Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೀಳಿದ ‘ಡಿ’ ಬಾಸ್

ಸದ್ಯ ಲೋಕಸಭಾ ಚುನಾವಣೆ ರಂಗೇರಿದ್ದು, ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಮಂಡ್ಯದ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ನಟ ದರ್ಶನ್ ಪ್ರಚಾರ ಆರಂಭಿಸಿದ್ದಾರೆ. ಈ ಬೆನ್ನಲ್ಲೇ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಇದೀಗ, ಎಲ್ಲ ಚರ್ಚೆಗಳಿಗೂ ಸ್ವತಃ ದರ್ಶನ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸುಮಲತಾ ಅಂಬರೀಶ್ ಬಿಜೆಪಿ ಸೇರಿದ ನಂತರ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಪ್ರಚಾರದ ವೇಳೆ ಮಾತನಾಡಿದ ನಟ ದರ್ಶನ್, “ನಾನು ಎಲ್ಲಿಯೂ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ. ನಾನು ವ್ಯಕ್ತಿಯ ಪರವಾಗಿ ಪ್ರಚಾರ ಮಾಡುತ್ತೇನೆ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ನನಗೆ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

“ಮಾಧ್ಯಮದವರು ಈ ಬಗ್ಗೆ ಏನೇನೋ ಹಾಕಿದರೇ ತುಂಬಾ ಕಷ್ಟ ಆಗುತ್ತೆ. ಹಾಗಾಗಿ, ನಾನು ಈ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ. ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಸೀಟ್ ಸಿಕ್ಕಿಲ್ಲ ಎಂದರೆ, ನಮ್ಮ ಪರವಾಗಿ ಪ್ರಚಾರ ಮಾಡಬೇಕು ಎಂದು ಉದಯ್ ಗೌಡರು ಕೇಳಿದ್ದರು. ಹಾಗಾಗಿ, ಅವರು ಮೊದಲು ಕರೆದರು ಎನ್ನುವ ಕಾರಣಕ್ಕೆ ಪ್ರಚಾರಕ್ಕೆ ಬಂದಿದ್ದೇನೆ” ಎಂದು ತಿಳಿಸಿದರು.

“ಕಾಂಗ್ರೆಸ್‌ ಪಕ್ಷದಿಂದ ಸ್ಟಾರ್ ಚಂದ್ರು ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ನಿಮ್ಮ ಅತ್ಯಮೂಲ್ಯವಾದ ಮತವನ್ನು ಅವರಿಗೆ ನೀಡಿ. ನರೇಂದ್ರ ಹಾಗೂ ಉದಯ್ ಅವರ ಕೈಗಳನ್ನು ಬಲಪಡಿಸಿ” ಎಂದು ಕೋರಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ಎಚ್ ​ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.

ಸುಮಲತಾ ಅವರು ಬಿಜೆಪಿ ಸೇರಿರುವದರಿಂದ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕಿದೆ. ಆದರೆ, ಸುಮಲತಾ ಎಲ್ಲಿಯೂ ಕಾಣಿಸುತ್ತಿಲ್ಲ. ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ. ಮೌನವಾಗಿದ್ದಾರೆ. ಹೀಗಿರುವಾಗಲೇ ಸುಮಲತಾ ಆಪ್ತ ಎನಿಸಿಕೊಂಡಿರುವ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮದ್ದೂರು ಶಾಸಕ ಉದಯ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!