ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ತಂದಿರುವ ಅಗ್ನಿಪಥ ಯೋಜನೆ ರದ್ದುಗೊಳಿಸಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು ಅಗ್ನಿಪಥ್ ಯೋಜನೆ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯು ಸೇನಾ ವಿರೋಧಿ, ರೈತ ವಿರೋಧಿ ಹಾಗೂ ದೇಶ ವಿರೋಧಿಯಾಗಿದ್ದು, ಜೈ ಜವಾನ್ ಜೈ ಕಿಸಾನ್ ಘೋಷಣೆಯ ಸ್ಫೂರ್ತಿಯನ್ನು ಧ್ವಂಸ ಮಾಡಲು ಕೇಂದ್ರ ಸರ್ಕಾರ ಕಟಿಬದ್ದವಾಗಿ ನಿಂತಿರುವಾಗ, ಈ ಹೋರಾಟದಲ್ಲಿ ಸೈನಿಕರ ಹೆಗಲಿಗೆ ಹೆಗಲಾಗಿ ನಿಂತುಕೊಳ್ಳುವುದು ರೈತ ಚಳವಳಿಯ ಕರ್ತವ್ಯವಾಗಿದೆ ಎಂದು ಭಾವಿಸಿ ಇಂದು ದೇಶದಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ.ಅದರಂತೆ ಮಂಡ್ಯದಲ್ಲೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಅಗ್ನಿಪಥ್ ಗುತ್ತಿಗೆ ಸೇನಾ ನೇಮಕಾತಿ ಯೋಜನೆಯು ದೇಶದ ಭವಿಷ್ಯದ ಜೊತೆ ಆಡುತ್ತಿರುವ ಅಪಾಯಕಾರಿ ಆಟವಾಗಿದೆ. ರಾಷ್ಟ್ರದ ಭದ್ರತೆ ಹಾಗೂ ನಿರುದ್ಯೋಗಿ ಯುವಕರ ಕನಸಿಗೆ ಕಲ್ಲು ಹಾಕುವುದಷ್ಟೇ ಅಲ್ಲದೇ ದೇಶದ ರೈತ ಕುಟುಂಬಗಳ ಕನಸಿಗೂ ಕೂಡ ತೀವ್ರ ಭಂಗ ಉಂಟು ಮಾಡಿದೆ. ಈ ದೇಶದ ಯೋಧರು ಅಂದರೆ ಸಮವಸ್ತ್ರ ಧರಿಸಿದ ರೈತರು ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಹುತೇಕ ಸೈನಿಕರು ರೈತಾಪಿ ಕುಟುಂಬದಿಂದ ಬಂದವರು. ಸೈನ್ಯದ ಉದ್ಯೋಗ ಎಂಬುದು ಲಕ್ಷಾಂತರ ರೈತ ಕುಟುಂಬಗಳ ಹೆಮ್ಮೆ ಹಾಗೂ ಆರ್ಥಿಕ ಭದ್ರತೆಯ ಆಧಾರದ ಧ್ಯೋತಕ. “ಒಂದು ರ‌್ಯಾಂಕ್ ಒಂದು ಪಿಂಚಣಿ ” ಭರವಸೆ ಮೇರೆಗೆ ವಿಜಯೋತ್ಸವ ಪ್ರಚಾರಾಂದೋಲನಕ್ಕೆ ಮಾಜಿ ಸೈನಿಕರನ್ನು ಅಣಿನೆರಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಈಗ ನೋ ರ‌್ಯಾಂಕ್ ನೋ ಪೆನ್ಸನ್ (ಶ್ರೇಣಿಯೂ ಇಲ್ಲ ;ಪಿಂಚಣಿಯೂ ಇಲ್ಲ) ಎಂಬ ಈ ಯೋಜನೆಯನ್ನು ಆರಂಭಿಸಿರುವುದು ದೇಶ ತಲೆತಗ್ಗಿಸುವ ವಿಷಯವಾಗಿದೆ.
