Thursday, September 19, 2024

ಪ್ರಾಯೋಗಿಕ ಆವೃತ್ತಿ

 ನಿವೇಶನರಹಿತರಿಗೆ ಮಂಜೂರಾದ ಭೂಮಿಗೆ ನಕಲಿ ದಾಖಲೆ ಸೃಷ್ಟಿ : ಆರೋಪ 

ಮಂಡ್ಯ ತಾಲ್ಲೂಕು ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5.25 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದು, ಈ ಜಮೀನನ ಸರ್ವೇ ನಂ. 190ರ,  2 ಎಕರೆ ಭೂಮಿಯನ್ನು ಕಬಳಿಸಲು ಪಟ್ಟಭದ್ರರು ನ್ಯಾಯಾಲಯದಲ್ಲಿ ದಾವೆ ಹೂಡಿ ವಿಳಂಬ ಮಾಡುತ್ತಿದ್ದಾರೆಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ಬೂದನೂರು ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿಲ್ಲದೆ ವೇದಮೂರ್ತಿ ಎಂಬ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಬೂದನೂರು ಗ್ರಾಮದ ಹಾಗೂ ನಿವೇಶನರಹಿತರನ್ನು ವಂಚಿಸಲು ಅಧಿಕಾರಿಗಳು ಹಾಗೂ ಪಟ್ಟಭದ್ರರು ಯತ್ನಿಸುತ್ತಿದ್ದಾರೆಂದು ದೂರಿದರು.

ಇನ್ನೂ ಮಂಜೂರಾಗಿರುವ ಗ್ರಾಮದ ಸರ್ವೆ ನಂ 84 ಹಾಗೂ 85 ರ ಭೂಮಿಗೆ ಕೆಎಟಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು 6 ತಿಂಗಳು ಕಳೆದರೂ ವ್ಯಾಜ್ಯ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ. ಗ್ರಾಮದಲ್ಲಿ ಮಂಜೂರಾಗಿರುವ ಸರ್ವೆ ನಂ.81 ಹಾಗೂ ಇತರ ಭೂಮಿ ಪೈಕಿ ಕಂದಾಯ ಭೂಮಿಗೆ ಗ್ರಾಮ ಪಂಚಾಯತಿ ಅಕ್ರಮವಾಗಿ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆಗೆ ಖಾತೆ ಮಾಡಿಕೊಟ್ಟಿದೆ ಎಂದು ದೂರಿದರು.

ಒಟ್ಟಾರೇ ನಿವೇಶನರಹಿತರನ್ನು ವಂಚಿಸುವ ಉದ್ದೇಶದಿಂದ ಮಂಜೂರಾಗಿರುವ ಭೂಮಿಗೆ ಕೆಲವು ಭೂ ಕಬಳಿಕೆದಾರರು, ರಾಜಕೀಯ ಪುಡಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿರುವುದು ಸ್ಪಷ್ಟವಾಗಿದೆ. ಒಂದು ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಮಿತಿಯ ಸವಿತಾ, ಶಿಲ್ಪ ಹಾಗೂ ಪದ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!