Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜಕೀಯದ ಇತಿಹಾಸ ಗೊತ್ತಿಲ್ಲದ ಅನನುಭವಿ ಅಣ್ಣಾಮಲೈ ; ಹೀಗೆಳೆದ ಎಐಎಡಿಎಂಕೆ

ಕೇಂದ್ರದ ಬಿಜೆಪಿ ನಾಯಕರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು  ಎಂದು  ಮಿತ್ರಪಕ್ಷ ಎಐಎಡಿಎಂಕೆ ಸೋಮವಾರ ಹೇಳಿದೆ. ಉನ್ನತ ನಾಯಕತ್ವದಲ್ಲಿ ಕೇಸರಿ ಪಕ್ಷದೊಂದಿಗಿನ ತನ್ನ ಸಂಬಂಧವನ್ನು ಮರುಪರಿಶೀಲಿಸಬೇಕು ಎಂದು ಎಐಎಡಿಎಂಕೆ ಹೇಳಿದೆ.

ಅಣ್ಣಾಮಲೈ ಅವರು ಮಾಜಿ ಮುಖ್ಯಮಂತ್ರಿ ಮತ್ತು ದಿವಂಗತ ಎಐಎಡಿಎಂಕೆ ವರಿಷ್ಠೆ ಜೆ ಜಯಲಲಿತಾ ಅವರನ್ನು ಪರೋಕ್ಷವಾಗಿ ಕೆಣಕಿದ ನಂತರ ಅವರ ಮೇಲೆ ಹಿರಿಯ ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಪತ್ರಿಕೆಯೊಂದಕ್ಕೆ ಅಣ್ಣಾಮಲೈ ಅವರು ನೀಡಿದ ಸಂದರ್ಶನದಲ್ಲಿ ”ಸಾರ್ವಜನಿಕ ಖಜಾನೆಯನ್ನು ಲಪಟಾಯಿಸಿದ ಯಾವುದೇ ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದಿದ್ದಾರೆ. ತಮಿಳುನಾಡಿನ ಹಲವು ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಚಾರ ನಡೆದಿವೆ. ಮಾಜಿ ಮುಖ್ಯಮಂತ್ರಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಹಾಗಾಗಿಯೇ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದಾಗಿದೆ. 1991-96ರ ನಡುವಿನ ಅವಧಿಯು (ಜಯಲಲಿತಾ ಅವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ) ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅವಧಿ ಎಂದು ಹೇಳುತ್ತೇನೆ” ಎಂದು ಅಣ್ಣಾಮಲೈ ಹೇಳಿದರು.

ಅಣ್ಣಾಮಲೈ ಅವರ ಹೇಳಿಕೆಯಿಂದ ಎಐಎಡಿಎಂಕೆ ಪದಾಧಿಕಾರಿಗಳು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಚೆನ್ನೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜಯಕುಮಾರ್, ”ತಮಿಳುನಾಡು ರಾಜಕೀಯದ ಇತಿಹಾಸ ಗೊತ್ತಿಲ್ಲದ ಅನನುಭವಿ ನಾಯಕ ಅಣ್ಣಾಮಲೈ” ಎಂದು ಕರೆದರು.

”ಡಿಎಂಕೆಯನ್ನು ಟೀಕಿಸುವ ಬದಲು… ಮೈತ್ರಿ ಪಾಲುದಾರರ ವಿರುದ್ಧ ಹೇಳಿಕೆಗಳನ್ನು ನೀಡುವುದು ಸ್ವೀಕಾರಾರ್ಹವಲ್ಲ. ಅವರ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಎಐಎಡಿಎಂಕೆ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಆಯ್ಕೆಯಾಗುವುದನ್ನು ನೋಡಲು ಬಯಸುತ್ತಾರೆ (2024 ರ ಲೋಕಸಭೆ ಚುನಾವಣೆಯಲ್ಲಿ). ಆದರೆ ಅಣ್ಣಾಮಲೈ ಅವರ ಹೇಳಿಕೆಯಿಂದ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಮುಂದುವರಿಸಲು ಬಯಸುವುದಿಲ್ಲ, ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಬಯಸುವುದಿಲ್ಲ ಎಂದು ಸೂಚಿಸುತ್ತದೆ” ಎಂದು ಅವರು ಹೇಳಿದರು.

”ಈಗ ಚುನಾವಣೆ ನಡೆದರೆ, ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 30 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಯಕುಮಾರ್ ಹೇಳಿದರು, ಮೈತ್ರಿಕೂಟವು ಪುದುಚೇರಿ ಸೇರಿದಂತೆ ಎಲ್ಲಾ 40 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಹೊಂದಿದೆ” ಎಂದು ಹೇಳಿದರು.

”ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಣ್ಣಾಮಲೈ ಅವರನ್ನು ಚುನಾವಣಾ ಸಹ-ಪ್ರಭಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಅಲ್ಲಿ ಬಿಜೆಪಿ ಬಹಳ ಹೀನಾಯವಾಗಿ ಸೋಲು ಕಂಡಿತು ಎಂದು ಅವರು ಹೇಳಿದರು. ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹೊರಿಸಲಾದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಾಜಿ ಪೊಲೀಸ್ ಅಧಿಕಾರಿ ಏಕೆ ಪ್ರತಿಕ್ರಿಯಿಸಲಿಲ್ಲ?” ಎಂದು ಜಯಕುಮಾರ್ ಕೇಳಿದರು.

”ನಿಧನನಾಗಿರುವ ನಮ್ಮ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಖಂಡನೀಯ. 20 ವರ್ಷಗಳ ನಂತರ, (2021) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಅದಕ್ಕೆ ಎಐಎಡಿಎಂಕೆ ಕಾರಣ. ಅಣ್ಣಾಮಲೈ ಅದನ್ನು ನಿರಾಕರಿಸಬಹುದೇ? ಅವರು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವುದರಿಂದ ಇಲ್ಲಿ ಬಿಜೆಪಿಗೆ ಗುರುತಿದೆ. ಅಮಿತ್ ಶಾ ಮತ್ತು (ಬಿಜೆಪಿ ಅಧ್ಯಕ್ಷ) ಜೆಪಿ ನಡ್ಡಾ ಅವರು ಅಣ್ಣಾಮಲೈ ಅವರಿಗೆ ಎಚ್ಚರಿಕೆ ನೀಡಬೇಕು, ಅವರನ್ನು ನಿಯಂತ್ರಿಸಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.

”ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಶೀತಲ ಸಮರ ಕಳೆದ ಹಲವು ತಿಂಗಳುಗಳಿಂದ ಚಾಲ್ತಿಯಲ್ಲಿದೆ, ಎರಡೂ ಪಕ್ಷಗಳ ನಾಯಕರು ಪರಸ್ಪರ ಟೀಕೆ ಮಾಡುತ್ತಿದ್ದಾರೆ. ಅಣ್ಣಾಮಲೈ ಅವರನ್ನು ಅಮ್ಮನಂಥ ಸರ್ವೋಚ್ಚ ನಾಯಕಿಗೆ ಹೋಲಿಸಲು ಸಾಧ್ಯವಿಲ್ಲ” ಎಂದು ಜಯಕುಮಾರ್ ಹೇಳಿದರು. ಇತ್ತೀಚಿನ ಜಟಾಪಟಿಯು ಎರಡು ಪಕ್ಷಗಳ ನಡುವಿನ ಸಂಬಂಧ ಮತ್ತು 2024 ರ ಚುನಾವಣೆಗೆ ಒಟ್ಟಿಗೆ ಸೇರುತ್ತದೆಯೇ ಎಂಬ ಅನುಮಾನವನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!