Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ `400’ ಎಂಬ ಮಿಥ್ಯದ ಸುತ್ತ……

✍️ ಮಾಚಯ್ಯ ಎಂ ಹಿಪ್ಪರಗಿ

‘ಅಬ್ ಕೀ ಬಾರ್ ಚಾರ್ ಸೋ ಪಾರ್’ ಎನ್ನುತ್ತಿರುವ ಬಿಜೆಪಿಗೆ ನಿಜಕ್ಕೂ ಈ ನಂಬರ್ ಗೇಮ್ ನಿಜಮಾಡುವ ಸಾಧ್ಯತೆಗಳಿವೆಯೇ? ನಾಲ್ಕುನೂರರ ಗಡಿ ದಾಟುವುದು ಬಿಜೆಪಿಗೆ ಸುಲಭವೇ? ಅಂಕಿಅಂಶಗಳು ಏನು ಹೇಳ್ತವೆ?

ಸ್ವಾತಂತ್ರೋತ್ತರದ ಚುನಾವಣಾ ರಾಜಕೀಯ ಇತಿಹಾಸದಲ್ಲಿ 1984ರ ಚುನಾವಣೆಯನ್ನು ಹೊರತುಪಡಿಸಿ, ಇನ್ನ್ಯಾವ ಸಾರ್ವತ್ರಿಕ ಚುನಾವಣೆಯಲ್ಲೂ ಯಾವ ಪಕ್ಷವೂ 400 ರ ಗಡಿ ದಾಟಿಲ್ಲ. 1984ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಾಗಿ ಕೇವಲ ಎರಡು ತಿಂಗಳ ಅಂತರದಲ್ಲೆ ಅವರ ಪುತ್ರ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದರಿಂದ ಕಾಂಗ್ರೆಸ್ ಪಕ್ಷ 404 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಇಂದಿರಾಗಾಂಧಿಯವರ ಸಾವಿಗಾಗಿ ಮಿಡಿದಿದ್ದ ದೇಶದ ಜನರ ಅನುಕಂಪದ ಅಲೆ, ಆ ಐತಿಹಾಸಿಕ ಫಲಿತಾಂಶಕ್ಕೆ ಕಾರಣ. ಸ್ವತಃ ಇಂದಿರಾಗಾಂಧಿ ಮತ್ತು ನೆಹರೂ ಅವರ ನೇತೃತ್ವದಲ್ಲಿ ಈ ಹಿಂದೆ ಚುನಾವಣೆಗಳು ನಡೆದಾಗಲೂ ಕಾಂಗ್ರೆಸ್ ಗೆ ಇಷ್ಟು ಸ್ಥಾನಗಳು ಲಭಿಸಿರಲಿಲ್ಲ. ಹಾಗೆ ನೋಡಿದರೆ, ಅವರಿದ್ದ ಅವಧಿಯಲ್ಲಿ ಒಟ್ಟಾರೆ ಲೋಕಸಭಾ ಸ್ಥಾನಗಳ ಸಂಖ್ಯೆಯೂ ಕಮ್ಮಿಯಿತ್ತು; ಹಾಗಾಗಿ ನಾಲ್ಕು ನೂರರ ಗಡಿ ದಾಟಿರಲಿಲ್ಲ ಅಂದುಕೊಳ್ಳಬಹುದು. ಆದರೆ ಸಂಸತ್ತಿನ ಒಟ್ಟು ಎಂಪಿ ಸ್ಥಾನಗಳಿಗೆ ಹೋಲಿಕೆ ಮಾಡಿದಾಗ, 1984ರಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಶೇಕಡಾವಾರು ಸೀಟು ಗಳಿಕೆಯನ್ನು (76.4%) ಇಂದಿರಾ-ನೆಹರೂ ಕಾಲದಲ್ಲೂ ಕಾಂಗ್ರೆಸ್ ಕಾಣಲಾಗಿರಲಿಲ್ಲ ಎನ್ನುವುದು ಮಾತ್ರ ಸತ್ಯ.

