Thursday, October 24, 2024

ಪ್ರಾಯೋಗಿಕ ಆವೃತ್ತಿ

ಶೀಘ್ರದಲ್ಲಿ ನಂದಿನಿ ಕ್ಷೀರ ಬ್ಯಾಂಕ್ ಆರಂಭ

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಕಾಲದಲ್ಲಿ ಸಾಲ-ಸೌಲಭ್ಯ ನೀಡುವ ಸಲುವಾಗಿ ಶೀಘ್ರದಲ್ಲಿ ನಂದಿನಿ ಕ್ಷೀರ ಬ್ಯಾಂಕ್ ಆರಂಭಿಸಲಾಗುವುದು ಎಂದು ಕೆಎಂಎಫ್ ನಿರ್ದೇಶಕ ವಿ.ಎಂ ವಿಶ್ವನಾಥ್ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಮೋಳೆದೊಡ್ಡಿಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ, ಜಿಲ್ಲಾ ಸಹಕಾರ ಹಾಲು ಒಕ್ಕೂಟ ಗೆಜ್ಜಲಗೆರೆ ಹಾಗೂ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ಕೆಎಂಎಫ್ ಸಂಜೀವಿನಿ ಐಬಿಪಿ 2021-2022 ಯೋಜನೆಯಡಿ ನಡೆದ 7 ದಿನದ ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಹೈನುಗಾರಿಕೆ ಅವಲಂಬಿಸಿರುವ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ರೈತರು ಹಣ ತೆಗೆದುಕೊಳ್ಳಲು ಪ್ರತಿ ಬಾರಿಯೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಯನ್ನು ತಪ್ಪಿಸಲು ಮಂಡ್ಯ ಮತ್ತು ಮಳವಳ್ಳಿಯಲ್ಲಿ ಶೀಘ್ರವಾಗಿ ನಂದಿನಿ ಕ್ಷೀರ ಬ್ಯಾಂಕ್ ಆರಂಭಿಸಿ ರೈತರಿಗೆ ಬೇಕಾದ ಸಾಲ ಸೌಲಭ್ಯವನ್ನು ನೀಡಲಾಗುವುದು ಎಂದರು.

ಮಕ್ಕಳು, ಮಹಿಳೆಯರು ವೃದ್ಧರು ಸೇರಿದಂತೆ ಪ್ರತಿಯೊಬ್ಬರೂ ನಂದಿನಿ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳನ್ನು ಬಳಸುತ್ತಾರೆ. ಹಾಗಾಗಿ ಜನರ ಆರೋಗ್ಯದ ದೃಷ್ಠಿಯಿಂದ ಶುದ್ದ ಹಾಲನ್ನು ಪೂರೈಕೆ ಮಾಡಬೇಕು. ಶುದ್ಧ ಹಾಲಿನ ಜೊತೆ ಜಿಡ್ಡಿನ ಅಂಶ ಹೆಚ್ಚಾಗಿ ಕಂಡು ಬಂದರೆ ಅಂತಹ ಹಾಲಿಗೆ ಉತ್ತಮ ಬೆಲೆ ನೀಡಲಾಗುವುದು ಎಂದರು.

ಮಂಡ್ಯ ಹಾಲು ಒಕ್ಕೂಟ ಹಾಗೂ ಕೆಎಂಎಫ್‌ನಿಂದ ರಾಸುಗಳಿಗೆ ವಿಮೆ, ಹಾಲು ಕರೆಯುವ ಯಂತ್ರ, ಕಟ್ಟಿಂಗ್ ಮಿಷನ್, ಮ್ಯಾಟ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು,ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಮನ್‌ಮುಲ್ ವ್ಯವಸ್ಥಾಪಕ ಎಸ್. ಪ್ರಭಾಕರ್ ಮಾತನಾಡಿ, ರೈತರ ಹೈನುಗಾರಿಕೆಯನ್ನು ಉತ್ತೇಜಿಸಲು ಮಂಡ್ಯ ಹಾಲು ಒಕ್ಕೂಟ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು,ಇದನ್ನು ಬಳಸಿಕೊಂಡು ಆರ್ಥಿಕತೆಯಲ್ಲಿ ಸದೃಢರಾಗಬೇಕೆಂದು ಕರೆ ನೀಡಿದರು.

ಹಸುಗಳನ್ನು ಕಟ್ಟುವ ಕೊಟ್ಟಿಗೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಎದೆಬಾಹು ಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು, ಪೌಷ್ಠಿಕಾಂಶದ ಆಹಾರವನ್ನು ನೀಡಬೇಕು, ವರ್ಷಕ್ಕೆ ಎರಡು ಬಾರಿ ಜಂತುಹುಳು ಔಷಧಿಯನ್ನು ನೀಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರದಲ್ಲಿ ಅಧ್ಯಕ್ಷೆ ರೇಣುಕಾ, ಮನ್‌ಮುಲ್ ತಾಲ್ಲೂಕು ಮುಖ್ಯಸ್ಥ ಮಧುಶಂಕರ್, ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು, ಸುಕನ್ಯ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!