ದೇಶದ ಕಾರ್ಮಿಕ ವರ್ಗವನ್ನು ನವ ಗುಲಾಮಗಿರಿಗೆ ತಳ್ಳುವ ಜನದ್ರೋಹಿ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಲೇಬರ್ ಕೋಡ್ ಗಳನ್ನು ಸಂಸತ್ತಿನಲ್ಲಿ ಜಾರಿ ಮಾಡಿರಬಹುದು ಆದರೆ ಇವುಗಳನ್ನು ನಾವು ಬೀದಿಯಲ್ಲಿ ಸೋಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಹೇಳಿದರು.
ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ನಡೆದ ಕಟ್ಟಡ ನಿರ್ಮಾಣ ಕಾರ್ಮಿಕರ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರ ರಕ್ಷಣೆಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕಾರ್ಮಿಕ ವರ್ಗದ ಹಿತ ಕಾಯುವುದಕ್ಕೆ ಬದಲಾಗಿ ಈ ದೇಶದ ಕಾರ್ಪೊರೇಟ್ ಬಂಡವಾಳದಾರರನ್ನು ಖುಷಿಪಡಿಸಿ ಇನ್ನಷ್ಟು ಲಾಭವನ್ನು ಮಾಡಿಕೊಳ್ಳಲು ಜಾರಿ ಮಾಡಲಾಗಿದೆ ಎಂದು ದೂರಿದರು.

ಈ ಲೇಬರ್ ಕೋಡ್ಗಳು ಕಾರ್ಮಿಕರ ಉದ್ಯೋಗವನ್ನು ಅನಿಶ್ಚಿತಗೊಳಿಸುತ್ತವೆ ಮತ್ತು ಅಭದ್ರತೆಗೆ ತುಳ್ಳುತ್ತವೆ. ಕನಿಷ್ಠ ಕೂಲಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಲಹೀನಗೊಳಿಸಿ ಕಾರ್ಮಿಕ ವರ್ಗವನ್ನು ನವ ಜೀತ ಪದ್ಧತಿಗೆ ದೂಡುವ ಇಂತಹ ಕಾರ್ಮಿಕ ವಿರೋಧಿ ನಿಲುವು ತಳದಿರುವ
ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 12ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಈ ಮುಷ್ಕರವನ್ನು ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಮಿಕರಿಗೆ ಕರೆ ನೀಡಿದರು.
ಫೆಡರೇಶನ್ ರಾಜ್ಯ ಕಾರ್ಯದರ್ಶಿ ಲಿಂಗರಾಜು ಮಳವಳ್ಳಿ ಮಾತನಾಡಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಸಂಹಿತೆಗಳಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭದ್ರತೆ ಒದಗಿಸಿದ್ದ ಕಟ್ಟಡ ನಿರ್ಮಾಣ ಕಾರ್ಮಿಕರ ಎರಡು ಕಾಯ್ದೆಗಳು ಇದರಿಂದ ರದ್ದಾಗಿವೆ. ಇದುವರೆಗೂ ಸಿಗುತ್ತಿದ್ದ ಕಲ್ಯಾಣ ಯೋಜನೆಗಳು ಕಾರ್ಮಿಕರಿಗೆ ಸಿಗದಿರುವ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ದೂರಿದರು.
ಇತ್ತ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಕಾರ್ಮಿಕರ ನಿಧಿ ದುರ್ಬಳಕೆಯಾಗುತ್ತಿದೆ. ಈ ನಿಧಿಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವ ಬದಲು ರಾಜ್ಯ ಸರ್ಕಾರ ಮಾಡಬೇಕಿರುವ ಯೋಜನೆಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ಉದಾಹರಣೆಗೆ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಹೆಸರಿನಲ್ಲಿ ಧಾರವಾಡ ಮತ್ತು ಮೈಸೂರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಇದು ಅಕ್ಷಮ್ಯ ಎಂದರು.
ಫೆಡರೇಶನ ಮಂಡ್ಯ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಿಐಟಿಯು ಮುಖಂಡರಾದ ಮಹದೇವಮ್ಮ, ತಾಲೂಕು ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ. ಹೆಚ್.ಕೆ ಮುಖಂಡರಾದ ಮಂಟೇಸ್ವಾಮಿ ಚಂದ್ರಶೇಖರ ಇತರರು ಹಾಜರಿದ್ದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಳವಳ್ಳಿ ತಾಲೂಕು ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾದಪ್ಪ,ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮೇಗೌಡ,ಹೆಚ್.ಕೆ ಖಜಾಂಚಿಯಾಗಿ ಬಿ.ಮಂಟೇಸ್ವಾಮಿ ಹಾಗೂ ಹನ್ನೊಂದು ಜನ ಪದಾಧಿಕಾರಿಗಳನ್ನು ಸಮಾವೇಶವು ಸರ್ವಾನುಮತದಿಂದ ಆಯ್ಕೆ ಮಾಡಿತು ಎಂದು ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ.ಹೆಚ್.ಕೆ ತಿಳಿಸಿದರು.




