Friday, October 25, 2024

ಪ್ರಾಯೋಗಿಕ ಆವೃತ್ತಿ

ಅಮಿತ್ ಶಾ ವಿದೇಶ ಪ್ರಯಾಣದ ಮಾಹಿತಿ ನೀಡಿದರೆ 1 ಮಿಲಿಯನ್ ಡಾಲರ್ ಬಹುಮಾನ – ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆ ಘೋಷಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿದೇಶ ಪ್ರವಾಸಗಳ ‘ಸೂಕ್ಷ್ಮ ಮಾಹಿತಿ’ಗಳನ್ನು ಹಂಚಿಕೊಳ್ಳುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ನಿಷೇಧಿತ ಸಂಘಟನೆಯಾದ ‘ಸಿಖ್ಸ್ ಫಾರ್ ಜಸ್ಟಿಸ್ (SFJ)’ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್ ಘೋಷಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆ ಮಾಡಿದ ವೀಡಿಯೋವೊಂದರಲ್ಲಿ ಪನ್ನುನ್ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) 1984 ರಲ್ಲಿ ಪಂಜಾಬ್‌ನಲ್ಲಿ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದ್ದಾರೆ.

“ಸಿಖ್ಖರ ಕಾನೂನುಬಾಹಿರ ಹತ್ಯೆಗಳಿಗೆ ಸಿಆರ್‌ಪಿಎಫ್ ಅಧಿಕಾರಿಗಳು, ಕೆಪಿಎಸ್ ಗಿಲ್‌ನಿಂದ ಹಿಡಿದು ವಿಕಾಶ್ ಯಾದವ್ ವರೆಗೂ ಕಾರಣರಾಗಿದ್ದಾರೆ. ಇದು ಮೊದಲು ಪಂಜಾಬ್‌ನಲ್ಲಿ ಸಂಭವಿಸಿತ್ತು ಮತ್ತು ಈಗ ವಿದೇಶಗಳಲ್ಲಿ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ ಅವರು ಅರೆಸೇನಾ ಪಡೆಯ ಮುಖ್ಯಸ್ಥರಾಗಿದ್ದು, ಕೂಲಿ ಸೈನಿಕರನ್ನು ನೇಮಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಪನ್ನುನ್ ಆರೋಪಿಸಿದ್ದಾರೆ.

ಅಕ್ಟೋಬರ್ 26 ರಂದು ನಾಗಪುರ, ದೆಹಲಿ (ರೋಹಿಣಿ ಮತ್ತು ದ್ವಾರಕಾ), ಸೋನಿಪತ್, ಪಿಂಜೋರ್ ಮತ್ತು ಜಲಂಧರ್‌ನಲ್ಲಿ ಸಿಆರ್‌ಪಿಎಫ್ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಅವರು ಕರೆ ನೀಡಿದ್ದಾರೆ. ಅಕ್ಟೋಬರ್ 20 ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ CRPF ಶಾಲೆಯ ಬಳಿ ನಿಗೂಢ ಸ್ಫೋಟ ಸಂಭವಿಸಿದ ನಂತರ ಪನ್ನುನ್ ಕರೆ ನೀಡಿದ್ದಾರೆ.

ಶಾಲೆಯ ಬಳಿ ಸಂಭವಿಸಿದ ಸ್ಪೋಟ ಭದ್ರತಾ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಕಚ್ಚಾ ಬಾಂಬ್‌ನಿಂದ ಸ್ಫೋಟ ನಡೆದಿದೆ ಎಂದು ಕಂಡುಬಂದಿದೆ. ಸ್ಪೋಟದಿಂದ ಶಾಲೆಯ ಗೋಡೆಗೆ ಭಾಗಶಃ ಹಾನಿಯಾಗಿದ್ದು, ಹತ್ತಿರದಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳಿಗೆ ಕೂಡಾ ಹಾನಿಯಾಗಿದೆ. ಅದಾಗ್ಯೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ಅದೇ ದಿನ ಸಂಜೆ ‘ಜಸ್ಟೀಸ್ ಲೀಗ್ ಇಂಡಿಯಾ’ ಹೆಸರಿನ ಟೆಲಿಗ್ರಾಂ ಚಾನೆಲ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿತ್ತು. ರೋಹಿಣಿ ಸ್ಫೋಟದ ವೀಡಿಯೊವನ್ನು ಆಪಾದಿತ ಚಾನೆಲ್ ‘ಖಲಿಸ್ತಾನ್ ಜಿಂದಾಬಾದ್’ ವಾಟರ್‌ಮಾರ್ಕ್‌ನೊಂದಿಗೆ ಪೋಸ್ಟ್ ಮಾಡಿತ್ತು. ಖಲಿಸ್ತಾನಿ ಪರ ಗುಂಪಿನ ಕೈವಾಡ ಇದರಲ್ಲಿ ಇದೆ ಎಂದು ಸೂಚಿಸುವ ಬೆದರಿಕೆ ಸಂದೇಶವನ್ನೂ ಅದು ಹೊಂದಿತ್ತು.

ಆದಾಗ್ಯೂ, ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಪರಿಶೀಲನೆಗೆ ಒಳಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಟೆಲಿಗ್ರಾಮ್‌ಗೆ ಪತ್ರವನ್ನೂ ಬರೆದಿದ್ದಾರೆ.

ನವೆಂಬರ್ 1 ರಿಂದ 19 ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಸೋಮವಾರ ಜನರಿಗೆ ಎಚ್ಚರಿಕೆ ನೀಡಿದ್ದ ಪನ್ನುನ್, ಆ ದಿನಗಳಲ್ಲಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!