Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದೇ ನಾಟಕದಲ್ಲಿ ಕೆ.ವಿ.ಶಂಕರಗೌಡರ ಸಾಧನೆ ಹೇಳಲು ಸಾಧ್ಯವಿಲ್ಲ: ಡಾ.ರಾಜಪ್ಪ ದಳವಾಯಿ

ಕೆ.ವಿ.ಶಂಕರಗೌಡರ ಜೀವನ ಮತ್ತು ಸಾಧನೆಯನ್ನು ಒಂದು ನಾಟಕದಲ್ಲಿ ಹೇಳುವುದು ಬಹಳ ಕಷ್ಟ. ಅದಕ್ಕೆ ಸುಮಾರು ಹದಿನಾರು ನಾಟಕಗಳನ್ನು ಬರೆಯಬೇಕು. ಅವರದು ಅದ್ಭುತವಾದ ಜೀವನ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

ಮಂಡ್ಯದ ಪಿಇಎಸ್‌ ಇಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ನಿತ್ಯ ಸಚಿವ ಕೆ.ವಿ.ಶಂಕರಗೌಡರ 109ನೇ ಜನ್ಮ ದಿನಾಚರಣೆ, 2024ನೇ ಸಾಲಿನ ರಾಜ್ಯಮಟ್ಟದ ಕೆ.ವಿ.ಶಂಕರಗೌಡ ರಂಗಭೂಮಿ ಮತ್ತು ಕೆ.ಎಸ್‌. ಸಚ್ಚಿದಾನಂದ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕೆ.ವಿ.ಶಂಕರಗೌಡರ ಜೀವನ ಮತ್ತು ಸಾಧನೆಯನ್ನು ಅಭ್ಯಾಸ ಮಾಡಿದ ಸಂದರ್ಭದಲ್ಲಿ ಇವರದು ಒಂದು ನಾಟಕಕ್ಕೆ ಮುಗಿಯುವ ಕಥೆಯಲ್ಲ ಎಂಬುದು ಗೊತ್ತಾಯಿತು. ಇವರ ಜೀವನ ಮತ್ತು ಸಾಧನೆಯನ್ನು ಹೇಳಲು 16 ನಾಟಕಗಳನ್ನು ಬರೆಯಬೇಕು, ಅಂತಹ ಅದ್ಭುತವಾದ ಜೀವನ ಕೆ.ವಿ.ಶಂಕರಗೌಡ ಅವರದ್ದು ಎಂದರು.

ಕವಿ ಒಬ್ಬರು ಹೇಳಿದಂತೆ ಮೂರು ಗಜದ ಟೇಪಿನಲ್ಲಿ ಹೇಗೆ ಆಕಾಶವನ್ನು ಅಳೆಯಲಾಗುವುದಿಲ್ಲವೋ ಅದೇ ರೀತಿ ಒಂದು ನಾಟಕದಲ್ಲಿ ಶಂಕರಗೌಡರ ಜೀವನ ಮತ್ತು ಸಾಧನೆಯನ್ನು ಹೇಳಲು ಸಾಧ್ಯವಿಲ್ಲ. ಕೆ. ವಿ. ಶಂಕರಗೌಡರು ಸಾಮಾನ್ಯ ಹಳ್ಳಿಗಾಡಿನ ಜನರ ಮಕ್ಕಳು ಓದಿ ವಿದ್ಯಾವಂತರಾಗಬೇಕು ಎಂಬ ಉದ್ದೇಶದಿಂದ ಇಂಜಿನಿಯರಿಂಗ್ ಕಾಲೇಜನ್ನು ಬಹಳ ಕಷ್ಟಪಟ್ಟು ಕಟ್ಟಿದರು‌.ಹಳ್ಳಿಗಾಡಿನ ಜನರ ಮಕ್ಕಳಿಗೆ ಯಾವ ಪದವಿ ಪಡೆದರೆ ಉದ್ಯೋಗ ಸಿಗುತ್ತದೆ ಎಂದು ತಿಳಿದಿದ್ದ ಅವರು, ಬಿಎ, ಬಿಎಸ್ಸಿ, ಬಿಕಾಂ, ಬಿಎಡ್ ಮೊದಲಾದ ಪದವಿ ಕಾಲೇಜುಗಳನ್ನು ತೆರೆದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉದ್ಯೋಗ ಸಿಗಲು ಕಾರಣರಾದರು. ಇಂತಹ ಮಹಾನ್ ನಾಯಕ ಕೆ.ವಿ. ಶಂಕರಗೌಡ ಅವರ ಹೆಸರಿನ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿ ನನಗೆ ನೀಡಿರುವುದು ಸಂತಸ ತಂದಿದೆ ಎಂದರು.