ಈಗ ಬಿಜೆಪಿ 400 ಗಡಿಯನ್ನು ಮೀರಿ ಮುಂದಕ್ಕೆ ಸಾಗುವುದೇ? 1984ರಲ್ಲಿ ಕಾಂಗ್ರೆಸ್ ಆ ದಾಖಲೆ ಸೃಷ್ಟಿಸಿದಾಗ ಇಂದಿರಾಗಾಂಧಿಯವರ ಹತ್ಯೆಯ ಭಾವನಾತ್ಮಕ ಸಂಗತಿ ಸಾಥ್ ನೀಡಿತ್ತು ಎಂಬುದು ಎಷ್ಟು ಸತ್ಯವೋ, ಆಗಿನ್ನೂ ಪ್ರಾದೇಶಿಕ ಪಕ್ಷಗಳು ಈಗಿನಷ್ಟು ಬಲಾಢ್ಯವಾಗಿ ಬೆಳೆದಿರಲಿಲ್ಲ ಎಂಬುದೂ ಗಮನಾರ್ಹ. ವಾಸ್ತವದಲ್ಲಿ ಆ ಚುನಾವಣೆಯಲ್ಲಿ 30 ಸ್ಥಾನ ಗಳಿಸಿದ ಎನ್ ಟಿ ಆರ್ ನೇತೃತ್ವದ ತೆಲುಗು ದೇಶಂ ಪಕ್ಷವೇ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆದ ಮೊಟ್ಟಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಅರ್ಥಾತ್, ಅಲ್ಲಿಯವರೆಗೂ ಪ್ರಾದೇಶಿಕ ಪಕ್ಷಗಳಿಗೆ ರಾಜಕೀಯವಾಗಿ ಅಂತಹ ಪ್ರಾಬಲ್ಯವಿರಲಿಲ್ಲ. ಆನಂತರವೇ ಪ್ರಾದೇಶಿಕ ಪಕ್ಷಗಳ ಅವಕಾಶ ತೆರೆದುಕೊಳ್ಳುತ್ತಾ ಸಾಗಿದ್ದು. ಈಗ ಹೆಚ್ಚೂಕಮ್ಮಿ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿ ಬೇರೂರಿವೆ. ಇಂಥಾ ಪ್ರತಿಕೂಲ ಸಂದರ್ಭದಲ್ಲಿ ಬಿಜೆಪಿ ನಾಲ್ಕು ನೂರರ ಗಡಿ ದಾಟುವುದು ದುಸ್ಥರವೇ ಸರಿ.

ಅದನ್ನು ಅಂಕಿಅಂಶಗಳೇ ನಮಗೆ ಸಾಬೀತು ಮಾಡುತ್ತವೆ. ಮೊದಲನೆಯದಾಗಿ, ಬಿಜೆಪಿ ಏಕಾಂಗಿಯಾಗಿ ತಾನು ಈ ಸಾಧನೆ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಎನ್ ಡಿ ಎ ಮೈತ್ರಿಕೂಟದ ಮಿತ್ರಪಕ್ಷಗಳ ಒಟ್ಟು ಸ್ಥಾನಗಳ ಮೂಲಕ 400 ದಾಟುತ್ತೇನೆ ಎಂದು ಅದು ಹೇಳುತ್ತಿದೆ. ವಾಸ್ತವವೇನೆಂದರೆ, ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಶಿವಸೇನೆ ಮತ್ತು ಬಿಹಾರದಲ್ಲಿ ತೂಗುಯ್ಯಾಲೆ ಖ್ಯಾತಿಯ ನಿತೀಶ್ ಕುಮಾರ್ ಅವರ ಜೆಡಿಯು ಹೊರತುಪಡಿಸಿದರೆ, ಎರಡಂಕಿ ದಾಟಬಲ್ಲ ಬೇರೆ ಮಿತ್ರಪಕ್ಷಗಳು ಬಿಜೆಪಿ ಜೊತೆಗಿಲ್ಲ. ನಲವತ್ತು ಪಕ್ಷಗಳ ಎನ್ ಡಿ ಎ ಮೈತ್ರಿಕೂಟದಲ್ಲಿ 26 ಪಕ್ಷಗಳು ಒಬ್ಬನೇ ಒಬ್ಬ ಸಂಸದನನ್ನು ಗೆಲ್ಲಿಸಿಕೊಂಡಿಲ್ಲ. ಅಂದರೆ ಅವುಗಳ ಸಾಧನೆ ಶೂನ್ಯ. ಬಿಜೆಪಿಯನ್ನು ಹೊರತುಪಡಿಸಿ ಎರಡಂಕಿ ಸಂಸದರನ್ನು ಹೊಂದಿರುವ ಪಕ್ಷಗಳೆಂದರೆ ಜೆಡಿಯು (16) ಮತ್ತು ಶಿವಸೇನೆ (13) ಮಾತ್ರ! ಶಿವಸೇನೆ ಈಗ ಒಡೆದು ಇಬ್ಬಾಗವಾಗಿರುವುದರಿಂದ, ಎನ್ ಡಿ ಎ ಜೊತೆಗಿರುವ ಶಿಂಧೆ ಬಣ ಈ ಸಲ ಎರಡಂಕಿ ದಾಟುವುದು ಅನುಮಾನ. ಇನ್ನು ಅಧಿಕಾರಕ್ಕಾಗಿ ಮರಕೋತಿ ಆಟ ಆಡಿದ ನಿತೀಶ್ ಕುಮಾರ್ ಬಿಹಾರದಲ್ಲಿ ಅದೆಷ್ಟು ಬದ್ನಾಮ್ ಆಗಿದ್ದಾರೆಂದರೆ, ಅವರು ಕೂಡಾ ಎರಡಂಕಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ. ನಂಬಿಕೆಗೆ ಅರ್ಹವಲ್ಲದ ನಿತೀಶ್ ಅವರ ಜೆಡಿಯು ಪಕ್ಷವನ್ನು ಹೀಗೆ ನಿಶ್ಯಕ್ತಗೊಳಿಸಬೇಕೆನ್ನುವುದು ಸ್ವತಃ ಬಿಜೆಪಿಯ ರಣತಂತ್ರವೂ ಆಗಿರುವುದರಿಂದ ಜೆಡಿಯು ಸ್ಥಾನಗಳಿಕೆ ಒಂದಂಕಿಗೆ ಕಮರುವ ಸಾಧ್ಯತೆಯೇ ಹೆಚ್ಚು.

