Monday, November 23, 2026

ಪ್ರಾಯೋಗಿಕ ಆವೃತ್ತಿ

ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಚರ್ಚೆಗೆ ಆಗ್ರಹ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ವಕೀಲರ ರಕ್ಷಣಾ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡಿ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ವಕೀಲರ ಸಂಘವು ಶುಕ್ರವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಕೀಲರು, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ಪೋಲಿಸರಿಂದ ಹಾಗೂ ಸಾರ್ವಜನಿಕರಿಂದ ಹಲ್ಲೆಗಳು, ದೌರ್ಜನ್ಯಗಳು ಮತ್ತು ಕೊಲೆಗಳು ನಡೆಯುತ್ತಲೆ ಇವೆ, ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು ಒಂದು ಲಕ್ಷ ವಕೀಲರು ವಕೀಲಿ ವೃತ್ತಿ ಮಾಡುತ್ತಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಕೀಲ ವೃತ್ತಿಯು ಅತ್ಯಂತ ಗೌರವಯುತವಾದ ಹಾಗೂ ಜವಾಬ್ದಾರಿಯುತವಾದ ಒಂದು ವೃತ್ತಿಯಾಗಿದ್ದು, ವಕೀಲರು ಪ್ರತಿನಿತ್ಯ ತಮ್ಮ ಕಕ್ಷಿದಾರರ ಹಿತರಕ್ಷಣೆಗಾಗಿ ಮತ್ತು ಕಕ್ಷಿದಾರರ ನ್ಯಾಯಬದ್ದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ತಮ್ಮ ಆರೋಗ್ಯದ ಕಡೆಯು ಗಮನ ಹರಿಸದೆ, ಹಗಲು ರಾತ್ರಿ ಅಧ್ಯಯನ ಮಾಡಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವಿರತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ, ಅಂತಹವರಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಸಾರ್ವಜನಿಕವಾಗಿ ನ್ಯಾಯ ಒದಗಿಸಿಕೊಡುವ ವಕೀಲರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಂರಕ್ಷಣಾ ಕಾಯ್ದೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ. ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಮದ್ದೂರಿನಲ್ಲಿ ನಡೆದ ವಕೀಲನ ಕೊಲೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಕೀಲನ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯ, ಹೀಗೆ ಹಲವಾರು ದೌರ್ಜನ್ಯಗಳು, ಹಲ್ಲೆಗಳು ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ. ಆದರೂ ಸರ್ಕಾರ ಕಾಯ್ದೆ ರೂಪಿಸದೇ ಇರುವುದು ಖಂಡನೀಯ ಎಂದರು.

ವೈದ್ಯರಿಗೆ ರಕ್ಷಣಾ ಕಾಯ್ದೆ ಇರುವಂತೆ, ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ವಕೀಲರಿಗೂ ರಕ್ಷಣೆ ನೀಡುವ ಕಾಯ್ದೆಯು ಅತ್ಯಗತ್ಯವಾಗಿದೆ. ಈ ಸಂಬಂಧ ಹಲವಾರು ಬಾರಿ ಸರ್ಕಾರವನ್ನು ರಕ್ಷಣಾ ಕಾಯ್ದೆಯನ್ನು ರೂಪಿಸುವಂತೆ ಒತ್ತಾಯ ಮಾಡಿದರೂ, ಯಾವ ಸರ್ಕಾರಗಳು ಇದುವರೆಗೂ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ತಾಳಿವೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ರಾಜೇಂದ್ರ, ಉಪಾಧ್ಯಕ್ಷ ಕೆ.ಎಲ್. ಮರಿಸ್ವಾಮಿ, ಪದಾಧಿಕಾರಿಗಳಾದ ಎನ್.ಎಂ.ಮಹದೇವ, ಎಂ.ರೂಪ, ರಾಮಚಂದ್ರ, ಸಿದ್ದರಾಜು, ಡಿ.ಎಂ.ಮಹೇಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