Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ಮತ್ತೆ ನೀರು ಬಿಡಕೂಡದು : ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ವಾಡಿಕೆಯಂತೆ ಮಳೆ ಆಗಿಲ್ಲ. ಈಗಾಗಲೇ 236 ತಾಲ್ಲೂಕುಗಳ ಪೈಕಿ 192 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ, ವಿಶೇಷವಾಗಿ ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರು ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ನೀರು ಮಾತ್ರ ಇಂಥ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು 7 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಶ್ಚರ್ಯಕರವಾಗಿದೆ ಆಘಾತಕಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿ, ಶುಕ್ರವಾರ ಪ್ರತಿಭಟನೆ ನಡೆಸಿತು.

ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೆ ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ನೀರಿಲ್ಲ, ಕೈಗಾರಿಕೆಗಳಿಗೆ ಕೊಡಬೇಕಾದ ನೀರಿಲ್ಲ. ಹೀಗಿರುವಾಗ 1 ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ? ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು? ಬೆಂಗಳೂರಿನ ಒಂದುವರೆ ಕೋಟಿ ಜನರು ಕುಡಿಯುವ ನೀರು ಇಲ್ಲದೇ ಸಾಯಬೇಕೇ?

ಕಾವೇರಿ ನಿರ್ವಹಣಾ ಪ್ರಾಧಿಕಾರದ ಅದೇಶವನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಗಳಿಗಿಂತ ಯಾವುದೋ ಪ್ರಾಧಿಕಾರದ ಆದೇಶ ದೊಡ್ಡದಾಗಲು ಹೇಗೆ ಸಾಧ್ಯ? ಈ ಪ್ರಾಧಿಕಾರದ ಅದೇಶ ಪಾಲಿಸಲು ಹೋಗಿ ಅವರು ಕೇಳಿದಷ್ಟು ನೀರನ್ನು ಇದುವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರದ ದೊಡ್ಡ ತಪ್ಪು ಈಗಲೂ ಸರ್ಕಾರ ಸ್ಪಷ್ಟ ಧೋರಣೆಯನ್ನು ಪ್ರಕಟಿಸಿದಂತೆ ಕಾಣುತ್ತಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುವುದನ್ನು ಬಿಟ್ಟು ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದೃಢ ಘೋಷಣೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಮತ್ತೆ ನೀರು ಬಿಟ್ಟರೆ ಕಸಿಯುವ ನೀರೂ ಇಲ್ಲದೇ ಹಾಹಾಕಾರ ಉಂಟಾಗಲಿದೆ. ಅದರಿಂದ ಆಗುವ ಅನಾಹುತಗಳನ್ನು ಊಹಿಸಲೂ ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಸಂಸದರೂ ದೆಹಲಿಯಲ್ಲಿ – ಧರಣಿ ನಡೆಸಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ರಾಜೀನಾಮೆ ನೀಡಲೂ ಸಿದ್ಧವಾಗಿರಬೇಕು.

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶವನ್ನು ಪಾಲಿಸಬಾರದು, ತಮಿಳುನಾಡಿಗೆ ಮತ್ತೆ ನೀರು ಬಿಡಕೂಡದು, ಒಂದೊಮ್ಮೆ ಸರ್ಕಾರ ಅಂತಹ ಸಾಹಸಕ್ಕೆ ಕೈ ಹಾಕಿದರೆ ರಾಜ್ಯದ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪವಾದ ಪ್ರತಿಭಟನೆ ಹಮ್ಮಿಕೊಳ್ಳಲಿದೆ  ಎಂದು ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ ಹೇಳಿದರು.

ಜಿಲ್ಲಾಧಿಕಾರಿಯ ಕಚೇರಿಯ ಸಹಾಯಕ ನಿರ್ದೇಶಕ ಚೇತನ್ ಎಸ್. ಅವರು ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸ್ವಾಮಿಗೌಡ, ಸ್ವಾಮಿ, ಸುರೇಶ್, ಅಶೋಕ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!