ಕೃಷಿಯನ್ನು ಕೇವಲ ಕೆಲಸವಾಗಿ ಮಾಡದೆ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದಾಗ ಮಾತ್ರ ಗ್ರಾಮೀಣ ಭಾಗದ ರೈತ ಮಹಿಳೆಯರ ಆರ್ಥಿಕ ಪ್ರಗತಿ ಸಾಧ್ಯ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್ ನಂದಿನಿ ಹೇಳಿದರು.
ಆಹಾರ ಸಂಸ್ಕರಣೆ ಸಚಿವಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನದ ಅಂಗವಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳು ನಿಯಮಬದ್ದಗೊಳಿಸುವಿಕೆ (ಪಿ.ಎಂ.ಎಫ್..ಎಂ.ಇ) ಯೋಜನೆಯಡಿ ಸ್ವ ಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರಿಗೆ ತಾಂತ್ರಿಕ ಕಾರ್ಯಾಗಾರವನ್ನು ಕಡಲೆ ಎಣ್ಣೆಯನ್ನು ಯಂತ್ರದಿಂದ ತೆಗೆಯುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.
ರೈತ ಮಹಿಳೆಯರು ಬೆಳೆಯುವ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ, ಪ್ಯಾಕಿಂಗ್ ಹಾಗೂ ಬ್ರಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಆದಾಯವನ್ನು ಹೆಚ್ಚಿಸಬಹುದು ಹಾಗಾಗಿ ಎನ್ ಆರ್ ಎಮ್ ಎಲ್ ಕೃಷಿ ಇಲಾಖೆ ಸೇರಿ ಸಿರಿಧಾನ್ಯದ ಉತ್ಪಾನ ಮಾರಾಟ ಮಾಡಲು “ಸಿರಿ ಸಮೃದ್ಧಿ” ಎಂದು ಬ್ರಾಂಡಿಂಗ್ ಮಾಡಲಾಗಿದೆ. ಇದರಿಂದ ರೈತರಿಗೂ ಆದಾಯ ವೃದ್ಧಿಸುತ್ತದೆ ಜೊತೆಗೆ ಗ್ರಾಹಕರ ಆರೋಗ್ಯಯವು ಸಮೃದ್ಧವಾಗಿರುತ್ತದೆ ಎಂದು ಹೇಳಿದರು.
ಭಾರತದ ದೇಶ ಶೇ 50 ರಷ್ಟು ಕೃಷಿಯನ್ನು ಅವಲಂಬಿಸಿದೆ, ಗ್ರಾಮೀಣ ಭಾಗದ ರೈತ ಮಹಿಳೆಯರು ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಗ್ರಾಮೀಣ ಮಹಿಳೆಯರು ಕೃಷಿಯಲ್ಲಿ ಕೇವಲ ದೈಹಿಕ ಶ್ರಮ ವಹಿಸಿದ ಮಾತ್ರಕ್ಕೆ ಸಬಲೀಕರಣ ಕೊಳ್ಳುವುದಿಲ್ಲ, ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮನ್ನು ನೀವು ಆಧುನಿಕರಣಕ್ಕೆ ಒಳಪಡಿಸಿಕೊಂಡಾಗ ಮಾತ್ರ ಸಾಧ್ಯ, ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಾಂತ್ರಿಕೃತ ಭತ್ತ ನಾಟಿ ಮಾಡುವುದನ್ನು ಪ್ರಾರಂಭಿಸಲಾಯಿತು, ಮಹಿಳೆಯರು ನನ್ನಿಂದ ಆಗದು ಎಂಬ ಭಾವನೆ ತೊರೆದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ ಪ್ರತಿ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ಪ್ರಮುಖ ಬೆಳಗಳಾದ ಕಬ್ಬು,ರಾಗಿ , ಭತ್ತದಿಂದ ಸುಮಾರು 2 ಸಾವಿರ ಕೋಟಿಯಷ್ಟು ಆರ್ಥಿಕ ಚಟುವಟಿಕೆ ಉಂಟಾಗುತ್ತದೆ, ಸದರಿ ಪ್ರಮುಖ ಬೆಳೆಗಳನ್ನು ಸಂಸ್ಕರಣೆಗಾರರು ಹಾಗೂ ಮಧ್ಯವರ್ತಿಗಳು ಖರೀದಿಸಿ ಮೌಲ್ಯವರ್ಧನೆ ಮಾಡಿ ಸರಿಸುಮಾರು 6 ಸಾವಿರ ಕೋಟಿಯಷ್ಟು ಆದಾಯ ಗಳಿಸುತ್ತಾರೆ, ರೈತ ಮಹಿಳೆಯರು ತಾವು ಉತ್ಪಾದಿಸಿದ ವಸ್ತುಗಳನ್ನು ಮೌಲ್ಯವರ್ಧನೆಗೆ ಒಳಪಡಿಸಿದರೆ 3 ರಿಂದ 4 ಸಾವಿರ ಕೋಟಿಯಷ್ಟು ಹಣವನ್ನು ಗಳಿಸಬಹುದಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ಮಾತನಾಡಿ ತೋಟಗಾರಿಕೆ ಉತ್ಪನ್ನಗಳಲ್ಲಿ ಜೇನು