Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೆರಗೋಡು ಸರ್ಕಾರಿ ಶಾಲೆ ಮಕ್ಕಳ ದುರ್ಬಳಕೆ; ”ನಾವೆಲ್ಲ ಹಿಂದೂ ನಾವೆಲ್ಲ ಒಂದು” ಘೋಷಣೆ ಕೂಗಿಸಿದ ಮುಖ್ಯಶಿಕ್ಷಕಿ !

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದ ತಣ್ಣಗಾಗುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕೆರಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಮ್ಮ, ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆದೊಯ್ದು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಸ್ವತಃ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪೋಷಕರೇ ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಕಳೆದ ಜ.26ರ ಗಣರಾಜ್ಯೋತ್ಸವ ದಿನದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಮ್ಮ, ಮಕ್ಕಳನ್ನು ವಿವಾದಿತ ಸ್ಥಳಕ್ಕೆ ಕರೆದೊಯ್ದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮತ್ತು ಅದೇ ದಿನ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆರ್ ಎಸ್ ಎಸ್ ಸಂಚಾಲಕರಿಂದ ಧ್ವಜಾರೋಹಣ ಮಾಡಿಸಿದ್ದಲ್ಲದೆ ‘ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂದು ಪ್ರತಿಜ್ಞಾವಿಧಿ ಬೋಧಿಸಿ, ಜೈ ಶ್ರೀ ರಾಮ್ ಎಂಬ ಚಿಹ್ನೆ ಮುದ್ರಿತ ಇರುವ ಕವರ್ ನಲ್ಲಿ ಲಾಡು ವಿತರಿಸಿರುವುದು ಬೆಳಕಿಗೆ ಬಂದಿದೆ.

ಆರ್ ಎಸ್ ಎಸ್ ಮುಖಂಡ ಮಹೇಶ್ ಧ್ವಜಾರೋಹಣ ಮಾಡುತ್ತಿರುವುದು

ಈ ಬಗ್ಗೆ ದ್ಯಾರ್ಥಿಗಳ ಪೋಷಕರಾದ ಸಂತೋಷ್ ಕುಮಾರ್ ಕೆ.ಎಂ, ಲೋಕೇಶ್,ಕೆ.ಸಿ ಉಮಾಶಂಕರ್ ಸೇರಿದಂತೆ ಹಲವರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೂರಿನ ಸಾರಾಂಶ

ಕೆರಗೋಡು ಗ್ರಾಮದ ಸರ್ಕಾರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಶೀಲಮ್ಮ ಇಲಾಖಾ ನಿಯಮ ಉಲ್ಲಂಘಿಸಿ ಜ.26 ರಂದು 75 ನೇ ಗಣರಾಜ್ಯೋತ್ಸವ ದಿನಾಚರಣೆಯಂದು ಪ್ರಸ್ತುತ ಎಸ್ ಡಿ ಎಂ ಸಿ ಅಧ್ಯಕ್ಷರು ಲಭ್ಯವಿದ್ದರೂ ಕೂಡ ಅವರನ್ನು ಪರಿಗಣಿಸದೆ ಉದ್ದೇಶಪೂರ್ವಕವಾಗಿ ಧ್ವಜಾರೋಹಣವನ್ನು ತಾಲ್ಲೂಕು ಆರ್.ಎಸ್.ಎಸ್ ಸಂಚಾಲಕ, ಪಂಚೆಗೌಡನ ದೊಡ್ಡಿ ಗ್ರಾಮದ ಗ್ರಾಪಂ ಸದಸ್ಯರು ಆದ ಮಹೇಶ್ ಕೆ.ಜಿ ಅವರಿಂದ ಮಾಡಿಸಿ, ಸರ್ಕಾರಿ ಶಾಲೆಯಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರೂ ಶಿಕ್ಷಕಿ ‘ಒಂದು ಧರ್ಮದ ಕಡೆಗೆ ಹೆಚ್ಚು ಒಲವನ್ನು ಮೂಡಿಸಲು ಯತ್ನಿಸಿದ್ದಾರೆ. ಅಲ್ಲದೇ ‘ನಾವೆಲ್ಲ ಹಿಂದೂ ನಾವೆಲ್ಲ ಒಂದ ಎಂದು ಪ್ರತಿಜ್ಞಾವಿಧಿ ಮಾಡಿಸಿದ್ದಾರೆ ಎಂದು ದೂರಲಾಗಿದೆ.