ಇದರರ್ಥ, ಬಿಜೆಪಿ ಹೇಳುತ್ತಿರುವಂತೆ ಎನ್ ಡಿ ಎ ಮೈತ್ರಿಕೂಟ 400 ಗಡಿ ದಾಟಬೇಕೆಂದರೆ, ಬಿಜೆಪಿ ಏಕಾಂಗಿಯಾಗಿ ಏನಿಲ್ಲವೆಂದರು 380 ರಿಂದ 390 ಸ್ಥಾನಗಳನ್ನು ಗೆಲ್ಲಲೇಬೇಕು! 2019ರಲ್ಲಿ ಬಿಜೆಪಿ ಗೆದ್ದಿದ್ದ 303 ಸ್ಥಾನಗಳಿಗೆ ಹೋಲಿಕೆ ಮಾಡಿದರೆ ಈ ಸಲ ಅದು 73 ರಿಂದ 83 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಬೇಕು. ಇಷ್ಟೊಂದು ಎಂಪಿ ಸ್ಥಾನಗಳು ಬಿಜೆಪಿಗೆ ಎಲ್ಲಿಂದ ಬರಲಿವೆ?

ಸತತ ಎರಡು ಅವಧಿಯಿಂದ ಆಡಳಿತ ನಡೆಸಿ, ತಣ್ಣನೆಯ ಆಡಳಿತ ವಿರೋಧಿ ಅಲೆಗೂ ತುತ್ತಾಗಿರುವ ಬಿಜೆಪಿ ಸರ್ಕಾರವು ಈ 400 ಜಪ ಮಾಡಲು ಶುರು ಮಾಡಿದ್ದು, ನಿರ್ದಿಷ್ಟವಾಗಿ 2023ರ ಡಿಸೆಂಬರ್ ನಲ್ಲಿ ಪ್ರಕಟವಾದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ. ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಗಳಲ್ಲಿ ಜಯಭೇರಿ ಬಾರಿಸಿದ್ದು ಬಿಜೆಪಿಗೆ ಈ ಹುಮ್ಮಸ್ಸು ತಂದಿರಬಹುದೇ? ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬಿಜೆಪಿ ಮುಂದಿಡುತ್ತಿರುವ 400 ಎಂಬ ಕಥನವೇ ಮಿಥ್ಯದ ಮೇಲೆ ಕಟ್ಟಿದ ಗಾಳಿಗೋಪುರ. ಪಾರದರ್ಶಕ ಮತ್ತು ಪ್ರಾಮಾಣಿಕ ರೀತಿಯಲ್ಲಿ ಚುನಾವಣೆ ನಡೆದಿದ್ದೇ ಆದಲ್ಲಿ, ಹೆಚ್ಚುವರಿಯಾಗಿ ಎಪ್ಪತ್ತರಿಂದ ಎಂಬತ್ತು ಸ್ಥಾನಗಳನ್ನು ಗೆಲ್ಲುವುದಿರಲಿ; ಈಗಿರುವ ಸ್ಥಾನಗಳಲ್ಲೇ ಬಿಜೆಪಿ ಬಹಳಷ್ಟು ಕ್ಷೇತ್ರಗಳನ್ನು ಕಳೆದುಕೊಂಡು ಅಲ್ಪಮತಕ್ಕೆ ಕುಸಿಯಲಿದೆ. ಆದಾಗ್ಯೂ ಕೇವಲ ಲೆಕ್ಕಾಚಾರಕ್ಕೋಸ್ಕರ, ಬಿಜೆಪಿ ಈಗಿರುವ ತನ್ನ 303 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ ಎಂದೇ ಭಾವಿಸಿ, ಹೆಚ್ಚುವರಿ 70 ರಿಂದ 80 ಸ್ಥಾನಗಳನ್ನು ಅದು ಎಲ್ಲೆಲ್ಲಿಂದ ಪಡೆದುಕೊಳ್ಳಬಹುದೆಂದು ನೋಡಿದಾಗ, ಬಿಜೆಪಿಯ ಈ ವಾದ ಎಷ್ಟು ಮಿಥ್ಯದಿಂದ ಕೂಡಿದೆ ಹಾಗೂ ಚುನಾವಣೆಗೂ ಮೊದಲೇ ಮತದಾರರ ಮನಸಿನ ಮೇಲೆ ತನ್ನ ದಿಗ್ವಿಜಯದ ಭ್ರಮಾಛಾಯೆಯನ್ನು ಪಸರಿಸಿ, ಅವರು ಬೇರೆ ಪಕ್ಷಗಳಿಗೆ ಮತಹಾಕದಂತೆ ಪ್ರಭಾವಿಸುವ ರಾಜಕೀಯ ತಂತ್ರಗಾರಿಕೆಯಿಂದ ಕೂಡಿದೆ ಅನ್ನೋದು ನಮಗೆ ಅರ್ಥವಾಗುತ್ತದೆ.

ಖಂಡಿತ ಹೌದು, ‘ಹಿಂದಿ ಹಾರ್ಟ್ ಲ್ಯಾಂಡ್’ ಎಂದು ಕರೆಯಲಾಗುವ ರಾಜ್ಯಗಳ ಮೇಲೆ ಇವತ್ತಿಗೂ ಬಿಜೆಪಿಯ ಬಿಗಿ ಹಿಡಿತವಿದೆ. ಇತ್ತೀಚೆಗೆ ಅದು ದಿಗ್ವಿಜಯ ಸಾಧಿಸಿದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳ ಫಲಿತಾಂಶ ಇದನ್ನು ಮತ್ತೆ ಸಾಬೀತು ಮಾಡಿದೆ. ಈ ಮೂರು ರಾಜ್ಯಗಳಲ್ಲದೆ ಗುಜರಾತ್, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶಗಳು, ಹರ್ಯಾಣ, ದಿಲ್ಲಿ ಈ ವ್ಯಾಪ್ತಿಗೆ ಒಳಪಡುತ್ತವೆ. ಇಷ್ಟೂ ರಾಜ್ಯಗಳಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಅಲ್ಲದೇ, ಅಯೋಧ್ಯೆಯ ರಾಮಮಂದಿರಕ್ಕೆ ರಾಜಕೀಯವಾಗಿ ಸ್ಪಂದಿಸುವ ಮಿತಿ ಕೂಡಾ ಈ ರಾಜ್ಯಗಳಿಗಷ್ಟೇ ಸೀಮಿತವಾದದ್ದು. ಈ ರಾಜ್ಯಗಳಲ್ಲಿ ಬಿಜೆಪಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿತು ಎಂದಿಟ್ಟುಕೊಳ್ಳಿ, ಆಗಲು ಸಹಾ ಬಿಜೆಪಿಯ ಟಾರ್ಗೆಟ್ 400ಕ್ಕೆ ಹೆಚ್ಚೇನೂ ಪ್ರಯೋಜನವಿಲ್ಲ.

