Tuesday, May 21, 2024

ಪ್ರಾಯೋಗಿಕ ಆವೃತ್ತಿ

ಸಾರ್ವಜನಿಕರು ಆರೋಗ್ಯಯುತ ಜೀವನ ನಡೆಸಿ: ಡಾ.ಹೆಚ್.ಎಲ್.ನಾಗರಾಜು

ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಬಳಕೆಯಿಂದ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಬದಲಾದ ಜೀವನ ಶೈಲಿ ಇನ್ನುಳಿದ ಕಾರಣಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದು, ಇದರಿಂದ ಹೊರಬರಲು ದುಬಾರಿ ಚಿಕಿತ್ಸೆಯನ್ನು ಪಡೆಯುವ ವೇಳೆಗೆ ತಮ್ಮ ಮನೆ, ಆಸ್ತಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ ಆದ್ದರಿಂದ ಸಾರ್ವಜನಿಕರು ಆರೋಗ್ಯಯುತ ಜೀವನ ನಡೆಸಬೇಕೆಂದು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯ, ಆರಕ್ಷಕ ಇಲಾಖೆ ಹಾಗೂ ಎಸ್.ಡಿ.ಜಯರಾಂ ನರ್ಸಿಂಗ್ ಕಾಲೇಜು ಇವರ ಸಹಭಾಗಿತ್ವದಲ್ಲಿ ನಡೆದ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಜಿಲ್ಲಾ ಮಟ್ಟದ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಜಾಥಾ ಜಿಲ್ಲಾಧಿಕಾರಿಗಳ ಕಛೇರಿಯಿಂದ ಹೊರಟು ಎಸ್ ಪಿ ಕಛೇರಿ, ಕಾರ್ಮಲ್ ಕಾನ್ವೆಂಟ್, ಅರಣ್ಯ ಇಲಾಖೆ ಕಛೇರಿ, ಸಂಜಯ ಸರ್ಕಲ್ ತನಕ ಬಂದು ಸರ್ಕಲ್ ನಲ್ಲಿ ಮಾನವ ಸರಪಳಿ ನಡೆಸಿತು. ಘೋಷಣೆಗಳು, ಫ್ಲೆಕಾರ್ಡ್ಗಳು, ಕರಪತ್ರಗಳು ಹಾಗೂ ಜಿಂಗಲ್ ಗಳ ಮೂಲಕ ಅರಿವು ಮೂಡಿಸುತ್ತಾ ಜಾಥಾವು ಮೈಸೂರು ರಸ್ತೆ ಮೂಲಕ ಡಿಹೆಚ್ಓ ಕಚೇರಿ ತಲುಪಿತು.

nudikarnataka.com

ನಂತರ ಡಿಹೆಚ್ಓ ಕಛೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನ್ನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್,  ಆರೋಗ್ಯ ಇಲಾಖೆ ಜನರಿಗೆ ಉತ್ತಮವಾದ ಆರೋಗ್ಯ ನೀಡುವ ನಿಟ್ಟಿನಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ, ಉಪನ್ಯಾಸ ಕಾರ್ಯಾಗಾರ, ಬೀದಿ ನಾಟಕಗಳು, ಐಇಸಿ ವಾಹನಗಳು, ತರಬೇತಿ ಶಿಬಿರ, ಐಇಸಿ ಮೇಳ, ಮೊಬೈಲ್ ತಪಾಸಣಾ ಶಿಬಿರ, ಆರೋಗ್ಯ ಮೇಳ ಹೀಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಇವುಗಳ ಸಂಪೂರ್ಣ ಸದುಪಯೋಗ ಪಡೆದುಕೊಂಡು ಸ್ವಸ್ಥ ಜೀವನ ನಡೆಸಲು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಿಮ್ಸ್ ಮಂಡ್ಯದ ಡಾ.ಸುಭಾಷ್ ಬಾಬು, ಡಾ.ವೆಂಕಟೇಶ್, ಡಾ.ನಾಗೇಂದ್ರ ಭಾಗವಹಿಸಿ ಕ್ಯಾನ್ಸರ್ ಬಗೆಗೆ ಜಾಗೃತಿ ಮೂಡಿಸಿ ಆದಷ್ಟು ಶೀಘ್ರವಾಗಿ ಹತ್ತಿರವಿರುವ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಪರೀಕ್ಷೆ ಮಾಡಿಸಿ ಕೊಂಡು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತಂಬಾಕು ಉತ್ಪನ್ನಗಳಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತ ಜೀವನವನ್ನು ನಡೆಸಲು ಕಿವಿಮಾತು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾದರೂ ಆರಂಭದಲ್ಲೇ ಗುರುತಿಸಿ ಸೂಕ್ತವಾದ ಔಷಧೋಪಚಾರ ಪಡೆದುಕೊಂಡರೆ ಇದರಿಂದ ದೂರವಿರಬಹುದಾಗಿದ್ದು ಸಾರ್ವಜನಿಕರು ಆರೋಗ್ಯ ಇಲಾಖೆಯ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಆರೋಗ್ಯದ ಜೀವನ ನಡೆಸಲು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಐಎಂಎ ಅಧ್ಯಕ್ಷ ಡಾ.ಮರೀಗೌಡ  ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಅನಿಲ್ ಕುಮಾರ್.ಎಂ, ಡಿಎಲ್ಓ ಡಾ.ಸೋಮಶೇಖರ್.ಎಂ.ಸಿ, ಡಾ.ಕಾಂತರಾಜು.ಎನ್, ಟಿಹೆಚ್ಓ ಡಾ.ಜವರೇಗೌಡ, ಡಿಹೆಚ್ಇಓ ಡಾ.ವೇಣುಗೋಪಾಲ್, ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!