Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಫೆ.15ಕ್ಕೆ ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಪ್ರಗತಿಪರ ಪ್ರತಿಭಟನಾ ಧರಣಿ

ಮಂಡ್ಯ ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳಿವಿಗಾಗಿ, ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಇದೇ ಫೆಬ್ರವರಿ 15 ರಂದು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಕೆರಗೋಡು ಗುರುಪ್ರಸಾದ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗುವ ಧರಣಿ ಸತ್ಯಾಗ್ರಹ ಸಂಜೆ 4 ಗಂಟೆಯ ವರೆಗೆ ನಡೆಯಲಿದ್ದು ಈ ಧರಣಿ ಸತ್ಯಾಗ್ರಹದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಹೆಸರಾಂತ ಸಾಹಿತಿ ಚಿಂತಕ ದೇವನೂರು ಮಹಾದೇವ, ಸಾಹಿತಿ ಕಾಳೇಗೌಡ ನಾಗವಾರ, ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ನಾಡಿನ ಬುದ್ಧಿಜೀವಿಗಳು, ಗಣ್ಯರು ಹೋರಾಟಗಾರರು ಮತ್ತು ಜೀವಪರರು ಭಾಗವಹಿಸಲಿದ್ದಾರೆ. ನಾಡಿನ ಹೆಸರಾಂತ ಹಾಡುಗಾರ ಜನಾರ್ದನ್(ಜನ್ನಿ) ತಂಡದ ಕಲಾವಿದರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಮಂಡ್ಯ ಜಿಲ್ಲೆ ಆ ಮೂಲಕ ಇಡೀ ನಾಡು ಸೌಹಾರ್ದವಾಗಿ ಉಳಿಯಬೇಕು ಎಂದು ಬಯಸುವ ಎಲ್ಲಾ ಮನಸ್ಸುಗಳು ಈ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಯುಗದ ಕವಿ ಜಗದ ಕವಿ ಕುವೆಂಪು ಹೇಳಿದಂತೆ ಮಂಡ್ಯ ಜಿಲ್ಲೆಯ ಜನತೆಯ ಧರ್ಮ ದುಡಿಮೆ, ಹಸಿರೇ ಉಸಿರು. ಇಂತಹ ಪವಿತ್ರ ಧರ್ಮವನ್ನು ಪಲ್ಲಟಗೊಳಿಸುವ, ಉಸಿರು ಕಟ್ಟಿಸುವ ಘಟನಾವಳಿಗಳಿಗೆ ನಮ್ಮ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾಗಿದೆ. ಇಂತಹ ದುರಿತ ಕಾಲದಲ್ಲಿ ಶೂದ್ರನ ಮನೆಯ ಕೂಸು ಕುವೆಂಪು ನಮಗೆ ದಾರಿ ದೀಪವಾಗಿದ್ದಾರೆ ಎಂದರು.

ಧರ್ಮ, ದೇವರ ಹೆಸರಿನಲ್ಲಿ ಓಟು ಬಾಚಿಕೊಳ್ಳುವ ಕುತಂತ್ರ

ಮಂಡ್ಯ ಜಿಲ್ಲೆಯ ಜನರ ಧರ್ಮ ಉಳುಮೆ. ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು. ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಭಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ, “ಧರ್ಮ ಮತ್ತು ದೇವರನ್ನು ಓಟು ಬಾಚಿಕೊಳ್ಳುವ ಸಾಧನ ಮಾಡಿಕೊಂಡು, ಅಧಿಕಾರದ ಸಿಂಹಾಸನವೇರಲು ಜನರ ಬದುಕನ್ನು ಮೆಟ್ಟಿಲು ಮಾಡಿಕೊಳ್ಳಲಾಗುತ್ತಿದೆ.’ ಇದು ಆತಂಕಕಾರಿ ವಿಚಾರವಾಗಿದೆ ಎಂದರು.

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಸಕಲೆಂಟು ಜಾತಿಯ ಜನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಶತಮಾನಗಳಿಂದ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ತನ್ನ ಕಟ್ಟೆಮನೆಯ ನಿಷ್ಠುರ ನ್ಯಾಯಗಳಿಂದ ಪ್ರಖ್ಯಾತಿ ಪಡೆದ ಊರು ಕೆರಗೋಡು, ಆದರೆ ಇತ್ತೀಚಿನ ಧ್ವಜ ವಿವಾದವು ಕೆರಗೋಡಿನ ಶಾಂತಿ, ಸಹಬಾಳ್ವೆಯ ಬದುಕಿಗೆ ಬೆಂಕಿ ಇಟ್ಟಿದೆ. ಹಬ್ಬ ಹರಿದಿನಗಳಲ್ಲಿ ಮದುವೆ ಸಂಭ್ರಮಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಕೆರಗೋಡು ಈಗ ಆರೆಸ್ಸೆಸ್, ಬಿಜೆಪಿ ಮತ್ತು ಸಂಘ ಪರಿವಾರದ ಕೇಸರಿ ಬಣ್ಣದ ಬಾವುಟ, ತೋರಣ ಸುತ್ತಿಕೊಂಡು ಭೀಕರವಾಗಿ ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಧಾರ್ಮಿಕ ಆಚರಣೆಯಂತೆ ಕಂಡರೂ ಇದರ ಹಿಂದೆ ಜಾತಿ ಹಾಗೂ ಮತೀಯ ಗಲಭೆಗಳನ್ನು ಸೃಷ್ಟಿಸಿ ಚುನಾವಣಾ ಲಾಭ ಹೊಡೆಯುವ ಹುನ್ನಾರದಂತೆ ಕಾಣುತ್ತಿದೆ. ಇದಕ್ಕೆ ಅಂತ್ಯವಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.