ಯಾಕೆಂದರೆ, ಇಲ್ಲಿ ಗೆಲ್ಲಬಹುದಾದ ಗರಿಷ್ಠ ಸ್ಥಾನಗಳನ್ನು ಬಿಜೆಪಿ ಅದಾಗಲೇ ಗೆದ್ದಾಗಿದೆ. ಹೊಸದಾಗಿ ಸ್ಥಾನ ಹೆಚ್ಚಿಸಿಕೊಳ್ಳುವ ಸಾಧ್ಯತೆಯೇ ಅಲ್ಲಿಲ್ಲ. ರಾಜಸ್ಥಾನದ ಒಟ್ಟು 25 ಸ್ಥಾನಗಳ ಪೈಕಿ 24ರಲ್ಲಿ ಬಿಜೆಪಿ ಗೆದ್ದಿದೆ. ಹೆಚ್ಚೆಂದರೆ ಇನ್ನೊಂದು ಸ್ಥಾನ ಆ ರಾಜ್ಯದಿಂದ ಸಿಗಬಹುದು. ಮಧ್ಯಪ್ರದೇಶದಲ್ಲೂ ಇದೇ ಪರಿಸ್ಥಿತಿ. 29 ಸ್ಥಾನಗಳ ಪೈಕಿ ಬಿಜೆಪಿ 28ರಲ್ಲಿ ಗೆದ್ದಿದೆ. ಹೆಚ್ಚೆಂದರೆ ಇಲ್ಲಿಂದಲೂ ಒಂದು ಸ್ಥಾನ ಮಾತ್ರ ಸಿಗಬಹುದು. ಬಿಹಾರದ ಒಟ್ಟು 40 ಸ್ಥಾನಗಳ ಪೈಕಿ ಜೆಡಿಯು, ಎಲ್ ಜೆಪಿ ಜೊತೆ ಸೀಟು ಹಂಚಿಕೊಂಡಿರುವ ಬಿಜೆಪಿ ಸ್ಪರ್ಧಿಸುತ್ತಿರುವುದು ಕೇವಲ 17 ಸ್ಥಾನಗಳಲ್ಲಿ ಮಾತ್ರ. ಅದೂ ತನ್ನ ಹಾಲಿ ಸಂಸದರ ಕ್ಷೇತ್ರಗಳಲ್ಲಷ್ಟೇ. ಅಂದರೆ ಬಿಹಾರದಿಂದ ಬಿಜೆಪಿಗೆ ಒಂದೇಒಂದು ಹೆಚ್ಚುವರಿ ಸ್ಥಾನ ಸಿಗಲಾರದು. ಗುಜರಾತಿನಲ್ಲಿ ಎಲ್ಲಾ 26 ಸ್ಥಾನಗಳು ಬಿಜೆಪಿ ಕೈಯಲ್ಲಿರುವುದರಿಂದ ಅಲ್ಲಿಂದಲೂ ಹೆಚ್ಚುವರಿ ಸೀಟಿನ ಸಾಧ್ಯತೆಯಿಲ್ಲ. ಇನ್ನು ಹಿಮಾಚಲ ಪ್ರದೇಶ (4/4) ಉತ್ತರಾಖಂಡ (5/5), ಹರ್ಯಾಣ (10/10), ದಿಲ್ಲಿ (10/10) ಗಳಲ್ಲೂ ಇದೇ ಸ್ಥಿತಿ. ಅಲ್ಲಿಂದಲೂ ಹೆಚ್ಚುವರಿ ಸ್ಥಾನವಿಲ್ಲ. ಛತ್ತೀಸ್ ಗಢದ 11 ಸ್ಥಾನಗಳ ಪೈಕಿ 09ರಲ್ಲಿ ಬಿಜೆಪಿಯೇ ಗೆದ್ದಿರುವುದರಿಂದ ಹೆಚ್ಚೆಂದರೆ 2 ಸ್ಥಾನಗಳು ಮಾತ್ರ ಬಿಜೆಪಿಗೆ ಇಲ್ಲಿಂದ ಹೆಚ್ಚುವರಿಯಾಗಿ ಸಿಗಬಲ್ಲವು. ಇನ್ನು ಎಂಬತ್ತು ಸ್ಥಾನಗಳ ಮೂಲಕ ಅತಿಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈಗಾಗಲೇ 62 ಕಡೆ ಬಿಜೆಪಿ ಗೆದ್ದಿದೆ. ಈ ಸಲ ಯು.ಪಿ.ಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿಟ್ಟುಕೊಂಡರೂ ಅಲ್ಲಿ ಬಿಜೆಪಿಗೆ ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ 18 ಕ್ಷೇತ್ರಗಳು ಮಾತ್ರ. ಆದರೆ ನೆನಪಿರಲಿ, 2014ರಲ್ಲಿ ದೇಶಾದ್ಯಂತ ಬಿಜೆಪಿ ಪರವಾದ ಅಲೆ ಇದ್ದಾಗ್ಯೂ, ಮುಝಾಫರ್ಬಾದ್ ಕೋಮುಗಲಭೆಯ ಹೊರತಾಗಿಯೂ ಬಿಜೆಪಿ ಅಲ್ಲಿ ಗರಿಷ್ಠ ಗೆಲ್ಲಲು ಸಾಧ್ಯವಾದದ್ದು 72 ಸ್ಥಾನಗಳನ್ನು. ಇದಕ್ಕಿಂತಲೂ ಉತ್ತಮ ಸಾಧನೆ ಮಾಡುವ ವಾತಾವರಣ ಅಲ್ಲಿ ಇಲ್ಲ. ಅಯೋಧ್ಯ ರಾಮಮಂದಿರವೂ ರಾಜಕೀಯವಾಗಿ ಬಿಜೆಪಿ ನಿರೀಕ್ಷಿಸಿದಷ್ಟು ಕೈಹಿಡಿದಿಲ್ಲ. ಆದಾಗ್ಯೂ ಎಂಬತ್ತರಲ್ಲಿ ಎಂಬತ್ತು ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದಿಟ್ಟುಕೊಂಡರೂ ಹೆಚ್ಚುವರಿಯಾಗಿ ಸಿಗಲಿರುವುದು 18 ಮಾತ್ರ!

