Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಬೌದ್ದ ಮಹಾಸಭಾಕ್ಕೆ ಪರ್ಯಾಯ ಸಂಘಟನೆ ಸಲ್ಲದು: ನಟರಾಜ್

ಬೌದ್ದಧಮ್ಮವನ್ನು ಬಲಿಷ್ಠಗೊಳಿಸಲು ಡಾ.ಬಿ.ಆರ್ ಅಂಬೇಡ್ಕರ್ ಅವರು ಸ್ಥಾಪಿಸಿದ ಭಾರತೀಯ ಬೌದ್ದ ಮಹಾ ಸಭಾ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಪರ್ಯಾಯವಾಗಿ ಸ್ಥಾಪಿಸುತ್ತಿರುವ ಬುದ್ದಿಸ್ಟ್ ಒಕ್ಕೂಟದ ರಚನೆಗೆ ವಿರೋಧ ವ್ಯಕ್ತಪಡಿಸುವುದಾಗಿ ದಲಿತ ಮುಖಂಡ ಮಾರ್ಕಲ್ ನಟರಾಜ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಮಾಜಿ ಸಚಿವ ಬಿ.ಸೋಮಶೇಖರ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಬೌದ್ದ ಮಹಾಸಭಾವನ್ನು ಡಾ. ಬಿ.ಆರ್ ಅಂಬೇಡ್ಕರ್‌ರವರು ಸ್ಥಾಪಿಸುವುದರ ಜೊತೆಗೆ ನೋಂದಣಿ ಮಾಡಿಸಿದ್ದಾರೆ, ಪ್ರಸ್ತತದಲ್ಲಿ ಮೀರಾತಾಯಿ ಅಂಬೇಡ್ಕರ್ ರಾಷ್ಟ್ರೀಯ ಅಧ್ಯಕ್ಷರಾಗಿ, ಡಾ. ಭೀಮರಾವ್ ಯಶವಂತ್‌ರಾವ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ, ರಾಜ್ಯದಲ್ಲಿ ಭಾರತೀಯ ಬೌದ್ದ ಮಹಾ ಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದರ್ಶನ್ ಸೋಮಶೇಖರ್ ನೇಮಕಗೊಂಡು ಮಳವಳ್ಳಿ ತಾಲ್ಲೂಕಿನ ಚಾಚನಹಳ್ಳಿಯಲ್ಲಿ ಬುದ್ದ ಪ್ರತಿಭೆಯನ್ನು ನಿರ್ಮಾಣ ಮಾಡುವುದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಮುಂದುವರೆಸುತ್ತಾ ಬರುತ್ತಿದ್ದಾರೆಂದು ಹೇಳಿದರು.

ಈಗಾಗಲೇ ಬೌದ್ದಮಹಾಸಭಾ ದೇಶಾದ್ಯಂತ ಬೌದ್ದ ಧಮ್ಮವನ್ನು ಗಟ್ಟಿಗೊಳಿಸುವುದರ ಜೊತೆಗೆ ಲಕ್ಷಾಂತರ ಮಂದಿ ಬೌದ್ದಧಮ್ಮ ಸ್ವೀಕರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯೆ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಬುದ್ದಿಸ್ಟ್ ಒಕ್ಕೂಟ ಸ್ಥಾಪಿಸುವುದರ ಮೂಲಕ ಗೊಂದಲ ಸೃಷ್ಠಿಸಲು ಹೊರಟಿರುವುದು ಸರಿಯಲ್ಲ, ಬುದ್ದರ ಸಂಬಂಧಪಟ್ಟ ಕಾರ್ಯಕ್ರಮಗಳು ಅಂಬೇಡ್ಕರ್‌ ಸ್ಥಾಪಿಸಿದ ಭಾರತೀಯ ಬೌದ್ದ ಮಹಾಸಭಾದ ಅಡಿಯಲ್ಲಿಯೇ ಒಗ್ಗಟ್ಟಿನಲ್ಲಿ ನಡೆಯಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.

ಭಾರತೀಯ ಬೌದ್ದ ಮಹಾಸಭಾ ಯುವ ಘಟಕ ತಾಲ್ಲೂಕು ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿ, ಬೌದ್ದ ಮಹಾಸಭಾವು ಭಾರತ ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ದಮ್ಮ ಪ್ರಚಾರದಲ್ಲಿ ತೊಡಗಿದೆ, ರಾಜ್ಯದಲ್ಲಿಯೂ ಯುವ ಘಟಕದ ವತಿಯಿಂದ ರಾಜ್ಯಾಧ್ಯಕ್ಷ ದರ್ಶನ್ ಸೋಮಶೇಖರ್ ಅವರ ನೇತೃತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ, ಗ್ರಾಮ ಮಟ್ಟದಲ್ಲಿಯೇ ಸದಸತ್ವ ನೋಂದಣಿ ಮಾಡಿ ಹೆಚ್ಚು ಮಂದಿ ಬೌದ್ದ ಧಮ್ಮವನ್ನು ಒಪ್ಪಿಕೊಳ್ಳುವಂತೆ ಶ್ರಮಿಸಲಾಗುತ್ತಿದೆ, ಮಹಾಸಭಾದ ಪರ್ಯಾಯವಾಗಿ ಯಾವ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲಾ ಬುದ್ದಿಷ್ಟ್ ಒಕ್ಕೂಟವನ್ನು ಸ್ಥಾಪಿಸುತ್ತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು.

ಬೌದ್ದ ಧಮ್ಮ ವಿಚಾರವಾಗಿ ಹಲವು ಒಕ್ಕೂಟ ಅಥವಾ ಸಂಘ ಸ್ಥಾಪನೆಯಾದರೇ ಒಗ್ಗಟ್ಟು ಎನ್ನುವುದೇ ಇಲ್ಲದಂತಾಗುವುದರಿಂದ ಬುದ್ದರನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರು ಭಾರತೀಯ ಬೌದ್ದ ಮಹಾ ಸಭಾದಡಿಯಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕೆಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂದೇಶ್ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!