Friday, September 20, 2024

ಪ್ರಾಯೋಗಿಕ ಆವೃತ್ತಿ

ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಕುರಿತು ನಾಲಿಗೆ ಹರಿಬಿಟ್ಟ ಆರಗ ಜ್ಞಾನೇಂದ್ರ

ಮಾಜಿ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಭಾಷಣ ಮಾಡುತ್ತಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಿ ಅವರ ಮೈ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಮಂಗಳವಾರ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಸರ್ಕಾರದ ನೀತಿ ವಿರೋಧಿಸಿ ಘೋಷಣೆ, ಧಿಕ್ಕಾರ ಕೂಗಲಾಗುತ್ತಿತ್ತು. ಈ ವೇಳೆ ಆರಗ ಜ್ಞಾನೇಂದ್ರ ಅವರ ಮಾತಿನ ಸರದಿ ಬಂದಾಗ ಈಶ್ವರ್ ಖಂಡ್ರೆ ಹಾಗೂ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

“>

”ಅರಣ್ಯ ಸಚಿವರಿಗೆ ಪಶ್ಚಿಮಘಟ್ಟದ ಜನರ ಜೀವನಕ್ರಮ, ಗಿಡ- ಮರಗಳ ಕುರಿತು ತಿಳಿವಳಿಕೆ ಇಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಿರುವ, ವಿಜ್ಞಾನಿ ಕಸ್ತೂರಿರಂಗನ್ ಪರಿಸರ ತಜ್ಞ ಅಲ್ಲ” ಎಂದು ಖಂಡ್ರೆ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಹರಿಹಾಯ್ದರು.

”ಅವರಿಗೆ ಮರ-ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರ್ತಾರೆ…, ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ. ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ.  ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ..” ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯ ಮಾಡುವಂತೆ ಮಾತನ್ನಾಡಿದ್ದಾರೆ.

‘ಮೂಲ ನಿವಾಸಿಗಳಿಲ್ಲದಿದ್ದರೆ ಸಹ್ಯಾದ್ರಿಯ ಅರಣ್ಯ ಶ್ರೇಣಿ ಉಳಿಯುತ್ತಿರಲಿಲ್ಲ. ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳನ್ನು ಅವಲೋಕಿಸಿ ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಹಲವು ಕಾಯ್ದೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಸಮಸ್ಯೆ ಬಿಗಡಾಯಿಸಲಿದೆ” ಎಂದು ಅವರು ಹೇಳಿದರು.

”ಆರಗ ಜ್ಞಾನೇಂದ್ರ ಅವರ ಈ ಹೇಳಿಕೆ ಪಕ್ಕಾ ವರ್ಣ ತಾರತಮ್ಯದ ಅಡಿಯಲ್ಲಿ ಬರುವಂತದ್ದು. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಮಲ್ಲಿಕಾರ್ಜುನ ಖರ್ಗೆಯವರನ್ನು ಅಗತ್ಯವಲ್ಲದ ವಿಚಾರಕ್ಕೆ ಎಳೆದು ತಂದದ್ದು ಜ್ಞಾನೇಂದ್ರ ಅವರದು ದುರುದ್ದೇಶಪೂರ್ವಕ” ಎಂದು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಕಿಡಿಕಾರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!