ಕೋಮುವಾದ, ರಾಷ್ಟ್ರೀಯತೆ, ರಾಮಮಂದಿರ ಪ್ರಭಾವ, ಮುಸ್ಲೀಂ ದ್ವೇಷದಂತಹ ಅಜೆಂಡಾಗಳ ಮೂಲಕ ತನ್ನ ಗರಿಷ್ಠ ಪ್ರಭಾವ ಹೊಂದಿರುವ ಹಿಂದಿ ಹಾರ್ಟ್ ಲ್ಯಾಂಡ್ ರಾಜ್ಯಗಳಲ್ಲೇ ಬಿಜೆಪಿಗೆ ಅತಿಗರಿಷ್ಠ ಸಾಧ್ಯತೆಯ ಮೂಲಕ ಸಿಗಬಹುದಾದ ಹೆಚ್ಚುವರಿ ಸ್ಥಾನಗಳ ಸಂಖ್ಯೆ 22 ಎಂದಮೇಲೆ, ಇತರೆ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಸಮಪ್ರಮಾಣದ ಪ್ರತಿರೋಧ ಎದುರಿಸುತ್ತಿರುವ ರಾಜ್ಯಗಳಲ್ಲಿ ಈಗಿರುವ ಸ್ಥಾನಗಳಿಗಿಂತ ಹೆಚ್ಚುವರಿಯಾಗಿ 55 ರಿಂದ 60 ಸ್ಥಾನಗಳನ್ನು ಹಿಗ್ಗಿಸಿಕೊಳ್ಳುವ ಪೂರಕ ವಾತಾವರಣ ಬಿಜೆಪಿಗಿದೆಯೇ? ಖಂಡಿತ ಇಲ್ಲ.

