Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟಕ್ಕೆ 75 ದಿನ: ನಿರಂತರ ಧರಣಿಯ ಇಣುಕು ನೋಟ

✍️ ಜಿ.ಧನಂಜಯ ದರಸಗುಪ್ಪೆ
        ಮಂಡ್ಯ

ಕಳೆದ ಆಗಸ್ಟ್ ಮಧ್ಯಭಾಗದಲ್ಲಿ ಯಾರಿಗೂ ಗೊತ್ತೂ ಗೊತ್ತಿಲ್ಲದಂತೆ ಒಂದಷ್ಟು ಟಿಎಂಸಿ ನೀರು ಹರಿದು ಹೋದ ನಂತರ, ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಮಾಡಿದ್ದನ್ನು ವಿರೋಧಿಸಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯವರು ವಿವಿಧ ಸಂಘಟನೆಗಳ ಮುಖಂಡರೊಡಗೂಡಿ ಸೆಪ್ಟಂಬರ್ 1 ರಿಂದ ಇಂದಿನವರೆವಿಗೂ ಅಂದರೆ (ನವಂಬರ್ 18) 75 ದಿನ ನಿರಂತರವಾಗಿ, ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಚಳವಳಿಯನ್ನು ಹಮ್ಮಿಕೊಂಡು ಬಂದಿದೆ.

ಪ್ರತಿನಿತ್ಯ ಸ್ವಲ್ಪ ಸಮಯ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ, ನಂತರ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಕಾವೇರಿ ವನದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಚಳುವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಚಳವಳಿಯ ಆರಂಭದಲ್ಲಿ ಎಲ್ಲಾ ಪಕ್ಷದವರು ಬೆಂಬಲವಾಗಿ ಭಾಗವಹಿಸಿ, ತದನಂತರ ಆಡಳಿತ ಪಕ್ಷದವರು ಆಗೊಮ್ಮೆ- ಈಗೊಮ್ಮೆ ಚಳವಳಿಯಲ್ಲಿ ಭಾಗವಹಿಸಿದರೆ, ಇನ್ನುಳಿದ ಪಕ್ಷದವರು ಸಾಮಾನ್ಯವಾಗಿ ತಮಗೆ ಅನುಕೂಲವಾದಾಗ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಜಿ. ಧನಂಜಯ ದರಸಗುಪ್ಪೆ

ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಶಾಸಕರೊಡಗೂಡಿ ಧರಣಿ ಸ್ಥಳಕ್ಕೆ ಬಂದು ರೈತರಿಗೆ ಮಾರಕವಾಗದಂತೆ ಈಗ ನೀಡಿರುವ ಆದೇಶವನ್ನು ಮರುಪರಿಶೀಲಿಸಲು ಹಾಗೂ ಸಂಕಷ್ಟ ಸೂತ್ರಗಳನ್ನು ಪಾಲಿಸಲು ಸಾಧ್ಯವಾಗದ ಬಗ್ಗೆ ನ್ಯಾಯಾಲಯ ಹಾಗೂ ಪ್ರಾಧಿಕಾರಗಳಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿ ಹೋದರು. ಆದರೆ ಅದು ಸಫಲವಾಗಲಿಲ್ಲ. ತದ ನಂತರ ಸಮಿತಿ ಮತ್ತು ಪ್ರಾಧಿಕಾರ ಮತ್ತೊಂದು ಆದೇಶ ನೀಡಿ 3000, ನಂತರ ಈಗ 2600 ಕ್ಯೂ ಸೆಕ್ ನೀರನ್ನು ನವೆಂಬರ್ 23 ರವರೆಗೆ ಬಿಡುವಂತೆ ಆದೇಶಿಸಿದೆ. ಮಂಡ್ಯ ರೈತ ಹಿತರಕ್ಷಣಾ ಸಮಿತಿಯವರ ಜೊತೆ ಪ್ರಾರಂಭದಲ್ಲಿ ಪಾಂಡವಪುರ- ಶ್ರೀರಂಗಪಟ್ಟಣ ಹಾಗೂ ಮದ್ದೂರು ತಾಲೂಕುಗಳಲ್ಲಿ ಚಳುವಳಿ- ಪ್ರತಿಭಟನೆ- ಧರಣಿಗಳು ವಿನೂತನವಾಗಿ ನಡೆದರೂ, ಈಗ ಅಲ್ಲಿಯೂ ಚಳವಳಿ ನಡೆಯುತ್ತಿಲ್ಲ.

