Thursday, September 19, 2024

ಪ್ರಾಯೋಗಿಕ ಆವೃತ್ತಿ

ಭೂ ಸ್ವಾಧೀನ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಆರೋಪ: ಸರ್ಕಾರಿ ವಕೀಲರು ಸೇರಿದಂತೆ ನಾಲ್ವರ ಮೇಲೆ ಎಫ್ಐಆರ್

ನಾಲೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನ ಲೆಕ್ಕಾಚಾರವನ್ನೇ ಬದಲಿಸಿ ನ್ಯಾಯಾಲಯ ಮತ್ತು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಲಕ್ಷಾಂತರ ರೂ. ಕಬಳಿಸಲು ಯತ್ನಿಸಿದ ಪ್ರಕರಣ ಇತ್ತೀಚಿಗೆ ಬಯಲಿಗೆ ಬಂದಿದೆ.

ಈ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರಾದ ಎ.ಎನ್.ರಮೇಶ್, ವಿದ್ಯಾ ಡಿ., ಸರ್ಕಾರಿ ವಕೀಲರಾದ ಎಲ್ ಉಮಾ ಹಾಗೂ ಭೂಮಿಯ ಒಡತಿ ಸಂಜೀವಮ್ಮ ಅವರ ವಿರುದ್ಧ ಮಂಡ್ಯದ ಪಶ್ಷಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಕರಣದ ವಿವರ

ಮದ್ದೂರು ತಾಲೂಕಿನ ಹೆಬ್ಬೆರಳು ಮತ್ತು ಅಂಕನಾಥಪುರ ಗ್ರಾಮಗಳಿಗೆ ಸೇರಿದ ಕೆಲ ಜಮೀನು ಮುತ್ತುರಾಯನಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅದಿ ಸೂಚನೆಯಾಗಿತ್ತು. ಆದರೆ ಹೆಬ್ಬೆರಳು ಗ್ರಾಮಕ್ಕೆ ಸೇರಿದ ಮಂಚಯ್ಯ ಬಿನ್ ಮೋಟೆಯ್ಯ ಎಂಬುವರ ಹೆಸರಿನಲ್ಲಿ ಭೂಸ್ವಾಧೀನವಾಗಿದ್ದ ಅರ್ಧ ಗುಂಟೆ ಜಮೀನನ್ನು ಎಂಟು ಗುಂಟೆ ಎಂದು ತಪ್ಪಾಗಿ ನಮೂದಿಸಿ, ದುರುದ್ದೇಶ ಪೂರಕವಾಗಿ ಹಣವನ್ನು ಲಪಟಾಯಿಸುವ ಸಂಚಿನ ರೂಪವಾಗಿ ಎಂಟು ಗುಂಟೆ ಗೆ ₹ 24,52,871 ಪರಿಹಾರವನ್ನು ಪಡೆದಿದ್ದು ಸಂಜೀವಮ್ಮ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ, ನಂತರ ಸದರಿ ಜಾರಿ ಪ್ರಕರಣವನ್ನು ಲೋಕ ಅದಾಲತ್ ಮುಂದೆ ಮುಕ್ತಾಯಗೊಳಿಸಲು ಸಲ್ಲಿಸಿದ ಮೆಮೋ ಮೇರೆಗೆ ನ್ಯಾಯಾಲಯವು ಈ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.

nudikarnataka.com

ಬಳಿಕ 2023ರ ಫೆಬ್ರುವರಿ 20ರಂದು ವಿಶೇಷ ಭೂಸ್ವಾದಿನಾಧಿಕಾರಿಗಳು, ನಿಗದಿತ ಪ್ರಮಾಣಕ್ಕಿಂತ ಸುಮಾರು 20 ಲಕ್ಷ ರೂ ಹೆಚ್ಚುವರಿಯಾಗಿ ಪಾವತಿ ಮಾಡಿದ ತಪ್ಪಿನ ಅರಿವಾಗಿ ಸರ್ಕಾರಿ ವಕೀಲರಾದ ಎಲ್ ಉಮಾ ಅವರಿಗೆ ಪತ್ರ ಬರೆದು, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ನಾಲ್ಕೈದು ತಿಂಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಇದ್ದಿದ್ದರಿಂಧ ಜಿಲ್ಲಾ ಸರ್ಕಾರಿ ವಕೀಲರಾದ ಎಲ್ ಉಮಾ ಅವರು ಮೇಲ್ಕಂಡ ಎಲ್ಲಾ ಪತ್ರಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಘನ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿಸಲು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂಬುದು ವಕೀಲ ಟಿ ಬಾಲರಾಜು ಅವರು ಪಡೆದುಕೊಂಡ ಆರ್ ಟಿ ಐ ಮಾಹಿತಿಯಿಂದ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ಎ ಎನ್ ರಮೇಶ, ವಿದ್ಯಾ ಜಮೀನಿನ ಮಾಲೀಕರಾದ ಮಂಚಯ್ಯ ಅವರ ನಿಧನದ ಬಳಿಕ ಅವರ ಪತ್ನಿ ಸಂಜೀವಮ್ಮ ಅಪರಾಧಿಕ ಒಳಸಂಚನ್ನು ರೂಪಿಸಿ ಕೊಡಬೇಕಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ಮೋಸದಿಂದ ಡಿಗ್ರಿ ಪಡೆದು ಜಾರಿ ಮಾಡಿಸಿರುವುದು ಸುಳ್ಳು ಎಂದು ತಿಳಿದು ಬಂದಿದ್ದು, ಅಂತಹ ದಸ್ತಾವೇಜನ್ನು ಅಪ್ರಾಮಾಣಿಕವಾಗಿ ಬಳಸಿ ಹಿತಾಸಕ್ತಿ ಕಾಪಾಡಲು ಅಕ್ರಮ ಹಣಗಳಿಸುವ ಉದ್ದೇಶದಿಂದ ಸಾರ್ವಜನಿಕರ ತೆರಿಗೆ ಹಣವನ್ನು ನಷ್ಟ ಉಂಟು ಮಾಡಿದ್ದಲ್ಲದೆ, ನ್ಯಾಯಾಲಯ ಹಾಗೂ ಸರ್ಕಾರವನ್ನು ವಂಚಿಸಿದ ಅಪರಾಧಕ್ಕಾಗಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆರ್‌ಟಿಐ ಕಾರ್ಯಕರ್ತ ಟಿ ಬಾಲರಾಜು ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!