ರೈತ ಹೋರಾಟದಿಂದಾಗಿ ಪಂಜಾಬ್ ಸಂಪೂರ್ಣವಾಗಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದೆ. ವಿಭಜನೆಯ ನಂತರ ಜಮ್ಮು, ಕಾಶ್ಮೀರ, ಲಡಾಖ್‌ ಗಳಲ್ಲಿ ಬಿಜೆಪಿ ವರ್ತಿಸುತ್ತಿರುವ ರೀತಿಯಿಂದ ಅಲ್ಲಿನ ಜನ ತಿರುಗಿಬಿದ್ದಿದ್ದಾರೆ. ಕೇಂದ್ರವು 370 ಕಾಯ್ದೆ ರದ್ದುಗೊಳಿಸಿದಾಗ, ಅದನ್ನು ಸ್ವಾಗತಿಸಿದ್ದ ಲಡಾಕ್ ಜನರೇ ಈಗ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಪ್ರತಿಭಟಿಸುತ್ತಿರೋದು ಇದಕ್ಕೆ ಸಾಕ್ಷಿ.

ಇನ್ನು ಈಶಾನ್ಯ ರಾಜ್ಯಗಳಿಂದ ಲಭ್ಯವಿರುವ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕೇವಲ 25. ಎಲ್ಲಾ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತು ಎಂದಿಟ್ಟುಕೊಂಡರೂ ಇನ್ನೂ 35 ರಿಂದ 45 ಸ್ಥಾನಗಳು ಬೇರೆ ಕಡೆಯಿಂದ ಬೇಕಾಗುತ್ತವೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ ಇಲ್ಲ. ಮಣಿಪುರದ ಜನಾಂಗೀಯ ಹಿಂಸಾಚಾರ, ಸಿಎಎ-ಎನ್ ಆರ್ ಸಿ ವಿರುದ್ಧ ಭುಗಿಲೆದ್ದಿದ್ದ ದಂಗೆಗಳು, ಅರುಣಾಚಲ ಪ್ರದೇಶದ ಮೇಲೆ ಚೀನಾ ಅತಿಕ್ರಮಣ ಮೊದಲಾದ ಸಂಗತಿಗಳು ಬಿಜೆಪಿಯನ್ನಷ್ಟೇ ಅಲ್ಲ, ಅದರ ಮಿತ್ರಪಕ್ಷಗಳಿಗೂ ಚುನಾವಣೆಯನ್ನು ಕಷ್ಟವಾಗಿಸಿದೆ. ಮಣಿಪುರದಲ್ಲಿ ಸ್ಪರ್ಧೆಯಿಂದ ಬಿಜೆಪಿ ಹಿಂದೆ ಸರಿದಿರುವುದೇ ಇದಕ್ಕೆ ಸಾಕ್ಷಿ. ಹೀಗಿರುವಾಗ ಅಲ್ಲಿ ಎಲ್ಲಾ 25 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಾಧ್ಯವೇ?

ಪಶ್ಚಿಮ ಬಂಗಾಳದ ಒಟ್ಟು 42 ಸ್ಥಾನಗಳ ಪೈಕಿ ಈಗಾಗಲೇ ಬಿಜೆಪಿ 18ರಲ್ಲಿ ಗೆಲುವು ಸಾಧಿಸಿದೆ. ಹೆಚ್ಚುವರಿಯಾಗಿ ಅಲ್ಲಿಂದ ಅದಕ್ಕೆ 24 ಸ್ಥಾನಗಳು ಲಭಿಸಬಹುದು. ಆದರೆ ಅದು ದೀದಿ ಮಮತಾ ಬ್ಯಾನರ್ಜಿಯ ನೆಲ. ಅಷ್ಟು ಸುಲಭಕ್ಕೆ ಆಕೆ ಬಿಜೆಪಿಗೆ ತುತ್ತಾಗಲಾರರು. ಬಾಂಗ್ಲಾ ವಲಸಿಗರ ಸಂಗತಿ ಮತ್ತು ಮಮತಾ ಸರ್ಕಾರದ ಭ್ರಷ್ಟಾಚಾರ ಹಾಗೂ ಕೋಮುವಾದದ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಲ್ಲಿ ಬಹಳಷ್ಟು ಸಂಘರ್ಷವನ್ನು ಒಡ್ಡಿರುವುದು ನಿಜವಾದರೂ, ದೀದಿಯ ಪ್ರತಿ ತಂತ್ರಗಳು ಬಿಜೆಪಿಗೆ ಮಣ್ಣುಮುಕ್ಕಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇಲ್ಲಿ ಬಿಜೆಪಿಗಿರುವ ಏಕೈಕ ಆಶಾವಾದವೆಂದರೆ, ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವುದು. ಈ ಎಲ್ಲಾ ಪ್ರಯತ್ನ ಮತ್ತು ಲೆಕ್ಕಾಚಾರದ ಹೊರತಾಗಿಯೂ ಬಿಜೆಪಿ ಇಲ್ಲಿ ತನ್ನ ಕಳೆದ ಸಲದ ಸೀಟು ಗಳಿಕೆಗಿಂತ ನಾಲ್ಕೈದು ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದೇ ಹೊರತು, ಹೆಚ್ಚಿಗೆ ಸ್ಪಂದನೆ ಸಿಗಲಾರದು.

