Friday, September 20, 2024

ಪ್ರಾಯೋಗಿಕ ಆವೃತ್ತಿ

ಅಕ್ರಮ-ಸಕ್ರಮ ಕಾಯ್ದೆಯಡಿ ಬೋರ್ ವೆಲ್ ಸಕ್ರಮಕ್ಕೆ ಆಗ್ರಹ

ಕೃಷಿ ಕಾರ್ಯದ ಅವಲಂಬನೆಗಾಗಿ ಅಕ್ರಮ-ಸಕ್ರಮ ಕಾಯ್ದೆಯಡಿ ಬೋರ್ ವೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ತಡೆ ನೀಡಿರುವ ಮೌಖಿಕ ಆದೇಶವನ್ನು ತುರ್ತಾಗಿ ರದ್ದುಗೊಳಿಸಿ, ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಕೆ.ಆರ್.ಪೇಟೆ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜು ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಂತ ಹಣದಲ್ಲಿ ಬೋರ್ ವೆಲ್ ತೆಗೆಸಿ ತಾತ್ಕಾಲಿಕ ವಿದ್ಯುತ್ ಪಡೆದಿರುವ ರೈತರು ವಿದ್ಯುತ್ ಸಕ್ರಮಕ್ಕಾಗಿ ತಲಾ 20 ಸಾವಿರ ರೂಪಾಯಿಗಳನ್ನು ಇಲಾಖೆಗೆ ಪಾವತಿಸಿ ಕಳೆದ 2-3 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಸಂಬಂಧಿಸಿದ ಕಾಮಗಾರಿ ಆರಂಭಕ್ಕೆ ಸರ್ಕಾರ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.

ಈ ಸಂಬಂಧ ರಾಜ್ಯದ ಬೆಸ್ಕಾಂ ವ್ಯಾಪ್ತಿಯಲ್ಲಿ 900 ಕೋಟಿ, ಸೆಸ್ಕಾಂ ವ್ಯಾಪ್ತಿಯಲ್ಲಿ 237 ಕೋಟಿ ಹಾಗೂ ಎಸ್ಕಾಂ ವ್ಯಾಪ್ತಿಯಲ್ಲಿ 400 ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಕೊಳ್ಳುವ ಹಂತದಲ್ಲಿ ಸ್ಥಗಿತಗೊಳಿರುವುದರಿಂದ ರೈತರಿಗೆ ತೊಂದರೆಯಾಗಲಿದ್ದು, ಈ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಬೇಕೆಂದು ಮನವಿ ಮಾಡಿದರು.

ಕಳೆದ ಅ.7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ನೂತನವಾಗಿ ಐಪಿ ಸೆಟ್ ಅಳವಡಿಸಿಕೊಳ್ಳುವ ರೈತರು ಲಕ್ಷಾಂತರ ರೂ. ವ್ಯಯಿಸಿ ವಿದ್ಯುತ್ ಕಂಬ ಟಿ.ಸಿ ಹಾಗೂ ವೈರ್ ಅಳವಡಿಕೆಗೆ ಮುಂದಾಗಬೇಕೆಂಬ ಆದೇಶ ರೈತ ವಿರೋಧಿಯಾಗಿದ್ದು, ಸದರಿ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಕಾಮಗಾರಿ ಆದೇಶಕ್ಕೆ ತಡೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 1 ಲಕ್ಷ ರೈತರು ಹಾಗೂ ಜಿಲ್ಲೆಯಲ್ಲಿ ಎರಡ್ಮೂರು ಸಾವಿರ ರೈತರು ಸೌಲಭ್ಯ ವಂಚಿತರಾಗಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಕೃಷಿಕ ಮಹದೇವು ಮಾತನಾಡಿ, ನಾನು ಬೂಕನಕೆರೆ ಬಳಿಯ ಜಮೀನಿನಲ್ಲಿ 15 ಲಕ್ಷ ರೂ. ಖರ್ಚು ಮಾಡಿ, ಬಾಳೆ ಮತ್ತು ಅಡಿಕೆ ತೋಟದ ಕೃಷಿಯಲ್ಲಿ ನಿರತನಾಗಿದ್ದು, ಅಕ್ರಮ ಸಕ್ರಮ ಯೋಜನೆ ಜಾರಿಯಾಗದಿದ್ದರೆ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ, ಆದ್ದರಿಂದ ಆಳುವ ಸರ್ಕಾರ ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೃಷಿಕರಾದ ಸತೀಶ್, ದಿನೇಶ್, ನಾಗೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!