Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಧ್ಯಪ್ರದೇಶ| ಪ್ರತಿಭಟಿಸಿದ ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನ

ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಪ್ರತಿಭಟಿಸಿದ ಇಬ್ಬರು ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನಿಸಿದ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ರೇವಾ ಜಿಲ್ಲೆಯ ಹಿನೌಟಾದಲ್ಲಿ ಎರಡು ಕುಟುಂಬಗಳ ನಡುವೆ ಜಮೀನು ಜಗಳ ನಡೆಯುತ್ತಿತ್ತು. ಒಂದು ಕಡೆಯ ಗುಂಪು ಜಮೀನಿನ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅದನ್ನು ಇನ್ನೊಂದು ಕಡೆಯ ಗುಂಪು ವಿರೋಧಿಸುತ್ತಿತ್ತು ಎಂದು ತಿಳಿದು ಬಂದಿದೆ.

ಆದರೂ, ಕಾಮಗಾರಿ ಮುಂದುವರೆಯುತ್ತಿತ್ತು. ಇದನ್ನು ವಿರೋಧಿಸಿ ಇನ್ನೊಂದು ಗುಂಪಿನ ಮಹಿಳೆಯರು ಜಮೀನಿನಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ಆಗ ಕಾಮಗಾರಿ ನಡೆಸುತ್ತಿದ್ದ ಗುಂಪಿನ ಆದೇಶದಂತೆ ಟಿಪ್ಪರ್‌ ಚಾಲಕ, ಕಲ್ಲು ಮಣ್ಣನ್ನು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಮೇಲೆ ಸುರಿದು, ಜೀವಂತ ಸಮಾಧಿಗೆ ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಎಂಬ ಇಬ್ಬರು ಮಹಿಳೆಯರು ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುವುದನ್ನು ವಿರೋಧಿಸಿದ್ದು, ಅವರು ಜೀವಂತ ಸಮಾಧಿ ಮಾಡಲು ಯತ್ನಿಸಲಾಗಿದೆ. ಒಬ್ಬರು ಮಹಿಳೆಯ ಸೊಂಟದವರೆಗೆ ಹಾಗೂ ಇನ್ನೊಬ್ಬರ ಕುತ್ತಿಗೆವರೆಗೆ ಮಣ್ಣು ಹಾಕಲಾಗಿತ್ತು. ಇದರಿಂದ ಒಬ್ಬರು ಪ್ರಜ್ಞೆ ತಪ್ಪಿದ್ದರು ಎಂದು ವರದಿಯಾಗಿದೆ.

“>

 

ಟಿಪ್ಪರ್ ಚಾಲಕ ವಿಪಿನ್ ಪಾಂಡೆ ಎಂಬಾತನನ್ನು ಬಂಧಿಸಲಾಗಿದ್ದು, ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಪೊಲೀಸರು ಹುಡುಕುತ್ತಿದ್ದು, ಎಲ್ಲಾ ಆರೋಪಿಗಳು ಸಂತ್ರಸ್ತರ ಸಂಬಂಧಿಕರು ಎಂದು ಹೇಳಿದ್ದಾರೆ.

ಘಟನೆಯ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಟಿಪ್ಪರ್‌ನ ಹಿಂಭಾಗದಲ್ಲಿ ಮಣ್ಣಿನಡಿಯಿಂದ ಮಹಿಳೆಯರನ್ನು ರಕ್ಷಿಸುತ್ತಿರುವ ದೃಶ್ಯ ಅದರಲ್ಲಿದೆ.

ಆರೋಪಿಗಳು ಮೊದಲು ಮಹಿಳೆಯರ ಜೊತೆ ವಾಗ್ವಾದ ನಡೆಸಿ, ಹಲ್ಲೆ ಮಾಡಿದ್ದು ಬಳಿಕ ಟಿಪ್ಪರ್‌ನಿಂದ ಜಲ್ಲಿ, ಕಲ್ಲು ತುಂಬಿದ ಮಣ್ಣು ಸುರಿದಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಾ ಜಿಲ್ಲೆಯ ಎಸ್ಪಿ ವಿವೇಕ್ ಸಿಂಗ್ “ಇದು ಎರಡು ಕಡೆಯ ಕುಟುಂಬಗಳ ಜಮೀನು ವಿವಾದ. ಒಂದು ಕಡೆಯವರು ರಸ್ತೆ ಮಾಡಲು ಬಯಸಿದ್ದರು. ಅದಕ್ಕಾಗಿ ಕಲ್ಲು ಮಣ್ಣು ತುಂಬಿಸುತ್ತಿದ್ದರು. ಆ ಸಂದರ್ಭ ಪ್ರತಿಭಟಿಸುತ್ತಿದ್ದ ಇನ್ನೊಂದು ಕಡೆಯ ಮಹಿಳೆಯರ ಮೇಲೆ ಕಲ್ಲು ಮಣ್ಣಿನ ರಾಶಿಯನ್ನು ಸುರಿದಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 110 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯರ ಪೈಕಿ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ದ ಕಾಂಗ್ರೆಸ್ ಕಿಡಿ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ “ಬಿಜೆಪಿಯ ಜಂಗಲ್ ರಾಜ್, ಮಧ್ಯ ಪ್ರದೇಶದ ರೇವಾದಿಂದ ಮಾನವೀಯತೆ ತಲೆ ತಗ್ಗಿಸುವ ವಿಡಿಯೋವೊಂದು ಹೊರಬಿದ್ದಿದೆ. ಇಲ್ಲಿ ಜಮೀನು ವಿವಾದದಿಂದಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಪುಂಡರು ಯತ್ನಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಮಹಿಳಾ ವಿರೋಧಿ ಚಿಂತನೆಗೆ ಈ ವಿಡಿಯೋ ಮತ್ತೊಂದು ಸಾಕ್ಷಿಯಾಗಿದೆ.ಮಹಿಳಾ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದ ನರೇಂದ್ರ ಮೋದಿಯವರ ಎಲ್ಲಾ ಹೇಳಿಕೆಗಳು ಪೊಳ್ಳು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ, ಆದರೆ ನರೇಂದ್ರ ಮೋದಿಯವರು ಮೌನವಾಗಿದ್ದಾರೆ” ಎಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!