Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ-ಕಟ್ಟೇರಿ | ಅತ್ಯಾಚಾರ ವಿರೋಧಿ ಆಂದೋಲನದಿಂದ ಅರಿವಿನ ಅಭಿಯಾನ

ಅತ್ಯಾಚಾರ ವಿರೋಧಿ ಆಂದೋಲನ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಂಟಿಯಾಗಿ ಪಾಂಡವಪುರ ತಾಲೋಕಿನ ಕಟ್ಟೇರಿ ಗ್ರಾಮದ ಕಸ್ತೂರ ಬಾ ಗಾಂಧಿ ವಸತಿ ಶಾಲೆ ಮತ್ತು ಪ್ರೌಢಶಾಲಾ ಮಕ್ಕಳಿಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆಯ, ಪಾಂಡವಪುರ ತಾಲೂಕಿನ CRP ಪ್ರಕಾಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಪ್ರಸ್ತುತ ಸಂಧರ್ಭಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು, ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸೂಕ್ಷ್ಮ ಸಂವೇದನೆ ಎಂಬುದು ಬಹಳ ಮುಖ್ಯವಾದುದ್ದು. ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಮಕ್ಕಳು ಮತ್ತು ಮಹಿಳೆಯರು ಹಾಗೂ ಸಮಾಜಕ್ಕೆ ಅರಿವು ಮೂಡಿಸುತ್ತಿರುವ ತಂಡವನ್ನು ಅಭಿನಂದಿಸಬೇಕು ಎಂದು ಪ್ರೋತ್ಸಾಹದ ಮಾತುಗಳನ್ನು ಆಡಿದರು.

ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ನ್ಯಾಯಧೀಶರಾದ ನಳಿನ ಕುಮಾರಿ ರವರು ಮಾತನಾಡಿ, ಕಾನೂನಿನ ಅರಿವು ಎಂಬುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಅವಶ್ಯಕವಾದದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ರೀತಿಯಲ್ಲಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳನ್ನು ದೇವರ ಸಮಾನ ಎಂದು ನಾವು ಕಾಣುತ್ತೇವೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತಿದೆ, ಪುಟ್ಟ ಕಂದಮ್ಮಗಳ ಮೇಲೆ ನಿಲ್ಲದ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಿವೆ. ವಯಸ್ಸಿನ ಮಿತಿ ಇಲ್ಲದೆ, ಲಿಂಗ ಭೇದವಿಲ್ಲದೆ ಪುಟ್ಟ ಪುಟ್ಟ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳ ಮೇಲೂ ಇಂತಹ ದೌರ್ಜನ್ಯಗಳು ನಡೆಯುತ್ತಿವೆ. ಇದು ಮನುಷ್ಯ ಕುಲಕ್ಕೆ ಅವಮಾನ,ಇಂತಹ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿಯೇ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಸಲಾಗಿದೆ.

ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ, ಅದೇ ದಿನವೇ ಪೋಕ್ಸೋ ಕಾಯ್ದೆ ಕೂಡಾ ಜಾರಿಗೆ ಬಂದಿದೆ. ಈ ಕಾಯ್ದೆಯನ್ನು ನಾವು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪೋಕ್ಸೋ ಕಾಯ್ದೆಯನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿದರು.

ಅಪರಾಧ ಮಾಡುವುದನ್ನು ನೋಡಿಕೊಂಡು ಸುಮ್ಮನಿರುವುದು ಮತ್ತು ಅದನ್ನು ಪ್ರೋತ್ಸಾಹಿಸುವುದು ಕೂಡಾ ಅಪರಾಧ ಮಾಡಿದಷ್ಟೆ ಗಂಭೀರವಾದದ್ದು. ಅಲ್ಲದೆ ಅಪರಾಧಿಗಳನ್ನು ರಕ್ಷಿಸಲು ಸಹಾಯ ಮಾಡುವವರಿಗೂ ಕಾನೂನಿನಲ್ಲಿ ಕಠಿಣವಾದ ಶಿಕ್ಷೆಗಳಿವೆ ಎಂದು ಎಚ್ಚರಿಸಿದರು.

ಮಹಿಳೆಯರಿಗೆ ಮತ್ತು ಮಕ್ಕಳ ರಕ್ಷಣೆ ಮಾಡಲು ಜಾರಿ ಮಾಡುವ ಕಾನೂನನ್ನು ದುರ್ಬಳಕೆ ಮಾಡಿಕೊಂಡರೆ ಅದು ಕೂಡಾ ಅಪರಾಧವೆ ಆಗಿರುತ್ತದೆ. ಆದ್ದರಿಂದ ಸಮಾಜದ ನಾಗರೀಕರಾದ ನಾವು ಸರಿಯಾದ ರೀತಿಯಲ್ಲಿ ಕಾನೂನನ್ನು ಅರ್ಥ ಮಾಡಿಕೊಂಡು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಇತರರಿಗೂ ನೆರವಾಗೋಣ ಎಂದು ಹೇಳಿದರು.