ಸಾಕಾಣಿಕೆಯಿಂದ ಆದಾಯ ಹೆಚ್ಚಿಸಬಹುದು. ಜೊತೆ ಬೆಳೆದ ಬೆಳೆಗಳಿಗೂ ಪರಾಗಸ್ಪರ್ಶ ಉಂಟಾಗುತ್ತದೆ, ಜೇನು ಸಾಕಾಣಿಕೆಯಿಂದ ಬಂದ ಜೇನು ತುಪ್ಪಕ್ಕೆ ಉತ್ತಮ ಮಾರುಕಟ್ಟೆ ಹಾಗೂ ಬ್ರಾಂಡಿಂಗ್ ಅನ್ನು ಇಲಾಖೆಯ ಸಹಾಯದೊಂದಿಗೆ ಮಾಡಬಹುದಾಗಿದೆ, ಅಣಬೆ ಹೆಚ್ಚು ಬೇಡಿಕೆ ಇರುವುದರಿಂದ ಅಣಬೆ ಬೆಳೆಯಿಂದ ಬಿಸ್ಕತ್ತು, ಚಿಪ್ಸ್, ಚಾಕೋಲೇಟ್ ತಯಾರಿಸುವವರಿಗೆ ಸಹಾಯ ಮಾಡಲಾಗುವುದು ಜೊತೆಗೆ ತೆಂಗು, ಬಾಳೆ ಬೆಳೆಗಳಿಗೂ ಸಹ ಇಲಾಖೆಯ ವತಿಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಶಿವಲಿಂಗಯ್ಯ ಅವರು ಮಾತನಾಡಿ ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು, ಜಿಲ್ಲೆಯ ಶೇಕಡ 60 ರಷ್ಟು ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ, ಜಿಲ್ಲೆಯಲ್ಲಿ ದಿನಕ್ಕೆ 12 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಉತ್ತಮ ಉದ್ಯಮವಾಗಿದೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಸಲಹೆಯಂತೆ ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಿ ಮೊಟ್ಟೆಯನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಆಸಕ್ತ ಮಹಿಳೆಯರು ತರಬೇತಿ ಪಡೆದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆ ವತಿಯಿಂದ ಕೋಳಿ, ಕುರಿ, ಮೇಕೆ ಸಾಕಾಣಿಕೆಗೆ ಶೇಕಡ 50 ರಷ್ಟು ಸಬ್ಸಿಡಿ ನೀಡಲಾಗುವುದು, ವಿಮೆ ಮಾಡಿಸದ ಹಸುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಇಲಾಖೆಯ ವತಿಯಿಂದ ರೂ 15,000 ಹಾಗೂ ಕುರಿ ಮೇಕೆ ಮರಣ ಹೊಂದಿದರೆ ರೂ 7000 ನೀಡಲಾಗುವುದು, ಸತ್ತ ಜಾನುವಾರುಗಳನ್ನು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ ನಂತರ ಹಣವನ್ನು ಆರು ತಿಂಗಳೊಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಬಾಸಾಬ್ ಮಾತನಾಡಿ ಮೀನುಗಾರಿಕೆ ಇಲಾಖೆಯಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ, ಮಹಿಳಾ ಸಹಕಾರ ಸಂಘಗಳಿಗೆ ಮೀನುಗಾರಿಕೆ ಮಾಡಲು ಕಡಿಮೆ ದರದಲ್ಲಿ ಕೆರೆಗಳನ್ನು ಗುತ್ತಿಗೆ ನೀಡಲಾಗುವುದು, ಈಗಾಗಲೇ ಅನೇಕ ಸ್ವಸಹಾಯ ಗುಂಪುಗಳು ಕೆರೆಗಳನ್ನು ಗುತ್ತಿಗೆ ಪಡೆದುಕೊಂಡು ಆದಾಯ ಗಳಿಸುತ್ತಿವೆ, ಜಿಲ್ಲೆಯಲ್ಲಿ 11 ಮತ್ಸ್ಯ ವಾಹಿನಿ ತ್ರಿಚಕ್ರವಾಹನಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗನಂದ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಕೃಷಿ ವಿಜ್ಞಾನಿ ಡಾ. ಶ್ರೀದೇವಿ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷ ಕಾರಸವಾಡಿ ಮಹದೇವ, ಮಂಡ್ಯ ಉಪವಿಭಾಗದ ಉಪಕೃಷಿ ನಿರ್ದೇಶಕ ಮುನೇಗೌಡ, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು, ರಾಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




