ಸಾರ್ವಜನಿಕರು ಮತ್ತು ಶಿಕ್ಷಣಾಸಕ್ತರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳು ಪ್ರತಿವರ್ಷವೂ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ರಂಗನಾಥ್ ಕಾಂಪ್ಲೆಕ್ಸ್ ನಲ್ಲಿ ಟಿ.ಎಂ.ಪ್ರಕಾಶ್ ಹಾಗೂ ಶಿಕ್ಷಣಾಶಕ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2021-2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳಾದ ಎಂ.ಎನ್.ಸೂರಜ್ ಗೌಡ ಹಾಗೂ ಕೆ.ಎಂ.ಗಗನ್ ಅವರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿದ್ದು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ ಪ್ರೋತ್ಸಾಹಿಸಿದರೆ ಸಾಧಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತಾಲ್ಲೂಕಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ. ಹಾಗೆಯೇ ಮಾರಗೌಡನಹಳ್ಳಿ ವೇದಿಕಾ ಮಹೇಶ್ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ತಾಲೂಕಿನ ಶೈಕ್ಷಣಿಕ ಸಾಧನೆಗೆ ಹಿರಿಮೆಯ ಗರಿಯಾಗಿದೆ. ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಓದಿನ ಕಡೆಗೆ ಇನ್ನೂ ಹೆಚ್ಚಿನ ಗಮನ ಕೊಡಬೇಕು. ಸಮಾಜದಿಂದ ಪಡೆಯುತ್ತಿರುವ ಗೌರವಕ್ಕೆ ಪ್ರತಿಫಲವಾಗಿ ಉನ್ನತ ಹುದ್ದೆ ಪಡೆದು ಸಮಾಜದ ಋಣ ತೀರಿಸಬೇಕೆಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ, ಡಾ.ಜಗದೀಶ್, ಸಮಾಜ ಸೇವಕ ಟಿ.ಎಂ.ಪ್ರಕಾಶ್, ವಾಸುಕಿ, ಶೆಟ್ಟಹಳ್ಳಿ ಟಿಎಪಿಸಿಎಂಎಸ್ ನಿರ್ದೇಶಕ ರಾಜಶೇಖರ್, ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶಿವರಾಜ್ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್, ಸುರೇಶ್ ಬಾಬು, ಸಿದ್ದರಾಜು ಸೇರಿದಂತೆ ವಿದ್ಯಾರ್ಥಿಗಳ ಪೋಷಕರಿದ್ದರು.
ಇದನ್ನು ಓದಿ: ಶೀಘ್ರದಲ್ಲಿ ನಂದಿನಿ ಕ್ಷೀರ ಬ್ಯಾಂಕ್ ಆರಂಭ