ಶಂಕರಗೌಡ ರಂಗ ಭೂಮಿ ಪ್ರಶಸ್ತಿಗೆ ಇದುವರೆಗೂ ಆಯ್ಕೆ ಮಾಡಿರುವ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ, ಆ ಪಟ್ಟಿಯಲ್ಲಿ ಅನೇಕ ಪ್ರತಿಭಾವಂತ ರಂಗಭೂಮಿ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ರಂಗಭೂಮಿಗೆ ಸಂದ ಹೆಮ್ಮೆ. ಕೆ.ವಿ.ಶಂಕರಗೌಡರ ನಾಟಕ ನಾಟಕದಲ್ಲಿ ಅವರ ಜೀವನದ ಚಿಂತನ- ಮಂಥನ ನಡೆಸಲಾಗಿದೆ. ದೇವರಾಜ ಅರಸು ಅವರ ಸಮಕಾಲೀನರಾದ ಶಂಕರಗೌಡರ ನಾಟಕವನ್ನು ಬರೆಯುವುದು ಅಷ್ಟು ಸುಲಭವಲ್ಲ. ಆದರೆ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರು ನಮ್ಮನ್ನು ಹಿಡಿದಿಟ್ಟು ನಿರ್ದೇಶಕ ಪ್ರಮೋದ್ ಶಿಗ್ಗಾವ್ ಅವರ ಜೊತೆ ಕೈ ಜೋಡಿಸಿ ಬಹಳ ಅದ್ಭುತವಾಗಿ ನಿತ್ಯ ಸಚಿವ ಹೆಸರಲ್ಲಿ ಕೆ.ವಿ. ಶಂಕರಗೌಡರ ಜೀವನ ಸಾಧನೆಯನ್ನು ನಾಟಕ ರಚನೆ ಮಾಡಿಸಿದ್ದು, ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಕೆ ವಿ ಶಂಕರಗೌಡರ ರಂಗಭೂಮಿ ಪ್ರಶಸ್ತಿಯಿಂದ ನನ್ನ ರಂಗಭೂಮಿ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕಾಗಿ ನಾನು ಪಿಇಟಿ ಸಂಸ್ಥೆಯ ವಿಜಯ್ ಆನಂದ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇಂದು ಸಮಾಜದಲ್ಲಿ ಕಲುಷಿತ ವಾತಾವರಣವಿದೆ. ಟಿಪ್ಪು ಸುಲ್ತಾನ್ ಹೆಸರು ಕೇಳಿದರೂ ಅನಾಹುತ ಸಂಭವಿಸುವ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಡಾ. ಟಿಪ್ಪು ಸುಲ್ತಾನ್ ಅವರಿಗೆ ಸಮಾಜ ಸೇವಾ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿರುವುದು ಶ್ಲಾಘನೀಯ ಎಂದರು.

ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಈ ವೇದಿಕೆಯಲ್ಲಿ ನಾನು ಡಾ.ಟಿಪ್ಪು ಸುಲ್ತಾನ್ ಅವರೊಂದಿಗೆ ರಂಗಭೂಮಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಧನ್ಯತೆಯ ಭಾವ ಮೂಡಿಸಿದೆ. ಒಬ್ಬ ಲೇಖಕ,ಕವಿ,ಕಲಾವಿದ ಏನನ್ನು ಯೋಚನೆ ಮಾಡುತ್ತಾನೋ ಅದೇ ರೀತಿ ನೀವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಸಮಾನತೆಯ ಭಾರತಕ್ಕೆ ಈ ವೇದಿಕೆ ಸಾಕ್ಷಿಯಾಗಿದ್ದು, ಇದಕ್ಕಾಗಿ ನಾನು ಜನತಾ ಶಿಕ್ಷಣವನ್ನು ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ತಾತನ ಸಾಧನೆಯನ್ನು ಜನತೆಗೆ ತಿಳಿಸಿದ್ದಾರೆ

ಪಿಇಟಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಮಾತನಾಡಿ, ದಳವಾಯಿ ರಾಜಪ್ಪ ಅವರು ನಮ್ಮ ತಾತ ಕೆ.ವಿ. ಶಂಕರಗೌಡರ ಜೀವನ ಮತ್ತು ಸಾಧನೆಯನ್ನು ನಾಟಕದ ಮೂಲಕ ನಾಡಿನ ಜನತೆಗೆ ತಿಳಿಸಿದ್ದಾರೆ. ಅವರಿಗೆ ನಮ್ಮ ಕುಟುಂಬದ ಪರವಾಗಿ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತೇನೆ. ದಳವಾಯಿ ರಾಜಪ್ಪ ಅವರು ರಂಗಭೂಮಿಯಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಷದ ಸಂಗತಿ. ಹಾಗೆಯೇ ನಮ್ಮ ತಂದೆ ಕೆ.ಎಸ್. ಸಚ್ಚಿದಾನಂದ ಅವರ ಹೆಸರಿನ ರಾಜ್ಯಮಟ್ಟದ ಸೇವಾ ಪ್ರಶಸ್ತಿಯನ್ನು ನಾಗಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಟಿಪ್ಪು ಸುಲ್ತಾನ್ ಅವರಿಗೆ ನೀಡಿರುವುದು ಬಹಳ ಸಂತೋಷ ತಂದಿದೆ ಎಂದರು.

ವೇದಿಕೆಯಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್, ನಿರ್ದೇಶಕ  ಡಾ.ರಾಮಲಿಂಗಯ್ಯ, ಪ್ರೊ.ವೀರೇಶ್ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!