Friday, June 21, 2024

ಪ್ರಾಯೋಗಿಕ ಆವೃತ್ತಿ

ಬಿಟ್‌ಕಾಯಿನ್ ಹಗರಣ| ನಟಿ ಶಿಲ್ಪಾಶೆಟ್ಟಿ ಪತಿಯ ₹97.79 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ 97.79 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಸುಮಾರು 7,000 ಕೋಟಿ ರೂಪಾಯಿಗಳ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ರ ನಿಬಂಧನೆಗಳ ಅಡಿಯಲ್ಲಿ ಇಡಿ ವಶಪಡಿಸಿಕೊಂಡ ಆಸ್ತಿಗಳ ಪೈಕಿ ಜುಹು ಫ್ಲಾಟ್ ಕೂಡಾ ಸೇರಿದೆ. ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳನ್ನೂ ಜಪ್ತಿ ಮಾಡಲಾಗಿದೆ.

ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಹಾಗೆಯೇ ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್ ಮತ್ತು ಮಹೇಂದರ್ ಭಾರದ್ವಾಜ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದರು.

ಈ ವ್ಯಕ್ತಿಗಳು 2017 ರಲ್ಲಿ ಶೇಕಡ ಹತ್ತರಷ್ಟು ಮಾಸಿಕ ಆದಾಯದ ಸುಳ್ಳು ಭರವಸೆಯನ್ನು ನೀಡಿ 6,600 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ರೂಪದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗ್ರಹಿಸಿದ ಬಿಟ್‌ಕಾಯಿನ್ ಅನ್ನು ಬಿಟ್‌ಕಾಯಿನ್ ಮೈನಿಂಗ್‌ಗೆ ಬಳಸಿ ಹೂಡಿಕೆದಾರರು ಕ್ರಿಪ್ಟೋಕರೆನ್ಸಿ ಸ್ವತ್ತುಗಳಲ್ಲಿ ಭಾರಿ ಆದಾಯವನ್ನು ಪಡೆಯುವ ಉದ್ದೇಶ ಹೊಂದಿದ್ದರು. ಆದರೆ ಈ ವ್ಯಕ್ತಿಗಳು ಹೂಡಿಕೆದಾರರನ್ನು ವಂಚಿಸಿದ್ದಾರೆ. ಅಸ್ಪಷ್ಟ ಆನ್‌ಲೈನ್ ವ್ಯಾಲೆಟ್‌ಗಳಲ್ಲಿ ಅಕ್ರಮವಾಗಿ ಸಂಪಾದಿಸಿದ ಬಿಟ್‌ಕಾಯಿನ್ ಅನ್ನು ಮರೆಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಡಿ ಪ್ರಕಾರ, ಕುಂದ್ರಾ ಅವರು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಸ್ಥಾಪಿಸುವ ಯೋಜನೆಯ ಹಿಂದಿರುವ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್‌ಕಾಯಿನ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕ್ರಿಪ್ಟೋಕರೆನ್ಸಿ ಸ್ವತ್ತುಗಳು ಪ್ರಸ್ತುತ 150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಏಜೆನ್ಸಿಯ ಪ್ರಕಾರ, ಒಪ್ಪಂದವು ನಡೆಯದ ಕಾರಣ, ಕುಂದ್ರಾ ಇನ್ನೂ ಬಿಟ್‌ಕಾಯಿನ್ ಅನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಈ ನಡುವೆ ಸಿಂಪಿ ಭಾರದ್ವಾಜ್ ಅವರನ್ನು ಡಿಸೆಂಬರ್ 17, 2023 ರಂದು, ನಿತಿನ್ ಗೌರ್ ಅವರನ್ನು ಡಿಸೆಂಬರ್ 29, 2023 ರಂದು ಮತ್ತು ನಿಖಿಲ್ ಮಹಾಜನ್ ಅವರನ್ನು ಜನವರಿ 16, 2023 ರಂದು ಬಂಧಿಸಲಾಗಿದ್ದು, ಇವೆರೆಲ್ಲರೂ ಕೂಡಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಪ್ರಮುಖ ಆರೋಪಿಗಳಾದ ಅಜಯ್ ಭಾರದ್ವಾಜ್ ಮತ್ತು ಮಹೇಂದ್ರ ಭಾರದ್ವಾಜ್ ತಲೆಮರೆಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!