ಕಳೆದ ಜ. 22 ರಂದು ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆಗೆ ತಯಾರಿಸಿದ್ದ ಜೈ ಶ್ರೀ ರಾಮ್ ಚಿಹ್ನೆ ಮುದ್ರಿತವಾಗಿರುವ ಲಾಡುಗಳನ್ನು  ಗಣರಾಜ್ಯೋತ್ಸವ ದಿನದಂದು ಶಾಲೆಯ ಮಕ್ಕಳಿಗೆ ವಿತರಿಸಿದ್ದಾರೆ. ಮಕ್ಕಳ ಗಮನ ಸೆಳೆಯಲು ಜೈಶ್ರೀರಾಮ್ ಚಿಹ್ನೆ ಇರುವ ಲಾಡುಗಳ ಪ್ಯಾಕೇಟ್ ಗಳನ್ನು ವಿತರಿಸಲಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಕಿಡಿಕಾರಿದ್ದಾರೆ.

ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಚರ್ಚಿಸಿದೆ ಪೋಷಕರ ಒಪ್ಪಿಗೆ ಪಡೆಯದೆ, ಇಲಾಖೆ ಅನುಮತಿ ಪಡೆಯದೆ ಶಾಲೆಯಲ್ಲಿನ ಗಣರಾಜ್ಯೋತ್ಸವ ಕಾರ್ಯಕ್ರಮದ ಮಧ್ಯಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳೊಡನೆ ಪ್ರಸ್ತುತ ಧ್ವಜ ಸಂಘರ್ಷ ನಡೆದ ವಿವಾದಿತ ಸ್ಥಳದಲ್ಲಿರುವ ಬಸ್‌ ನಿಲ್ದಾಣದ ಮುಂಭಾಗದ ಆವರಣದಲ್ಲಿ ಗೌರಿಶಂಕರ ಸೇವಾ ಟ್ರಸ್ ಧ್ವಜಾರೋಹಣ ಕಾರ್ಯಕ್ರಮಕ್ಕೆ ‘ಒಂದು ಧರ್ಮದ ಪರವಾಗಿ,  ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ, ತನ್ನ ಶಾಲಾ ವಿದ್ಯಾರ್ಥಿಗಳೊಡನೆ ಭಾಗಿಯಾಗಿ ಸರ್ಕಾರಿ ನಿಯಮಗಳನ್ನು ಮೀರಿ ಸರ್ವಾಧಿಕಾರಿ ಧೋರಣೆ ತೋರಿದ್ದು, ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಮ್ಮ ಕೆರಗೋಡಿನಲ್ಲಿ ಆರ್.ಎಸ್.ಎಸ್ ಸಂಚಾಲಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಶಾಲೆಯಲ್ಲಿ ಹಿಂದೂ ಧರ್ಮದ ಪರವಾಗಿ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಲೆಕ್ಕಿಸದೆ ಪ್ರತ್ಯೇಕ್ಷವಾಗಿ ಶಾಲಾ ಶಿಕ್ಷಣ ಇಲಾಖೆಗೆ ಅವಮಾನ ಮಾಡಿದ್ದಾರೆ ಹಾಗೂ ಸಮುದಾಯ ಮತ್ತು ಶಾಲೆಯಲ್ಲಿ ಒಡಕು ಮೂಡಿಸಿದ್ದಾರೆ. ಹೀಗಾಗಿ ಮುಖ್ಯ ಶಿಕ್ಷಕರ ಮೇಲೆ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಪೋಷಕರು ಕೋರಿದ್ಧಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!