ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಲೇಖಕ ಇಸ್ಮಾಯಿಲ್ ತಳಕಲ್ ಅವರ “ಬೆತ್ತಲೆ ಸಂತ” ಕೃತಿ ಆಯ್ಕೆಯಾಗಿದ್ದು, ಜೂನ್ 11 ರಂದು ಸಂಜೆ 4 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಒಟ್ಟು 52 ಕಥಾ ಸಂಕಲನಗಳು ಆಯ್ಕೆ ಸಮಿತಿ ಮುಂದೆ ಬಂದಿದ್ದವು. ಮೂರು ಸುತ್ತುಗಳ ಪರಿಶೀಲನೆ ನಂತರ ಅಂತಿಮವಾಗಿ ಇಸ್ಮಾಯಿಲ್ ತಳಕಲ್ ಅವರ “ಬೆತ್ತಲೆ ಸಂತ” ಕೃತಿಯು ಕಥಾಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ತಿಳಿಸಿದರು.
ಇಸ್ಮಾಯಿಲ್ ತಳಕಲ್ ಅವರು ಬೆಳಗಾವಿ ಜಿಲ್ಲೆಯ ಖನಗಾವ್‌ನಲ್ಲಿರುವ ಆದರ್ಶ ಮಹಾವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. “ಮಾರಾಟವಾಗದ ಬೊಂಬೆ” ಇವರ ಕವನ ಸಂಕಲನವಾಗಿದ್ದು “ಬೆತ್ತಲೆ ಸಂತ” ಇವರ ಮೊದಲ ಕಥಾ ಸಂಕಲನವಾಗಿದೆ ಎಂದರು.
ಜೂ.11 ರಂದು ಸಂಜೆ 4 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಂಸ್ಕೃತಿ ಚಿಂತಕ ಚನ್ನಬಸವಣ್ಣ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ.
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಅಧ್ಯಕ್ಷರಾದ ಎಚ್.ಆರ್.ಸುಜಾತಾ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಹಾಗೂ ಲೇಖಕ ಡಾ.ಲೋಕೇಶ್ ಅಗಸನಕಟ್ಟೆ ಭಾಗವಹಿಸಲಿದ್ದಾರೆ ಎಂದರು. ಸಹಾಯಕ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ.ರಂಗನಾಥ್ ಕಂಟಾನುಕುಂಟೆ ಕೃತಿ ಕುರಿತು ಮಾತನಾಡುವರು.
ಪ್ರಶಸ್ತಿ ಪುರಸ್ಕೃತ ಇಸ್ಮಾಯಿಲ್ ತಳಕಲ್ ಹಾಗೂ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಆಜೀವ ಸದಸ್ಯೆ ಡಿ.ಪಿ.ರಾಜಮ್ಮ ಉಪಸ್ಥಿತರಿರುವರು.
ಗೋಷ್ಠಿಯಲ್ಲಿ ಟ್ರಸ್ಟಿ ರಾಜೇಂದ್ರ ಪ್ರಸಾದ್, ರಾಕೇಶ್ ಹಾಜರಿದ್ದರು.