ಮಂಡ್ಯದಲ್ಲಿ ನಡೆದ ಪತ್ರಕರ್ತರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು -ಜಿಲ್ಲಾ ಉಸ್ತುವಾರಿ ಸಚಿವರು-ಜಿಲ್ಲೆಯ ಶಾಸಕರೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿ, ಧರಣಿ ನಿರತರ ಅಹವಾಲು – ಅಭಿಪ್ರಾಯಗಳನ್ನು ಕೇಳಿ, ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಯಾವ ಆತಂಕವೂ ಬೇಡ, ಇದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. ಆದರೆ ಧರಣಿ ನಿರತರನ್ನು ಮನವೊಲಿಸಿ ಧರಣಿ ಕೈಬಿಡುವಂತೆ ಹೇಳಲಿಲ್ಲ. ನೀರು ನಿಲ್ಲಿಸುತ್ತವೆ ಎಂದೂ ಹೇಳಲಿಲ್ಲ. ಒಂದು ವೇಳೆ ಧರಣಿ ಬಿಡುವಂತೆ ಪ್ರತಿಭಟನಾಕಾರರಿಗೆ ಹೇಳಿದ್ದರೆ, ಬಹುಶಃ ಧರಣಿ ನಿರತರು ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದರೋ ಏನೋ?
ಧರಣಿಯ ಉದ್ದೇಶ ಈಡೇರದೇ ಅಥವಾ ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡದೆ ಧರಣಿಯನ್ನು ತಾತ್ವಿಕವಾಗಿ ಅಂತ್ಯಗೊಳಿಸುವುದಕ್ಕಾಗುವುದಿಲ್ಲ ಎಂಬ ಅರಿವು ಇರಲಿಲ್ಲವೇ?

ಈ ಹಿಂದೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ನ್ಯಾಯಾಲಯ ಆದೇಶ ನೀಡಿದಾಗ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯವರು ಕರೆ ನೀಡಿದಾಗ, ಚಳವಳಿಗೆ ಇಡೀ ಜಿಲ್ಲೆಯಾದ್ಯಂತ ಪಕ್ಷಾತೀತವಾಗಿ- ಜಾತ್ಯತೀತವಾಗಿ, ಜೊತೆಗೆ ಜಿಲ್ಲೆಯಲ್ಲಿರುವ ಎಲ್ಲಾ ರೀತಿಯ ಸಂಘ -ಸಂಸ್ಥೆಗಳು, ಹೀಗೆ ಎಲ್ಲರೂ ಧರಣಿ- ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು. ಇದು ಸರ್ಕಾರಗಳಿಗೆ ನುಂಗಲಾರದ ತುತ್ತಾಗಿ, ಅಲ್ಪ-ಸ್ವಲ್ಪ ನೀರನ್ನು ಕದ್ದು ಮುಚ್ಚಿ ಬಿಡಲಾಗುತ್ತಿತ್ತೇ ಹೊರತು, ಈಗಿನಂತೆ ನೇರವಾಗಿ ಯಾವ ಅಳುಕೂ ಇಲ್ಲದೇ ರಾಜಾರೋಷವಾಗಿ ನೀರು ಬಿಡುವ ಪ್ರವೃತ್ತಿ ಇರಲಿಲ್ಲ. ಸರ್ಕಾರಕ್ಕೆ ಚಳವಳಿ ಬಿಸಿ ಮುಟ್ಟಿಸುತ್ತಿತ್ತು. ಆದರೆ ಈಗ ಇಡೀ ಜಿಲ್ಲೆಯಲ್ಲಿ (ಬೆಂಗಳೂರು ಸೇರಿದಂತೆ)ಕಾವೇರಿ ನೀರು ಬಳಸುವ ಎಲ್ಲರೂ ಈ ಚಳ ವಳಿಯಲ್ಲಿ- ಧರಣಿಯಲ್ಲಿ ಭಾಗವಹಿಸದೇ, ತಮಗೇನು ಸಂಬಂಧವೇ ಇಲ್ಲ, ಏನು ಆಗಿಯೇ ಇಲ್ಲವೆಂಬಂತೆ ನಿರ್ಲಕ್ಷ್ಯ ವಹಿಸುತ್ತಿರುವುದು ನಿಜಕ್ಕೂ ಸ್ವಾಭಿಮಾನ ರಹಿತರ ನಾಚಿಕೆಗೇಡಿತನ ಎಂದರೆ ತಪ್ಪಾಗಲಾರದೇನೋ…

