ಮಂಡ್ಯದ ಕಾಂಗ್ರೆಸ್ ನಾಯಕರು ಕಳೆದ ಭಾನುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ ಮಂಡ್ಯ ತಾಲೂಕು ರಾಜಕಾರಣ ಬಗ್ಗೆ ಚರ್ಚೆ ನಡೆಸಿದರು.
ಮಾಜಿ ಸಚಿವ ಎಂ.ಎಸ್. ಆತ್ಮಾನಂದ ನೇತೃತ್ವದಲ್ಲಿ ಮಂಡ್ಯ ಟಿಕೆಟ್ ಆಕಾಂಕ್ಷಿಗಳಾದ ಎಚ್.ಬಿ. ರಾಮು, ಅಮರಾವತಿ ಚಂದ್ರಶೇಖರ್, ಸಿದ್ದಾರೂಢ ಸತೀಶ್ ಗೌಡ, ಬೂದನೂರು ಶಿವರಾಮು,ಹೊಸಹಳ್ಳಿ ಶಿವಲಿಂಗೇಗೌಡ, ಹಾಲಹಳ್ಳಿ ರಾಮಲಿಂಗಯ್ಯ, ಬಿ.ಸಿ. ಶಿವಾನಂದ್ ಮುಖಂಡರಾದ ಎಂ.ಡಿ. ಜಯರಾಮ್, ಸಿದ್ದರಾಮೇಗೌಡ ಮತ್ತಿತರ ಮಂಡ್ಯದ ಕಾಂಗ್ರೆಸ್ ನಾಯಕರು ಬೆಂಗಳೂರಿನ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಜಿಲ್ಲೆಯ ರಾಜಕಾರಣ ಹಾಗೂ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದಾರೆ.
ಜಿಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದೆ. ಅದರಲ್ಲೂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 16 ಮಂದಿ ಆಕಾಂಕ್ಷಿಗಳಿದ್ದು ವರಿಷ್ಠರು ಇವರಲ್ಲಿ ಯಾರಾದರೂ ಒಬ್ಬರನ್ನು ಶೀಘ್ರವಾಗಿ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಪಕ್ಷ ಸಂಘಟನೆ ಮಾಡಲು ಅನುಕೂಲವಾಗುತ್ತದೆ.
ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿರುವ ಕೆಲವರು ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದು, ಅವರಿಗೆ ಇನ್ನಷ್ಟು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಲು ತಿಳಿಸಿ, ಕಳೆದ ಹಲವಾರು ದಶಕಗಳಿಂದ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿರುವವರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಖರ್ಗೆಯವರಿಗೆ ಮನವಿ ಮಾಡಿದರು.
ಇದುವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ಸಂಘಟನೆ ಮಾಡಿರುವ ವ್ಯಕ್ತಿಗಳಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು. ಇತ್ತೀಚಿಗೆ ಪಕ್ಷ ಸೇರಿರುವವರು ಪಕ್ಷ ಸಂಘಟನೆ ಮಾಡಲಿ ಎಂದು ತಿಳಿಸಿರುವ ಕೈ ಪಡೆಯ ನಾಯಕರು,ಶೀಘ್ರ ಅಭ್ಯರ್ಥಿ ಘೋಷಿಸುವಂತೆ ಮನವಿ ಮಾಡಿದ್ದಾರೆ.




