ಇಂದು ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುವ ವೇಳೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ಹರಿದು ಅವಮಾನ ಮಾಡಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಮೋದಿ ರೋಡ್ ಶೋನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಕ್ರಮಕ್ಕೆ ದಲಿತ ಮುಖಂಡರ ಆಗ್ರಹ pic.twitter.com/Nyr5ZxKUwt
— Naanu Gauri (@naanugauri) May 6, 2023
“>
ದಲಿತ ಮುಖಂಡ ಚಿಕ್ಕರಾಮುರವರು ಮಾತನಾಡಿ, “ಪ್ರಪಂಚಾದ್ಯಂತ ಮನ್ನಣೆ ಪಡೆದಿರುವ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರವನ್ನು ಇಂದಿನ ಪ್ರಧಾನಿಗಳ ರ್‍ಯಾಲಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಡಾ. ಅಂಬೇಡ್ಕರ್‌ರವರ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ಹರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂದು ಬೆಂಗಳೂರಿನ ಕೆಎಚ್‌ಬಿ ಕಾಲೋನಿಯಿಂದ ನವರಂಗ್ ಥಿಯೇಟರ್‌ವರೆಗೂ ಬಿಜೆಪಿ ರ್‍ಯಾಲಿ ಇತ್ತು. ಆ ಪ್ರಯುಕ್ತ ಶಂಕರಮಠ ಸರ್ಕಲ್‌ನಲ್ಲಿ ಅಂಬೇಡ್ಕರ್‌ರವರ ಭಾವಚಿತ್ರವನ್ನು ಬಳಸಿಕೊಂಡು ಆ ನಂತರ ಜಾತಿವಾದಿಗಳು ಅದನ್ನು ವಿರೂಪಗೊಳಿಸಲಾಗಿದೆ. ಇದರಲ್ಲಿ ಬಿಜೆಪಿಯ ಬೇಜವಬ್ದಾರಿತನವೂ ಇದೆ” ಎಂದು ಕಿಡಿಕಾರಿದರು.
ಅಂಬೇಡ್ಕರ್‌ರವರು ಇಡೀ ಪ್ರಪಂಚದ ಆಸ್ತಿಯಾಗಿದ್ದಾರೆ. ಅವರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಆ ಭಾವಚಿತ್ರಗಳಿಗೆ ಗೌರವ ಕೊಡಬೇಕು, ಅದನ್ನು ಸಂರಕ್ಷಿಸಬೇಕು ಎನ್ನುವ ಜವಾಬ್ದಾರಿ ಇರಬೇಕು. ಅದು ಬಿಟ್ಟು ಈ ರೀತಿ ಬಳಸಿ ಬಿಸಾಕುವುದು ಸರಿಯಲ್ಲ. ನಾವು ಏನು ಮಾಡಿದರೂ ಹೇಳುವವರು-ಕೇಳುವವರು ಯಾರು ಇಲ್ಲ ಎನ್ನುವ ಅಹಂಕಾರದಿಂದ ಇಂದಿನ ಘಟನೆ ಜರುಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.