ಈಗ ‘ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ’ಯವರು ನಿರಂತರವಾಗಿ ನಡೆಸುತ್ತಿರುವ ಧರಣಿಗೆ ಕನ್ನಡಪರ ಸಂಘಟನೆಗಳು, ವಿವಿಧ ರೀತಿಯ ಎಲ್ಲಾ ಸಂಘ ಸಂಸ್ಥೆಗಳು, ಬೆಂಗಳೂರಿನ ಕೆಲವು ಸಂಘಟನೆಗಳು, ವಿರೋಧ ಪಕ್ಷದ ಮಖಂಡರು,ಹಲವು ಪ್ರಮುಖ ಮಠಾಧೀಶರುಗಳು,ಮಾಜಿ ಮುಖ್ಯಮಂತ್ರಿಗಳು, ಶಾಸಕರು -ಜಿಲ್ಲಾ ಪಂಚಾಯಿತಿ -ತಾಲೂಕು ಪಂಚಾಯಿತಿ -ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘ ಸಂಸ್ಥೆಗಳ ಹಾಲಿ -ಮಾಜಿ ಪದಾಧಿಕಾರಿಗಳು -ಕಲಾವಿದರು,ವಿವಿಧ ಗ್ರಾಮಗಳ ಗ್ರಾಮಸ್ಥರು, ವಿದ್ಯಾರ್ಥಿಗಳು ಒಂದೊಂದು ದಿನ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಧರಣಿ ನಿರತರಂತೆ ವಿಶೇಷವಾಗಿ ಪತ್ರಕರ್ತರು ಪ್ರತಿದಿನದ ಧರಣಿಯ,ಚಳುವಳಿಯ ವರದಿಯನ್ನು ತಪ್ಪದೇ ಪ್ರಕಟಿಸುವ ಮೂಲಕ ಜನಸಾಮಾನ್ಯರಲ್ಲಿ ಧರಣಿ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡುತ್ತಿರುವುದಲ್ಲದೇ, ಕಾವೇರಿ ನೀರು ಬಳಸುವ ಎಲ್ಲರೂ ಭಾಗವಹಿಸಬೇಕೆಂಬ ಮನೋಭಾವನೆ ಮೂಡುವಂತೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

ಇವೆಲ್ಲದರ ನಡುವೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಕೆಲವರು ಪ್ರತ್ಯೇಕ ಒಕ್ಕೂಟ ರಚಿಸಿಕೊಂಡು ಆ ಮೂಲಕ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಇನ್ನು ಕೆಲವು ಸಂಘಟನೆಗಳು ಕೆಲವು ಕಾಲ ಚಳವಳಿ ನಡೆಸಿ ಸುಮ್ಮನಾಗಿದ್ದಾರೆ. ಜನತೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. ಉಗ್ರ ರೂಪ ತಳೆಯಬೇಕಾಗಿದ್ದ ಚಳವಳಿ ಏನೋ ನೆಪ ಮಾತ್ರಕ್ಕೆ ನಡೆಯುತ್ತಿರುವಂತಿದೆ. ಏನೇ ಆಗಲಿ ಯಾರೇ ಧರಣಿಗೆ ಬೆಂಬಲ ನೀಡಲಿ ಬಿಡಲಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸುವವರೆಗೆ, ನ್ಯಾಯಾಲಯ ಅಥವಾ ಪ್ರಾಧಿಕಾರದ ಆದೇಶ ರದ್ದಾಗುವವರೆಗೆ ಧರಣಿ ಕೈ ಬಿಡದ ಹಾಗೆ ಗೋಚರಿಸುತ್ತಿದೆ. ಮತ್ತೆ ಪ್ರಾಧಿಕಾರದ ಸಭೆ ಇರುವುದಾಗಿ ತಿಳಿದು ಬಂದಿದ್ದು ಮತ್ತೇನಾಗುವುದೋ ಎಂಬ ಆತಂಕ ಒಂದೆಡೆಯಾದರೆ, ನೀರು ನಿಲ್ಲಿಸುವಂತೆ ಆದೇಶ ಬರಬಹುದು ಎಂಬ ಆಶಾಭಾವನೆಯೂ ಇದೆ.

ಜಿಲ್ಲೆಯ ಎಲ್ಲರ ಪರವಾಗಿ ಸಾಮೂಹಿಕ ನಾಯಕತ್ವದಲ್ಲಿ ಧರಣಿ ನಡೆಸುತ್ತಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹಾಗೂ ಅವರ ಜೊತೆ ಕೈಜೋಡಿಸಿರುವ ಎಲ್ಲರೂ ನಿಜಕ್ಕೂ ಅಭಿನಂದನಾರ್ಹರು. ದಯಮಾಡಿ ಈಗಲಾದರೂ ಜಿಲ್ಲೆಯ ಕಾವೇರಿ ನೀರು ಬಳಸುವ ಪ್ರತಿಯೊಬ್ಬರೂ ಧರಣಿಯಲ್ಲಿ ಭಾಗವಹಿಸುವ-ಕಾವೇರಿ ನೀರನ್ನು ಉಳಿಸುವ ಹೋರಾಟಕ್ಕೆ ಬೆಂಬಲ ನೀಡಿ ಧರಣಿಯ ಯಶಸ್ಸಿಗೆ ಸಹಕರಿಸುವಂತಾಗಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!