Wednesday, September 25, 2024

ಪ್ರಾಯೋಗಿಕ ಆವೃತ್ತಿ

ಬಾಲಗಂಗಾಧರನಾಥಶ್ರೀ ದೂರದೃಷ್ಠಿಯಿಂದ ಆದಿಚುಂಚನಗಿರಿ ಮಠ ವಿಸ್ತಾರ: ಚಲುವರಾಯಸ್ವಾಮಿ

ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ಸಂದರ್ಭದಲ್ಲಿ ಆದಿಚುಂಚನಗಿರಿ ಶ್ರೀಮಠದ ಪೀಠಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ನಾಡಿನ ಧಾರ್ಮಿಕ, ಆರೋಗ್ಯ, ಶಿಕ್ಷಣ ಮತ್ತು ಪರಿಸರ ಸೇವೆಗೆ ಅಮೂಲಾಗ್ರ ಸೇವೆ ಸಲ್ಲಿಸಿ, ಈ ಮಠದ ವಿಸ್ತಾರತೆಯನ್ನು ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಧಾರ್ಮಿಕ ಸಂತ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಿಸಿದರು.

ಆದಿಚುಂಚನಗಿರಿಯ ಶ್ರೀಮಠದಲ್ಲಿ ಆಯೋಜನೆಗೊಂಡಿರುವ ಡಾ.ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮತ್ತು ಶ್ರೀಗುರು ಸಂಸ್ಮರಣೋತ್ಸವ ಹಾಗೂ ರಾಜ್ಯ ಮಟ್ಟದ 45ನೇ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಚುಂಚಶ್ರೀ ಬಗ್ಗೆ ಗುಣಗಾನ

ಜಾತ್ಯತೀತ ಮಠವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆದಿಚುಂಚನಗಿರಿ ಶ್ರೀಮಠದ ನಿರ್ವಹಣೆಯನ್ನು ಸುಸೂತ್ರವಾಗಿ ನಿರ್ವಹಿಸುತ್ತಿರುವ ಡಾ.ನಿರ್ಮಲಾನಂದನಾಥ ಶ್ರೀಗಳ ಬಗ್ಗೆ ಕೃಷಿ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಶ್ರೀಮಠದ ಶಾಖಾ ಮಠಗಳ ಸ್ವಾಮೀಜಿಗಳನ್ನು, ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ, ಶೈಕ್ಷಣಿಕ ಹಾಗೂ ವಿಜ್ಞಾನ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿರುವ ಡಾ. ನಿರ್ಮಲಾನಂದನಾಥ ಶ್ರೀಗಳ ಸೇವೆ ಅನುಕರಣೀಯ ಎಂದು ಚಲುವರಾಯಸ್ವಾಮಿ ಬಣ್ಣಿಸಿದರು. 

ಭೈರವೈಕ್ಯ ಶ್ರೀಗಳ ದಾರಿಯಲ್ಲೇ ನಡೆದು ತಮ್ಮ ಬುದ್ದಿಮತ್ತೆಯಿಂದ ಶ್ರೀಮಠದ ಹಾಗೂ ಸಮಾಜದ ಅಭಿವೃದ್ದಿಯ ಕಾಳಜಿ ತೋರುತ್ತಿರುವ ನಿರ್ಮಲಾನಂದನಾಥ ಶ್ರೀಗಳ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಸಚಿವರು ಆಶಿಸಿದರು.

 

ನಮ್ಮ ದೇಶ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸನಾತನ ಸಂಸ್ಕೃತಿಯ ಶ್ರೀಮಂತಿಕೆಯ ರಾಷ್ಟ್ರ, ವಿಶ್ವದ ಎಲ್ಲ ರಾಷ್ಟ್ರಗಳು ತಮ್ಮದೇ ಆದ ಸಂವಿಧಾನ ರಚಿಸಿಕೊಂಡು ಆಡಳಿತ ನಡೆಸುತ್ತಿವೆ, ಅದರೆ ಭಾರತ ಪ್ರಜಾಪ್ರಭುತ್ವದ ಆಶಯದಂತೆ ಸಂವಿಧಾನದ ಜೊತೆಗೆ ರಾಮಾಯಣ, ಮಹಾಭಾರತದ ಆದರ್ಶಗಳನ್ನು ಮುಂದಿಟ್ಟುಕೊಂಡು ಆಳ್ವಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರವೆಂದರು.

ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ತಮ್ಮ ಆರೋಗ್ಯ ಮತ್ತು ಆಯಸ್ಸು ಲೆಕ್ಕಿಸದೇ, ಶ್ರೀಮಠ ಮತ್ತು ಸಮಾಜದ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸಿ, ಆದಿಚುಂಚನಗಿರಿ ಮಠವನ್ನು ಲಕ್ಷಾಂತರ ಜನರ ಸದ್ಬಳಕೆಗೆ ಮೀಸಲಿಟ್ಟು ಶ್ರೀಮಠದ ಖ್ಯಾತಿಯನ್ನು ವಿಸ್ತಾರಗೊಳಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾನವ ಶಿಕ್ಷಣವಂತನಾದ ಮೇಲೆ ಭಾವನಾತ್ಮಕತೆ ಕೃತಕವಾಗುತ್ತಿರುವುದು ವಿಷಾದದ ಸಂಗತಿ, ಗುರು ಹಿರಿಯರು ಹಾಗೂ ತಂದೆ, ತಾಯಿಯರ ಬಗ್ಗೆ ತೋರಿಕೆಯ ಪ್ರೀತಿ ವ್ಯಕ್ತವಾಗುತ್ತಿರುವುದು ಸರಿಯಲ್ಲ, ಮನುಷ್ಯ ನಮ್ಮ ಧರ್ಮ, ಸಂಸ್ಕೃತಿಯ ಅರಿವಿನಂತೆ ಬಾಳ್ವೆ ನಡೆಸಬೇಕೆಂದು ಕಿವಿಮಾತು ಹೇಳಿದರು.

ಶ್ರೀಮಠದಲ್ಲಿ ಪ್ರತಿವರ್ಷ ಆಯೋಜನೆಗೊಳ್ಳುವ ಜಾನಪದ ಕಲಾಮೇಳಕ್ಕೆ ಭೈರವೈಕ್ಯ ಶ್ರೀಗಳು,  ನಾಡೋಜ  ಹೆಚ್.ಎಲ್.ನಾಗೇಗೌಡರ ದೂರದೃಷ್ಟಿ ಕಾರಣವಾಗಿದ್ದು, ನಾಡಿನ ಮೂಲೆ – ಮೂಲೆಗಳಿಂದ ಆಗಮಿಸಿ ತಮ್ಮ ಕಲಾ ನೈಪುಣ್ಯತೆ ಸಾರುವ ಕಲಾವಿದರಿಗೆ ಈ ಮಠದ ಪರವಾಗಿ ಅಭಿನಂದನೆ ಸಲ್ಲಿಸಿದರು.

ನಾಡಿನ ಯುವ ಜನಾಂಗದ ರೀತಿ ರಿವಾಜುಗಳು ಬದಲಾಗುತ್ತಿರುವುದು ಸಮಾಜಕ್ಕೆ ಹಾನಿ. ಇದನ್ನು ಸರಿಪಡಿಸಲು ಧರ್ಮಪೀಠಗಳ ಪೀಠಾಧಿಪತಿಗಳು ಕಾಳಜಿ ತೋರಬೇಕೆಂದು ಮನವಿ ಮಾಡಿದರು.

ಶ್ರೇಷ್ಠ ಆಳ್ವಿಕೆಗೆ ಹೆಸರಾದ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುಗಮವಾಗಲು ನಾಡಿನ ಚಿಂತಕರು, ಸಾಹಿತಿಗಳು ಹಾಗೂ ಮಠಾಧೀಶರು ಮುತುವರ್ಜಿ ವಹಿಸಬೇಕೆಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದಶ್ರೀ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ವಿಶ್ವಮಾನವ ಕ್ಷೇತ್ರ ಪೀಠಾಧ್ಯಕ್ಷ ಪುರುಷೋತ್ತಮಾನಂದನಾಥಶ್ರೀ, ಶ್ರೀಮಠದ ಕಾರ್ಯದರ್ಶಿ ಪಸನ್ನನಾಥಶ್ರೀ, ವಿವಿಧ ಶಾಖಾ ಮಠಗಳ ಪೀಠಾಧಿಪತಿಗಳಾದ ಸೋಮೇಶ್ವರನಾಥಶ್ರೀ, ಅನ್ನದಾನೇಶ್ವರನಾಥಶ್ರೀ, ಶಂಭುನಾಥೇಶ್ವರಶ್ರೀ, ಸೌಮ್ಯನಾಥೇಶ್ವರಶ್ರೀ, ಶಾಸಕ ರಮೇಶ್ ಬಾಬು, ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!