Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಮಂಡ್ಯ ಜಿಲ್ಲೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭೀಕರ ಬರಗಾಲದಿಂದಾಗಿ ಒಣಗುತ್ತಿರುವ ಬೆಳೆ ರಕ್ಷಣೆಗೆ  ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ರೈತರು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ  ಸರ್ ಎಂ ವಿ ಪ್ರತಿಮೆಯಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ಅಭಾವ, ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಹಾಗೂ ನಾಲೆಗಳ ಆಸಮರ್ಪಕ ನಿರ್ವಹಣೆ ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದ್ದರೆ ಬೇಸಿಗೆಯಲ್ಲಿ ಬೆಳೆದು ನಿಂತಿರುವ ಬೆಳೆ ರಕ್ಷಣೆ ಕಷ್ಟಕರವಾಗಿದೆ, ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು, ತೆಂಗು,ತೋಟಗಾರಿಕೆ ಅರಣ್ಯ ಕೃಷಿ ನೆಲಕಚ್ಚಿವೆ ಜನ – ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದ್ದರೂ ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಪ್ರತಿ ಎಕರೆಗೆ 25000 ರೂ ಪರಿಹಾರ ನೀಡಬೇಕು, ಆದಷ್ಟು ಶೀಘ್ರವಾಗಿ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು, ಬ್ಯಾಂಕ್,ಸಹಕಾರ ಸಂಘಗಳಲ್ಲಿ ರೈತರುಪಡೆದಿರುವ ಕೃಷಿ ಸಾಲ, ಚಿನ್ನದ ಅಡಮಾನ ಸಾಲ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು,ಬೆಂಗಳೂರಿಗೆ ಕುಡಿಯುವ ನೀರಿನ ನೆಪದಲ್ಲಿ ಕಾವೇರಿ ನದಿ ಮೂಲಕ ನೀರು ಬಿಡುವುದನ್ನು ನಿಲ್ಲಿಸಿ ತಕ್ಷಣದಿಂದ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು. ತೆಂಗು, ಅಡಿಕೆ, ಕಬ್ಬು, ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳ ಅಕ್ರಮ, ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ರೈತರ ಜಮೀನುಗಳಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಮುಂದಾಗಬೇಕು ಅದೇ ರೀತಿ ಪ್ರತಿನಿತ್ಯ ತ್ರೀ ಫೇಸ್ ವಿದ್ಯುತ್ ನ್ನು ನಿರಂತರ ಎಂಟು ತಾಸು ಸರಬರಾಜು ಮಾಡಬೇಕು, ಜಿಲ್ಲೆಯ ತಾಲ್ಲೂಕು ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬ ತಪ್ಪಿಸಿ ಭ್ರಷ್ಟಾಚಾರ ನಿಯಂತ್ರಿಸಬೇಕು,ಕೊಬ್ಬರಿಗೆ ಪ್ರತಿ ಕ್ವಿಂಟಲ್ ಗೆ 18000 ಸಾವಿರ ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಅವಧಿ ಮುಂದೂಡಬೇಕು ಎಂದು ಆಗ್ರಹಿಸಿದರು.

ರೈತರ ಪ್ರಮುಖ ವಾಣಿಜ್ಯ ಬೆಳೆ ಕಬ್ಬನ್ನು ವಿಮೆ ವ್ಯಾಪ್ತಿಗೆ ತರಬೇಕು ಕಬ್ಬು ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 40,000 ಪರಿಹಾರ ನೀಡಬೇಕು,ಖಾಸಗಿ ಕಾರ್ಖಾನೆಗಳ ಇಳುವರಿ ಆಧಾರಿತ ಬೆಲೆ ನೀತಿ ಕೈಬಿಟ್ಟು ಸಮತೋಲನ ಬೆಲೆ ಕೊಡಬೇಕು. ರೇಷ್ಮೆ ಬೆಳೆಗೆ ಪ್ರತಿ ಕೆಜಿಗೆ 600 ರಿಂದ 700 ರೂ ದರ ನೀಡಬೇಕು, ಬೇಸಿಗೆ ಕಾಲದಲ್ಲಿ ಕೆರೆ, ಕಟ್ಟೆ,ನಾಲೆಯ ಹೂಳು ತೆಗಿಸಿ ನೀರು ಸಂಗ್ರಹಣೆಗೆ ಅನುಕೂಲ ಮಾಡಿಕೊಡಬೇಕು.ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ಪ್ರೋತ್ಸಾಹ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು,ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕುದರಗುಂಡಿ ನಾಗರಾಜ್, ಸೀತಾರಾಮು, ನಂಜುಂಡಯ್ಯ ಕೀಳಘಟ್ಟ, ಅಣ್ಣೂರು ಮಹೇಂದ್ರ, ನಾಗಮಂಗಲ ಸುರೇಶ್, ಶಿವಲಿಂಗಯ್ಯ ಗುಡಿದೊಡ್ಡಿ, ಕಾಂತರಾಜು ಬೆಳ್ಳತ್ತೂರು, ಪುಟ್ಟಸ್ವಾಮಿ ಕೆ ಪಿ ದೊಡ್ಡಿ, ಲಿಂಗರಾಜು ಕೋಣಸಾಲೆ, ಕೆ.ಜಿ ಪ್ರಭುಲಿಂಗು, ನಾಗೇಂದ್ರ ಸ್ವಾಮಿ,ಸೊ.ಪಿ ಪ್ರಕಾಶ್, ಬೋರಲಿಂಗೇಗೌಡ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!