ಮದ್ದೂರು ಕ್ಷೇತ್ರದಲ್ಲಿ ನನ್ನನ್ನು ಹಿಂದಿಕ್ಕಲು ಮತದಾರರಿಗೆ ಆಮಿಷವೊಡ್ಡಿ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಆಮಿಷಗಳಿಗೆ ಕ್ಷೇತ್ರದ ಮತದಾರರು ಬಲಿಯಾಗಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಯಲಾದಹಳ್ಳಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು 1999 ರಲ್ಲಿ ರಾಜಕೀಯ ಪ್ರವೇಶ ಮಾಡಿದ ದಿನಕ್ಕೂ ಇಂದಿನ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ. ಇಂದು ಕ್ಷೇತ್ರದಲ್ಲಿ ಯುವಕರನ್ನು ಮತ್ತು ಮತದಾರರನ್ನು ಹಣ, ಮದ್ಯ, ಉಡುಗೊರೆಯಂತಹ ಆಮಿಷಗಳನ್ನು ಒಡ್ಡಿ ದಾರಿ ತಪ್ಪಿಸುವಂತಹ ಕೆಲಸ ಮಾಡಿದರೂ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಮಾತ್ರ ಮರುಳು ಮಾಡಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದ ಹಾಗೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ ನೋಡಿದ್ದು,ಯಾವುದೇ ಆಮಿಷಗಳಿಗೆ ಜನರು ಒಳಗಾಗುವುದಿಲ್ಲ ಎಂದರು.

ಸಮಾಜ ಸೇವೆ, ಹುಟ್ಟುಹಬ್ಬ ಹಾಗೂ ಸಂಘ ಕಟ್ಟುವ ನೆಪದಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಇದರಿಂದಾಗಿ ಗ್ರಾಮೀಣ ಜನರ ಬದುಕು ದುಸ್ತರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ಶಾಶ್ವತ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿದ್ದು, ತಮ್ಮಗಳ ಸಹಕಾರ ಅತ್ಯಗತ್ಯವೆಂದು ತಿಳಿಸಿದರು.
ಕ್ಷೇತ್ರದ ಜನರು ಅಪಪ್ರಚಾರಕ್ಕೆ ಕಿವಿಕೊಡಬಾರದು. ಮದ್ದೂರು ಕ್ಷೇತ್ರದ ಅಭಿವೃದ್ದಿಯೇ ನನ್ನ ಮುಖ್ಯ ಆದ್ಯತೆಯಾಗಿದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಇಷ್ಟು ದಿನ ಶಾಶ್ವತವಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಗ್ರಾಮದಲ್ಲಿ ಇರಬಹುದು. ಅವುಗಳನ್ನು ಬಗೆಹರಿಸಲು ಮುಂದಿನ ದಿನಗಳಲ್ಲಿ ಅವಕಾಶ ನೀಡಬೇಕೆಂದು ಕೋರಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ನಾನು ಹಲವಾರು ಬಾರಿ ಬಂದಿದ್ದೇನೆ. ಗ್ರಾಮಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ. ನಾನು ಬರುವಾಗ ತಮಟೆ, ನಗಾರಿ ಹೊಡೆಸಿಕೊಂಡು ಬಂದವನಲ್ಲ.ಕೆಲವರು ಗ್ರಾಮಕ್ಕೆ ಬರುವುದನ್ನು ಕಾರ್ಯಕರ್ತರಿಗೆ ತಿಳಿಸಿ ತಮಟೆ, ನಗಾರಿಗಳನ್ನು ಹೊಡೆಸಿಕೊಂಡು ಮೆರವಣಿಗೆ ಮಾಡಿಸಿಕೊಳ್ಳುತ್ತಾರೆ.ಆದರೆ ನನಗೆ ಅದರ ಅವಶ್ಯಕತೆ ಇಲ್ಲ ಎಂದರು.
ಇದೇ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ತಿಪರೇಗೌಡ, ಯಲಾದಹಳ್ಳಿ ವೈ.ಎಂ.ಬೋರೇಗೌಡ, ವೈ.ಡಿ.ಸಿದ್ದರಾಜು, ದ್ಯಾವೇಗೌಡ, ರಾಜೇಶ, ಲೋಕೇಶ, ಸಿದ್ದೇಗೌಡ, ಮಾಲಯ್ಯ, ಸ್ವಾಮಿ, ಸಿದ್ದೇಗೌಡ, ಸೋಮಣ್ಣ, ಸಿದ್ದರಾಜು, ಕುಮಾರ, ಮನು, ಯಲಾದಹಳ್ಳಿಯ ಮುಖಂಡರು,ಯುವ ನಾಯಕರು ಉಪಸ್ಥಿತರಿದ್ದರು.




