Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೆಳೆ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ ರೈತರಿಗೆ ದೊರೆಯುತ್ತಿಲ್ಲ: ಕೆಂಪೂಗೌಡ

ಪ್ರಸ್ತುತ ದಿನಗಳಲ್ಲಿ ರೈತ ಒಂದು ಟನ್ ಕಬ್ಬನ್ನು ಬೆಳೆಯಬೇಕೆಂದರೆ 1,500 ರೂ ವೆಚ್ಚವಾಗುತ್ತದೆ, ಮಂಡ್ಯದಲ್ಲಿ ಸುಮಾರು 6 ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಆದರೂ ಸಹ, ರೈತರ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ರೈತರಿಗೆ ದೊರೆಯುತ್ತಿಲ್ಲ ಎಂದು ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ಎ. ಎಲ್ ಹೇಳಿದರು.

ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿ -ಗತಿ ಮತ್ತು ರೈತರ ಸಂಕಷ್ಟ ಕುರಿತು ವಿಚಾರಗೋಷ್ಠಿ ನಡೆಸಿ ಮಾತಾನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಕೆ ಆರ್ ಎಸ್ ಅಣೆಕಟ್ಟಿನ ನಿರ್ಮಾಣದ ನಂತರ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆ ಒಂದು ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಮಂಡ್ಯ ಸಕ್ಕರೆ ಕಾರ್ಖಾನೆ ನಿರ್ಮಾಣವಾದ ಬಳಿಕ ಅನೇಕ ಉಪ ಕಾರ್ಖಾನೆಗಳು ಪ್ರಾರಂಭವಾದವು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ರೈತರಿಗೆ ಬೆಲ್ಲವಿಲ್ಲವಾದರೆ ಜೀವನವಿಲ್ಲ. ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಂದ ಉಳಿಸಬೇಕಾಗಿದೆ. ದಯಮಾಡಿ ಸರ್ಕಾರ ಸಕ್ಕರೆ ಕಾರ್ಖಾನೆ ಉಳಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಯುವಕರು ಕೃಷಿಯಲ್ಲಿ ಗಮನ ನೀಡಿ, ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಶ್ರಮಿಸಿ ಮತ್ತು ಜನ ಪ್ರತಿನಿಧಿಗಳು ಸಕ್ಕರೆ ಕಾರ್ಖಾನೆಯ ಸಮಸ್ಯೆ ಕುರಿತು ಪ್ರಶ್ನಿಸಿ ಎಂದು ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದರು.

ಶ್ರೀರಂಗಪಟ್ಟಣ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಭುಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ರೈತರದ್ದು ಮತ್ತು ಕಾರ್ಮಿಕರದ್ದು. ಆದರೆ ಪ್ರಸ್ತುತ ರೈತರು, ಕಾರ್ಮಿಕರು ಕಾರ್ಖಾನೆ ನಮ್ಮದಲ್ಲ ಎಂಬಂತೆ ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಮಂಡ್ಯ ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆ ಏಷ್ಯದಲ್ಲಿಯೇ ಪ್ರಸಿದ್ಧವಾದದ್ದು ಎಂದರೆ ತಪ್ಪಾಗುವುದಿಲ್ಲ. ಸರ್ಕಾರ ಕಾರ್ಖಾನೆಗಾಗಿ ಪ್ರತಿ ವರ್ಷ ಲಕ್ಷ ಲಕ್ಷ ನೀಡಿದರು ಪ್ರಯೋಜನವಿಲ್ಲದಂತಾಗಿದೆ. ಸರ್ಕಾರವು ಉತ್ತಮ ಯೋಜನೆಯೊಂದಿಗೆ ಸಕ್ಕರೆ ಕಾರ್ಖಾನೆಯನ್ನು ಉಳಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಚಾರಗೋಷ್ಠಿಯಲ್ಲಿ ಮಂಡ್ಯದ ಕೆ.ಪಿ ಮೃತ್ಯುಂಜಯ, ಮಳವಳ್ಳಿಯ ಮಹಾಲಿಂಗಯ್ಯ, ಪಾಂಡವಪುರದ ಡಾ. ಹೆಚ್. ಆರ್ ತಿಮ್ಮೇಗೌಡ, ನಾಗಮಂಗಲದ ನಾಗರಾಜು, ಮದ್ದೂರಿನ ಗೋವಿಂದ, ಕೆ.ಆರ್ ಪೇಟೆಯ ಬಿ.ಸಿ ವಿಜಯ್ ಕುಮಾರ್, ಜಯಾಕೀರ್ತಿ ಮತ್ತು ಅರಕೆರೆಯ ಸೋಮಶೇಖರ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ಶ್ರೀರಂಗಪಟ್ಟಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್ ಲೋಕೇಶ್, ಕೆ. ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೇನಾಗಾರ, ಶ್ರೀರಂಗಪಟ್ಟಣ ಸಮಾಜ ಸೇವಕರಾದ ಆಶಾಲತಾ ಪುಟ್ಟೇಗೌಡ ಮತ್ತು ಪುರಸಭಾ ಸದಸ್ಯ ಬಸವರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