ತಾವು ವಾಸಿಸುವ ಸುತ್ತ ಮುತ್ತಲ ಪ್ರದೇಶ ಶುಚಿಯಾಗಿಟ್ಟುಕೊಳ್ಳಿ, ಜ್ವರ ಬಂದಾಗ ಅಲಕ್ಷ್ಯ ಮಾಡದೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ಗುಂಬಜ್ ರಸ್ತೆಯ ಹೊರ ವಲಯದಲ್ಲಿ ಟೆಂಟ್,ಗುಡಿಸಲಿನಲ್ಲಿ ವಾಸವಾಗಿರುವ ರಾಯಚೂರು ಜಿಲ್ಲೆಯಿಂದ ನಾಲೆ, ಕಾಂಕ್ರಿಟ್ ಕಟ್ಟಡ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಮಳೆಗಾಲ ಆರಂಭವಾಗಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.ಸೊಳ್ಳೆ ಕಡಿತದಿಂದ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾದಂತಹ ಮಾರಣಾಂತಿಕ ಖಾಯಿಲೆಗಳು ಬರುತ್ತವೆ. ಹಾಗಾಗಿ ಸೊಳ್ಳೆ ಕಡಿತದಿಂದ ಪಾರಾಗಲು ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಉಪಯೋಗಿಸಿ, ಸಂಜೆ ವೇಳೆ ಮೈತುಂಬ ಬಟ್ಟೆ ಧರಿಸುವುದನ್ನು ಮರೆಯದಿರಿ.ಕಡಿತ ಚಿಕ್ಕದಾದರೂ ಭೀತಿ ದೊಡ್ಡದು ಎಂದು ಕಿವಿ ಮಾತು ಹೇಳಿದರು.
ಇದೇ ವೇಳೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಹದೇವಮ್ಮ, ಕಾಲೋನಿಯ ಮುಖಂಡರಾದ ಪ್ರಶಾಂತ, ಸಿದ್ದರಾಜ್, ಚಂದ್ರು ಹಾಗೂ ಕಟ್ಟಡ ಕೂಲಿ ಕಾರ್ಮಿಕರು ಇದ್ದರು.