ಅಲ್ಲಿಯ ರೈತನೊಬ್ಬ ಮಾಧ್ಯಮವೊಂದರಲ್ಲಿ ಹೇಳಿದಂತೆ “ಅವರ ಸಮಸ್ಯೆ ದುಬಾರಿಯಾದ ರಸಗೊಬ್ಬರ, ಬೆಲೆ ಸಿಗದ ಕಬ್ಬು, ಭತ್ತ ಸಕಾಲಕ್ಕೆ ನೆರವಿಗೆ ಬಾರದ ಸರ್ಕಾರಗಳು, ಬಾವುಟವಲ್ಲ” ಇಂತಹ ಸಮಸ್ಯೆಗಳನ್ನು ಎದುರಿಸಲು ಇರಬೇಕಾದುದು, ದುಡಿಮೆಯನ್ನೇ ಧರ್ಮವೆಂದು ಬದುಕುತ್ತಿರುವ ಸಕಲೆಂಟು ಜಾತಿಗಳ ನಡುವೆ ಪ್ರೀತಿ, ವಿಶ್ವಾಸ ಐಕ್ಯತೆ, ಆದರೆ ಬಾವುಟದ ಹೆಸರಲ್ಲಿ ಆಟವಾಡುತ್ತಿರುವವರು ರೈತರ, ಕೂಲಿಕಾರರ, ದಲಿತರ, ಮಹಿಳೆಯರ, ಯುವಜನರ ಐಕ್ಯತೆ ಮುರಿದು ಬದುಕನ್ನು ಬೀದಿಗೆಸೆದು ಅಧಿಕಾರದ ಗದ್ದುಗೆಯಲ್ಲಿ ಭದ್ರವಾಗಿರುವವರ ದಲ್ಲಾಳಿಗಳಾಗಿದ್ದಾರೆಂದು ದೂರಿದರು.

ಕೋಮುಶಕ್ತಿಗಳು ಮನೆ ಮುರುಕರು ಚುನಾವಣೆಯ ಹತ್ತಿರವಿರುವ ಸಂದರ್ಭದಲ್ಲಿ ಚುರುಕಾಗಿದ್ದಾರೆ. ಸಮಸ್ಯೆಯೇ ಅಲ್ಲದ ವಿಚಾರವನ್ನು ಬೆಳೆಸಿ ಬೆಟ್ಟ ಮಾಡಿ ಜನರನ್ನು ಆತಂಕಕ್ಕೆ ದೂಡಿದ್ದಾರೆ. ಸಂವಿಧಾನದ ಎಲ್ಲಾ ಆಶಯಗಳನ್ನು ಕಾಲಡಿ ತುಳಿದು ಕೇಕೆ ಹಾಕುತ್ತಾ ವಿಕೃತ ಸುಖ ಅನುಭವಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ನೇಗಿಲ ಧರ್ಮದ, ಉಳುಮೆ ಸಂಸ್ಕೃತಿಯ, ಹಸಿರನ್ನೇ ಉಸಿರಾಗಿಸಿಕೊಂಡ ಮಂಡ್ಯದ ಜನತೆಯ ಮುಂದೆ ಜಿಲ್ಲೆಯನ್ನು ಕುವೆಂಪುರವರ ಆಶಯದಂತೆ “ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳುವ, ಅದನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಸವಾಲಿದೆ. ಆ ಸವಾಲನ್ನು ನಾವು ಸ್ವೀಕರಿಸಲೇಬೇಕಿದೆ. ಕೆರಗೋಡಿನಲ್ಲಿ ಹತ್ತಿರುವ ನೆಲಹುಲ್ಲಿನ ಬೆಂಕಿ ಇಡೀ ಜಿಲ್ಲೆಗೆ, ನಾಡಿಗೆ ಹರಡುವ ಮುನ್ನ ಬದುಕು ಮತ್ತು ಸಾಮರಸ್ಯವನ್ನು ಬಲಿ ತೆಗೆದುಕೊಳ್ಳುವ ಮುನ್ನ ನಾವು ನೀರು ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲೆಯಲ್ಲಿ ಒಡೆದು ಆಳುವ ಕುತಂತ್ರ ರಾಜಕೀಯ ಮಾಡುತ್ತಿರುವ ಸಂಚುಕೋರರಿಗೆ ಎಚ್ಚರಿಕೆ ಕೊಟ್ಟು, ಜಿಲ್ಲೆಯ ಶಾಂತಿ, ಸೌಹಾರ್ದತೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಆಶಯ ಹೊತ್ತು ಈ ಧರಣಿ ನಡೆಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಜನತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಜೊತೆಗೂಡಿ ಈ ಧರಣಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ದಲಿತ ನಾಯಕ ಕೆರಗೋಡು ಗುರುಪ್ರಸಾದ್, ನ್ಯಾಯವಾದಿ ಲಕ್ಷ್ಮಣ್ ಚೀರನಹಳ್ಳಿ, ಪ್ರೊ. ಹುಲ್ಕೆರೆ ಮಹದೇವು,ಕುರುಬರ ಸಂಘದ ಮಾಜಿ ಅಧ್ಯಕ್ಷ ದೊಡ್ಡಯ್ಯ, ರೈತ ಸಂಘದ ಮುಖಂಡರಾದ ಶಿವಳ್ಳಿ ಚಂದ್ರು ಹಾಗೂ ವಿಜಯ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!