Thursday, September 19, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟಾಚಾರ – ಕುಟುಂಬ ರಾಜಕಾರಣ ತ್ಯಜಿಸಿ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ : ಅಮಿತ್ ಶಾ

ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಪಕ್ಷವಾಗಿದ್ದು,ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ಮಂಡ್ಯದ ಸರ್ಕಾರಿ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವಕ್ಕೆ 52% ಮತ ಕೊಡುವ ಮೂಲಕ 26 ಲೋಕಸಭಾ ಸ್ಥಾನ ಕೊಟ್ಟಿದ್ದಿರಿ. ಈ ಬಾರಿ ಮೈಸೂರು- ಮಂಡ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿದೆ. ಕಾಂಗ್ರೆಸ್ ಜೆಡಿಎಸ್ ಭ್ರಷ್ಟಾಚಾರ ಮತ್ತು ಪರಿವಾರದ ಪಕ್ಷವಾಗಿದ್ದು, ಭ್ರಷ್ಟಾಚಾರ ತುಂಬಿ ಹೊಲಸು ಮಾಡುತ್ತಿವೆ. ಈ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಕಿತ್ತೊಗೆದು ಯಶಸ್ವಿಯಾಗಿ ಅಡಳಿತ ನಡೆಸುವ ಕೆಲಸ ಮಾಡಬೇಕಿದೆ ಎಂದರು.

ಕಾಂಗ್ರೆಸ್ ಎಟಿಎಂ

ಜೆಡಿಎಸ್, ಕಾಂಗ್ರೆಸ್ ಕ್ರಿಮಿನಲ್ ವ್ಯಕ್ತಿಗಳನ್ನ ಪೋಷಿಸುವ ಕೆಲಸ ಮಾಡುತ್ತಿದೆ. ದಲಿತರು, ಆದಿವಾಸಿಗಳಿಗೆ ಅನ್ಯಾಯ ಆಗೋ ಕೆಲಸ ಜೆಡಿಎಸ್, ಕಾಂಗ್ರೆಸ್ ನಿಂದ ಆಗುತ್ತಿದೆ. ಬಿಜೆಪಿಯಲ್ಲಿ ದಲಿತ ವರ್ಗದ ರಾಮನಾಥ ಕೋವಿಂದ್, ಆದಿವಾಸಿ ಜನಾಂಗದ ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿ ಮಾಡೋ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರ ಎಟಿಎಂ ಆಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗ ಎಟಿಎಂ ಆಗಿ ಕೆಲಸ ಮಾಡುವ ಕಾಂಗ್ರೆಸ್ ಬದಲು ಬಿಜೆಪಿ ಪಕ್ಷ ಅಧಿಕಾರಕ್ಕೆ ತರಬೇಕಿದೆ ಎಂದರು.

ನಾವೆಲ್ಲರೋ ಈ ದೇಶದ ಬಡವರಿಗೆ ಅಹಾರ ಒದಗಿಸಿ,‌ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ಬಡವರ ಮನೆಗಳಿಗೆ ಬೆಳಕು, ಶೌಚಾಲಯ ನೀಡುವ ಮೂಲಕ ಗೌರವದ ಬದುಕು ಕಲ್ಪಿಸಿಕೊಡುವ ಕೆಲಸ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಕೊಡಿಸಿ ಜನರ ರಕ್ಷಣೆ ಮಾಡಿದ್ದೇವೆ. ದೇಶದ 80 ಕೋಟಿ ಜನರಿಗೆ ತಲಾ ಐದು ಕೆ.ಜಿಯಂತೆ ಅಕ್ಕಿ ನೀಡಿದ್ದೇವೆ ಎಂದು ತಿಳಿಸಿದರು.

ಮೈಷುಗರ್ ಆರಂಭಿಸಿದ್ದು ಬಿಜೆಪಿ

ರೈತರ ಪರ ಎಂದೇಳುವ ಕಾಂಗ್ರೆಸ್, ಜೆಡಿಎಸ್ ಮೈಷುಗರ್ ಕಾರ್ಖಾನೆ ಆರಂಭಿಸಲಿಲ್ಲ. ಈ ಭಾಗದ ರೈತರ ನೆರವಿಗಾಗಿ ಮುಖ್ಯಮಂತ್ರಿ ಬೊಮ್ಮಯಿಯವರು ಮೈಷುಗರ್ ಆರಂಭಿಸಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಿರಲಿಲ್ಲ‌. ಕೃಷಿಗೆ 1300 ರೂ‌. ಕೋಟಿ ನೀಡಿದೆ ಎಂದ ಅವರು ಡಬಲ್ ಇಂಜಿನ್ ಸರ್ಕಾರದ ಬೆಂಬಲಕ್ಕೆ ನಿಂತರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಭಿವೃದ್ಧಿ ಮಾಡಲಿದೆ ಎಂದರು.

ಪಿಎಫ್ಐ ಬ್ಯಾನ್

ಸಿದ್ದರಾಮಯ್ಯ ಅವರ ಸರ್ಕಾರ ಪಿಎಫ್ಐ ನಿಷೇಧ ಮಾಡದೆ, ಅವರ ಮೇಲಿದ್ದ 156 ಕೇಸುಗಳನ್ನು ವಾಪಾಸ್ ತೆಗೆದುಕೊಂಡಿತು. ಆದರೆ ನರೇಂದ್ರ ಮೋದಿಯವರ ಸರ್ಕಾರ ಪಿಎಫ್ಐ ನಿಷೇಧಿಸಿ ಭಯೋತ್ಪಾದನಾ ಚಟುವಟಿಕೆಗೆ ತಡೆ ಹಾಕಿದೆ ಎಂದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಸಚಿವರಾದ ಕೆ.ಗೋಪಾಲಯ್ಯ, ಅಶ್ವಥ್ ನಾರಾಯಣ ಗೌಡ, ಕೆ.ಸಿ.ನಾರಾಯಣ ಗೌಡ, ಸಿ.ಟಿ‌.ರವಿ, ವಿಜಯೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಸಚ್ಚಿದಾನಂದ, ಅಶೋಕ್  ಜಯರಾಂ, ಎಸ್.ಪಿ.ಸ್ವಾಮಿ, ಫೈಟರ್ ರವಿ ಸೇರಿದಂತೆ ಹಲವು ಮುಖಂಡರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!