Thursday, September 19, 2024

ಪ್ರಾಯೋಗಿಕ ಆವೃತ್ತಿ

ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು| ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ಕುಮಾರ್ ಪರಸ್ ರಾಜೀನಾಮೆ

ಆರ್‌ಎಲ್‌ಜೆಪಿ ಅಧ್ಯಕ್ಷ ಪಶುಪತಿ ಕುಮಾರ್ ಪರಸ್ ಅವರು ಮಂಗಳವಾರ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿದೆ, ಇದು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆ ಇದೆ.

ನಮ್ಮ ಪಕ್ಷದಲ್ಲಿ ಐವರು ಸಂಸದರಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ. ನಮಗೆ ಅನ್ಯಾಯವಾಗಿದೆ. ಹೀಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜೀನಾಮೆ ವೇಳೆ ಸಚಿವ ಪಶುಪತಿ ಕುಮಾರ್ ಪರಸ್ ಹೇಳಿದ್ದಾರೆ.

ನಾನು ಪೂರ್ಣ ಪ್ರಾಮಾಣಿಕತೆಯಿಂದ ಎನ್‌ಡಿಎಗಾಗಿ ಕೆಲಸ ಮಾಡಿದ್ದೇನೆ. ನಾನು ಪ್ರಧಾನಿ ಮೋದಿಗೆ ಕೃತಜ್ಞನಾಗಿದ್ದೇನೆ. ಆದರೆ, ನನಗೆ ಮತ್ತು ನಮ್ಮ ಪಕ್ಷಕ್ಕೆ ಅನ್ಯಾಯವಾಗಿದೆ. ಆದ್ದರಿಂದ ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಶುಪತಿ ಕುಮಾರ್ ಪರಸ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎಲ್‌ಜೆಪಿ ಬಣಕ್ಕೆ ಬಿಜೆಪಿ ನ್ಯಾಯ ನೀಡುತ್ತಿಲ್ಲ ಎಂದು ಶುಕ್ರವಾರ ಆರೋಪಿಸಿದ್ದ ಪಶುಪತಿ ಕುಮಾರ್, ಎನ್‌ಡಿಎ ಒಕ್ಕೂಟದಿಂದ ಹೊರನಡೆಯುವ ಸೂಚನೆ ನೀಡಿದ್ದಾರೆ. ನಾವು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರಾಗಿದ್ದೇವೆ ಮತ್ತು ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮತ್ತೊಂದು ಬಣದ ಮುಖ್ಯಸ್ಥರಾಗಿರುವ ಅವರ ಸೋದರಳಿಯ ಚಿರಾಗ್ ಪಾಸ್ವಾನ್ ಅವರೊಂದಿಗೆ ಆಡಳಿತ ಪಕ್ಷವು ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡ ಕೆಲವು ದಿನಗಳ ನಂತರ ಬಿಜೆಪಿಯೊಂದಿಗೆ ಆರ್‌ಎಲ್‌ಜೆಪಿ ಮುನಿಸಿಕೊಂಡಿದೆ ಎಂದು ಹೇಳಲಾಗಿದೆ.

ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು 2020ರಲ್ಲಿ ಅವರ ನಿಧನದ ನಂತರ ಎರಡು ಭಾಗವಾಯಿತು. ಅವರ ಸಹೋದರ ಪರಸ್ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವನ್ನು (RLJP) ಮತ್ತು ಅವರ ಮಗ ಚಿರಾಗ್ ಪಾಸ್ವಾನ್ ಲೋಕ ಜನಶಕ್ತಿ ಪಕ್ಷವನ್ನು (ರಾಮ್ ವಿಲಾಸ್) ಮುನ್ನಡೆಸುತ್ತಿದ್ದಾರೆ. ಇವೆರಡೂ ಪಕ್ಷಗಳು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮೈತ್ರಿಯ ಭಾಗವಾಗಿದೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!