ಮಹಿಳಾ ಮುನ್ನಡೆಯ ಪೂರ್ಣಿಮಾರವರು ಮಾತನಾಡಿ, ಇಂದಿನ ಸಮಾಜದಲ್ಲಿ ದಿನ ಬೆಳಗಾದರೆ, ಅತ್ಯಾಚಾರ ಮತ್ತು ದೌರ್ಜನ್ಯಗಳ ಸುದ್ದಿಗಳನ್ನು ದಿನ ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಒಂದು ಕಡೆ ಪುಟ್ಟ ಹೆಣ್ಣು ಮಕ್ಕಳಿಂದ -ವಯಸ್ಸಾದ ವೃದ್ದೆಯವರೆಗೂ ಅತ್ಯಾಚಾರ ಗಳು ನಡೆಯುತ್ತಿದೆ. ಸಾಮಾನ್ಯವಾಗಿ ಅತ್ಯಾಚಾರಗಳು ಪರಿಚಿತರಿಂದ ಸಂಬಂಧಿಕರಿಂದಲೆ ಹೆಚ್ಚುತ್ತಿರುವುದು ಆತಂಕ ತರುವ ವಿಚಾರವಾಗಿದೆ.

ಪುಟ್ಟ ಕಂದಮ್ಮಗಳು ಅತ್ಯಾಚಾರಕ್ಕೆ ಬಲಿಯಾದರೆ,ಇನ್ನೂ ಶಿಕ್ಷಣ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾದ ಪುಟ್ಟ ಗಂಡುಮಕ್ಕಳು ಚಿಕ್ಕ ವಯಸ್ಸಿಗೆ ಅತ್ಯಾಚಾರಿಗಳಾಗಿ ಬಾಲ ಅಪರಾಧಿಗಳಾಗಿ ಜೈಲು ಸೇರುತ್ತಿದ್ದಾರೆ. ಮೊಬೈಲ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅದರಿಂದ ಮಕ್ಕಳು ಒಳಿತನ್ನು ಕಲಿಯುವುದಕ್ಕಿಂತ ಕೆಟ್ಟದನ್ನು ಕಲಿತು ಜೈಲು ಸೇರುವುದೆ ಹೆಚ್ಚಾಗಿದೆ.

ಇಂತಹ ಪ್ರಕರಣಗಳನ್ನು ಮಂಡ್ಯಜಿಲ್ಲೆಯಲ್ಲಿ ಹಿಂದೆಯೂ ನೋಡಿದ್ದೇವೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಅತ್ಯಾಚಾರಗಳಿಂದ ರಕ್ಷಿಸುವುದು ಹಾಗೂ ಗಂಡು ಮಕ್ಕಳನ್ನು ಅಪರಾಧಿಗಳಾಗದಂತೆ ತಡೆಯುವ ಹೊಣೆ ನಮ್ಮ ಮೇಲಿದೆ. ಅತ್ಯಾಚಾರ ಮುಕ್ತ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಎಲ್ಲರೂ ಜೊತೆಗೆ ಸೇರೋಣ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲರಾದ ಮಳವಳ್ಳಿಯ ಎಂ.ವಿ. ಕೃಷ್ಣರವರು ಅಧ್ಯಕ್ಷ ಮಾತಾನಾಡಿ, ಶಿಕ್ಷಕರೆಂದರೆ ಬರಿ ಪುಸ್ತಕಗಳಲ್ಲಿರುವ ಪಾಠಗಳನ್ನು ಮಾಡುವುದಲ್ಲ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಿ ಕೊಡುವುದು. ನಿಜವಾದ ಶಿಕ್ಷಕನ ಧರ್ಮ. ಆದರೆ ಶಿಕ್ಷಕರೆ ಕಾಮುಕರಾದರೆ ಮಕ್ಕಳಿಗೆ ಕಲಿಸುವುದಾದರೂ ಎನು…? ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಮಕ್ಕಳು ಸುರಕ್ಷಿತವಾಗಿ ಇರಬೇಕು ಮತ್ತು ನಾವು ಕೂಡಾ ನಿರ್ಭಯವಾಗಿ ಬದುಕಬೇಕಾದರೆ, ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವುದು ಕೂಡಾ ನಮ್ಮದೆ ಕರ್ತವ್ಯ. ಅದನ್ನು ಸರಿಯಾಗಿ ಪಾಲಿಸಿದರೆ ಸಮಾಜ ಆರೋಗ್ಯಕರ ವಾಗುತ್ತದೆ. ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ತಿಳಿಸಿದರು.

ಮಹಿಳಾ ಮುನ್ನಡೆಯ ಜ್ಯೋತಿ ಕಿರು ನಾಟಕವನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾದ ಗೋಪಿನಾಥ್, ಪ್ರೌಡಶಾಲೆಯ ಮುಖ್ಯ ಶಿಕ್ಷಕರಾದ ಹೇಮ, ವಿಮೋಚನಾ ಮಹಿಳಾ ಸಂಘಟನೆಯ ಇಂಪನ, ಮಹಿಳಾ ಮುನ್ನಡೆಯ ಶಿಲ್ಪ, ಸೌಮ್ಯ, ಮುತ್ತಮ್ಮ  ಸೇರಿದಂತೆ ಹಲವರು ಉಪಸ್ಥಿತರಿದ್ದರು‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!