ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಯಂತ್ರ ಶಿಲ್ಪ ವಿಭಾಗದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ಅತ್ಯಾಧುನಿಕ ಯಂತ್ರಗಳನ್ನು ಒಳಗೊಂಡ ಪ್ರಾಜೆಕ್ಟ್ ಪ್ರಯೋಗಾಲಯವನ್ನು ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ್ ಉದ್ಘಾಟಿಸಿದರು.
ನೂತನ ಪ್ರಯೋಗಾಲಯವು ಪ್ರಸ್ತುತ ಕೈಗಾರಿಕಾ ಬೇಡಿಕೆಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ರೂಪಿಸಲು ಅನುವು ಮಾಡಿಕೊಡುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಅಡಗಿರುವ ಅನ್ವೇಷಣಾ ಆಸಕ್ತಿಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಪ್ರಯೋಗಾಲಯಕ್ಕೆ ಆಡಳಿತ ಮಂಡಳಿಯು ಸುಮಾರು ಒಂದು ಕೋಟಿ ರೂ.ಗಳನ್ನು ಹಾಗೂ ವಿವಿಧ ಫಂಡಿಂಗ್ ಏಜೆನ್ಸಿಗಳಿಂದ ಸುಮಾರು 50 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಇದುವರೆಗೂ ಯಂತ್ರಶಿಲ್ಪ ವಿಭಾಗದಲ್ಲಿ ಅನೇಕ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಸುಮಾರು 15 ಪೇಟೆಂಟ್ ಗಳನ್ನು ಪಡೆಯಲಾಗಿದೆ ಮತ್ತು ಇವುಗಳಿಗೆ ಸಂಬಂಧಿಸಿದಂತೆ ಅನೇಕ ಅಂತರ್ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸಂಶೋದನಾ ಪ್ರಬಂಧಗಳನ್ನು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಂಡಿಸಿದ್ದಾರೆ. ಈ ನಿಟ್ಟಿನಲ್ಲಿ ಸದರಿ ಪ್ರಯೋಗಾಲಯವು ಅತೀ ಉಪಯುಕ್ತವಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಅತಿ ಯಶಸ್ಸಿನ ಸಂಶೋಧನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಭಾಗಗಳಿಗೆ ವಿಪುಲವಾದ ಅವಕಾಶಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ವ್ಯಾಸಂಗ ಮಾಡುವುದರ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಬಹುದು ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್. ಎಲ್. ಶಿವಪ್ರಸಾದ್ , ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಎಂ. ಮಹಾಲಿಂಗೇಗೌಡ , ವಿಭಾಗದ ಮುಖ್ಯಸ್ಥರಾದ ಡಾ.ರುದ್ರೇಶ್ ಅಡ್ಡಮನಿ, ಪ್ರಾಧ್ಯಾಪಕರುಗಳು, ತಾಂತ್ರಿಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.