ಮಾಡಿದರೆ ಪಕ್ಷತೀತವಾಗಿ ಅಹಿಂದ ಸಮುದಾಯದವರು ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದರು.

“ಸಿದ್ದರಾಮಯ್ಯನವರು ಹಿಂದುಳಿದ ವರ್ಗದ ನಾಯಕ. ದೇವರಾಜ ಅರಸು ಬಳಿಕ ಉತ್ತಮ ಆಡಳಿತ ನೀಡುತ್ತಿರುವ ನಾಯಕ. ಹಿಂದುಳಿದ ವರ್ಗದವರು ಅಧಿಕಾರಕ್ಕೆ ಬಂದರೆ ಮುಂದುವರಿದವರು ದೌರ್ಜನ್ಯ ನಡೆಸುವಂತ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯನವರನ್ನು ವಿರೋಧಿಸಿ ಪಾದಯಾತ್ರೆ ಮಾತನಾಡುತ್ತಿರುವುದು ಅಹಿಂದ ವರ್ಗದ ವಿರುದ್ದ ಮಾಡುತ್ತಿರುವ ಪಿತೂರಿ. ಹೀಗೆ ಮುಂದುವರಿದರೆ, ತುಮಕೂರು ಜಿಲ್ಲೆಯಲ್ಲಿ ಬೃಹತ್ ಹೋರಾಟ ಮಾಡುವ ಚಿಂತನೆ ಇದೆ. ಸುಳ್ಳನ್ನು ಸತ್ಯ ಎಂದು ನಿರೂಪಣೆ ಮಾಡುವುದೇ ಬಿಜೆಪಿ ಪಾದಯಾತ್ರೆಯ ಉದ್ದೇಶ” ಎಂದು ಆರೋಪಿಸಿದರು.

“ಮುಡಾದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುತ್ತಿರುವ ವಿರೋಧ ಪಕ್ಷದವರು ಬೆಂಗಳೂರಿನಲ್ಲಿದ್ದುಕೊಂಡು ಮಂಡ್ಯ, ಶ್ರೀರಂಗಪಟ್ಟಣ, ಮೈಸೂರಿನಲ್ಲಿ ವಾಸವಿದ್ದೇವೆ ಎಂದು ಸುಳ್ಳು ಹೇಳಿ ಮುಡಾದಿಂದ ನಿವೇಶನ ಪಡೆದಿದ್ದಾರೆ. ಪಡೆದಿರುವ ನಿವೇಶನಗಳನ್ನು ಮೊದಲು ಮೂಡಾಗೆ ಹಿಂದಿರುಗಿಸಿ ಮಾತನಾಡಲಿ” ಎಂದು ಸಚಿವ ರಾಜಣ್ಣ ಸವಾಲೆಸೆದರು.

“ಮುಡಾದಲ್ಲಿ ಹೆಚ್ಚಿನ ಫಲಾನುಭವಿಗಳು ವಿರೋಧ ಪಕ್ಷದಲ್ಲಿ ಇರುವವರೇ ಆಗಿದ್ದಾರೆ. ಬಿಜೆಪಿಯವರ ಮಾತು ‘ತಾನು ಕಳ್ಳ ಪರರ ನಂಬ’ ಎಂಬಂತಿದೆ. 17 ಮಾರ್ಚ್ 2011ರಂದು ವಿಧಾನ ಪರಿಷತ್‌ನಲ್ಲಿ ಯಡಿಯೂರಪ್ಪ‌ನವರು ಯಾರೆಲ್ಲ ನಿವೇಶನ ಖರೀದಿಸಿದ್ದಾರೆ, ಯಾರೆಲ್ಲಾ ಭಾಗಿಯಾಗಿದ್ದಾರೆ ಎಲ್ಲವನ್ನೂ ವಿಧಾನ ಪರಿಷತ್ ನಡವಳಿಕೆಯಲ್ಲಿ ತಿಳಿಸಿದ್ದಾರೆ. ಮುಡಾದಲ್ಲಿ ಹೆಚ್ಚು ಜನ ಫಲಾನುಭವಿಗಳು ವಿರೋಧ ಪಕ್ಷದವರೆ ಆಗಿರುವುದು ಇದರಿಂದ ಬಹಿರಂಗವಾಗಿದೆ” ಎಂದರು.

“ಬಿಜೆಪಿ-ಜೆಡಿಎಸ್‌ನವರು ನಕಲಿ ಮಾಹಿತಿ‌ ನೀಡಿ ಮುಡಾ ನಿವೇಶನ ಖರಿದೀಸಿದ್ದಾರೆ. ಮೊದಲು ಅವರು ಖರೀದಿಸಿರುವ ಸೈಟುಗಳನ್ನು ವಾಪಸ್ ನೀಡಬೇಕು” ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!