Thursday, September 19, 2024

ಪ್ರಾಯೋಗಿಕ ಆವೃತ್ತಿ

ವಕೀಲರ ಸಂರಕ್ಷಣಾ ಕಾಯ್ದೆ : ಬೆಳಗಾವಿ ಚಲೋಗೆ ಹೊರಟ ಮಂಡ್ಯ ವಕೀಲರು

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೀಡಿರುವ ಬೆಳಗಾವಿ ಚಲೋ ಹೋರಾಟಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ (AILU)ಕರ್ನಾಟಕ ರಾಜ್ಯ ಸಮಿತಿ ಬೆಂಬಲ ಸೂಚಿಸಿದೆ.

ಮಂಡ್ಯದ ಹಲವು ವಕೀಲರು ತಂಡವಾಗಿ ಇಂದು ಬೆಳಗಾವಿಗೆ ತೆರಳಲಿದ್ದು, ಈ ಅಧಿವೇಶನದಲ್ಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು AILU ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ತಿಳಿಸಿದರು.

ದೇಶಾದ್ಯಂತ ದಿನನಿತ್ಯ ಒಂದಲ್ಲಾ ಒಂದು ಕಡೆ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ನ್ಯಾಯಾಂಗದ ಭಾಗವಾಗಿ ಕೆಲಸ ಮಾಡುವ ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ದೇಶಾದ್ಯಂತ ವಕೀಲರು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಹಲವಾರು ಮನವಿ ಸಲ್ಲಿಸಿ, ಪ್ರತಿಭಟನೆ ಮತ್ತು ಹೋರಾಟ ಮಾಡಿದರೂ ಸರ್ಕಾರಗಳು ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ.

ಈಗಾಗಲೇ ವಕೀಲರ ಸಂರಕ್ಷಣಾ ಕಾಯ್ದೆಯ ಕರಡನ್ನು ರೂಪಿಸಿ ಅದನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಲಾಗಿದ್ದು,ಪ್ರಸ್ತುತ ಅಧಿವೇಶನದಲ್ಲೇ ಜಾರಿಗೆ ತರಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಒತ್ತಾಯಿಸುತ್ತದೆ ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದಿಂದ ಬೆಳಗಾವಿ ಚಲೋಗೆ ಹೊರಟ ತಂಡಕ್ಕೆ ಮಂಡ್ಯದಲ್ಲಿ AILU ಮಂಡ್ಯ ಘಟಕದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಶೀಘ್ರವಾಗಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಮುಂದಾಗಬೇಕು. ನಾಳೆ ನಡೆಯುವ ಬೆಳಗಾವಿ ಚಲೋಗೆ ರಾಜ್ಯದಾದ್ಯಂತ ವಕೀಲರು ಸಾಕಷ್ಟು ಸಂಖ್ಯೆಯಲ್ಲಿ ಬೆಳಗಾವಿಗೆ ತೆರಳುತ್ತಿದ್ದು, ಈ ಅಧಿವೇಶನದಲ್ಲೇ ಕಾಯ್ದೆ ಜಾರಿಗೆ ತರಲು ಸಂಘಟಿತ ಹೋರಾಟ ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ AILU ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಹಿರಿಯ ವಕೀಲರಾದ ಎಸ್.ಕೆ. ಪ್ರಕಾಶ್, ಎಂ.ಬಿ.ಬಸವರಾಜು, AILU ಮಂಡ್ಯ ಉಪಾಧ್ಯಕ್ಷ ದೇವರಾಜು, ಎಸ್.ಮಹದೇವ ಟಿ ಡಿ , ರಜನಿಕಾಂತ್ತ್ ಎಸ್ ,
ಜಗನ್ನಾಥ ಆರ್ ಮತ್ತು ತಿಮ್ಮೇಗೌಡ ಹಾಗೂ ಮಂಡ್ಯ AILU ಕಾರ್ಯದರ್ಶಿ ಚಂದನ್ ಕುಮಾರ್ ಸೇರಿದಂತೆ ಮತ್ತಿತರ ವಕೀಲರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!