ಸೈನ್ಯದ ನಿಯಮಿತ ನೇಮಕಾತಿಯಲ್ಲಿ ಆಗಿರುವ ಬೃಹತ್ ಪ್ರಮಾಣದ ಕಡಿತವು ಸೈನ್ಯದಲ್ಲಿ ಸೇವೆ ಸಲ್ಲಿಸುವ ಹಲವು ವರ್ಷಗಳ ಕನಸು ಕಾಣುತ್ತಿದ್ದ ರೈತರ ಮಕ್ಕಳಿಗೆ ಬಗೆದಿರುವ ದ್ರೋಹವಾಗಿದೆ. ರೈತ ಚಳವಳಿಯ ಕಾರಣದಿಂದ ಸೋತು ಕಂಗಾಲಾಗಿದ್ದ ಈ ಸರ್ಕಾರವು ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಆಡುತ್ತಿರುವ ಮತ್ತೊಂದು ದುರುದ್ದೇಶದ ಆಟವಿದು ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕಟುವಾಗಿ ಟೀಕಿಸಿದರು.
ಇಂದಿನಿಂದ ಆರಂಭವಾಗುತ್ತಿರುವ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸಬೇಕು. ದೇಶದ ಗಡಿಭದ್ರತೆಗೆ, ರಾಷ್ಟ್ರೀಯ ಭದ್ರತೆಗೆ ಹಾಗೂ ಆಂತರಿಕ ಭದ್ರತೆಗೆ ಕಂಟಕವಾಗಿರುವ ಈ ಅಗ್ನಿಪಥ್ ಯೋಜನೆಯನ್ನು ಕೂಡಲೇ ವಾಪಾಸ್ ತೆಗೆದುಕೊಳ್ಳಬೇಕು ಇಲ್ಲವಾದರೆ ಕೃಷಿ ಕಾಯ್ದೆಗಳ ಸ್ಥಿತಿಯೇ ಅಗ್ನಿಪಥ್ ಯೋಜನೆಗೂ ಬರಲಿದೆ ಎಂದು ಎಚ್ಚರಿಸಿದರು.
ದೇಶದ ಸೈನದಲ್ಲಿ ಸೇವೆ ಸಲ್ಲಿಸುವ ಸೈನಿಕರನ್ನು ಗುತ್ತಿಗೆ ಕಾರ್ಮಿಕರಂತೆ ಪರಿಗಣಿಸದೆ ಪೂರ್ಣ ಪ್ರಮಾಣದ ಉತ್ತಮ ವೇತನ, ಜೀವನ ಭದ್ರತೆ ಸಾಮಾಜಿಕ ಕಲ್ಯಾಣ ಯೋಜನೆ ಹಾಗೂ ಪಿಂಚಣಿಯನ್ನು ಒದಗಿಸಬೇಕು ದೇಶದ ಭದ್ರತೆಯಲ್ಲಿ ಯಾವುದೇ ರೀತಿಯ ರಾಜಿ ಸಲ್ಲದು. ಈ ಯೋಜನೆಯನ್ನು ರದ್ದು ಮಾಡದಿದ್ದರೆ ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಪುಟ್ಟಮಾದು, ಕರ್ನಾಟಕ ಪ್ರಾಂತ ರೈತ ಸಂಘ ದ ಮುಖಂಡ ಟಿ. ಯಶವಂತ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಕೆಂಪೂಗೌಡ,ಕರ್ನಾಟಕ ಜನಶಕ್ತಿ ಮುಖಂಡ ಸಿದ್ದರಾಜು ಮಾತನಾಡಿದರು.
ಪ್ರತಿಭಟನೆ ನೇತೃತ್ವವನ್ನು ರಾಜ್ಯ ರೈತ ಸಂಘದ ರವಿಕುಮಾರ್, ಕೃಷಿ ಕೂಲಿಕಾರರ ಸಂಘದ ಬಿ ಹನುಮೇಶ್,ಮುಖಂಡರಾದ ಹರೀಶ್,ಚಂದ್ರು,ರಾಮಕೃಷ್ಣ, ರಘು, ರಾಜು, ಸಂತೋಷ ,ಅರುಣ್ ಮುಂತಾದವರು ವಹಿಸಿದ್ದರು.