ಒಡಿಶಾದಲ್ಲೂ ಇದೇ ಪರಿಸ್ಥಿತಿ. ಸತತ 24 ವರ್ಷಗಳಿಂದ ಸಿಎಂ ಆಗಿ ತನ್ನ ಆಳ್ವಿಕೆ ಮುಂದುವರೆಸುತ್ತಿರುವ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳವನ್ನು ಬುಡಮೇಲು ಮಾಡುವುದು ಬಿಜೆಪಿಗೆ ಸಾಧ್ಯವಿಲ್ಲ. 22 ಸ್ಥಾನಗಳ ಪೈಕಿ ಬಿಜೆಡಿ 12 ಸ್ಥಾನಗಳಲ್ಲೂ, ಬಿಜೆಪಿ 08 ಸ್ಥಾನಗಳಲ್ಲೂ ಗೆದ್ದಿದೆ. ಎಷ್ಟೇ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದರೂ ಹೆಚ್ಚುವರಿಯಾಗಿ ಬಿಜೆಪಿಗೆ ಇಲ್ಲಿ 2-3 ಸ್ಥಾನ ಸಿಕ್ಕರೆ ದೊಡ್ಡ ಮಾತು.

ಬಿಜೆಪಿ ಹೇಳಿಕೊಳ್ಳುತ್ತಿರುವಂತೆ 400 ಗಡಿ ದಾಟಬೇಕೆಂದರೆ, ಅದಕ್ಕೆ ಹೊಸ ಸೀಟು ಗಳಿಕೆಯ ಸಾಧ್ಯತೆ ಇರುವುದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ. ಯಾಕೆಂದರೆ, ಒಟ್ಟು 179 ಲೋಕಸಭಾ ಕ್ಷೇತ್ರಗಳಿರುವ ಇಲ್ಲಿ ಬಿಜೆಪಿ ಗೆದ್ದಿರುವುದು 53 ಕ್ಷೇತ್ರಗಳಲ್ಲಿ ಮಾತ್ರ. ಅಂದರೆ ಇನ್ನೂ 126 ಕ್ಷೇತ್ರಗಳು ಬಿಜೆಪಿ ಗೆಲುವಿಗೆ ಮುಕ್ತವಿವೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇಷ್ಟು ಸ್ಥಾನಗಳನ್ನು ಗೆಲ್ಲುವಷ್ಟು ಪೂರಕ ವಾತಾವರಣ ಇದೆಯೇ? ಖಂಡಿತ ಇಲ್ಲ. ಮಹಾರಾಷ್ಟ್ರದ ವಿಚಾರಕ್ಕೆ ಬರುವುದಾದರೆ ಒಟ್ಟು 42 ಸ್ಥಾನಗಳು ಇವೆಯಾದರೂ, ಶಿಂಧೆ ಬಣದ ಶಿವಸೇನೆ ಜೊತೆಗೆ ಸೀಟು ಹಂಚಿಕೊಂಡಿರುವ ಬಿಜೆಪಿ ಇಲ್ಲಿ ಸ್ಪರ್ಧಿಸುತ್ತಿರುವುದು 31 ಕ್ಷೇತ್ರಗಳಲ್ಲಿ ಮಾತ್ರ. ಅವುಗಳ ಪೈಕಿ 23 ಕ್ಷೇತ್ರಗಳು ಕಳೆದ ಸಾರಿಯೇ ಬಿಜೆಪಿ ಕೈವಶವಾಗಿವೆ. ಇನ್ನೇನಿದ್ದರು ಬಿಜೆಪಿಗೆ ಹೆಚ್ಚುವರಿ ಸಾಧ್ಯತೆ ಇರುವುದು 8 ಸ್ಥಾನಗಳಲ್ಲಿ ಮಾತ್ರ. ಆಂದ್ರ, ಕೇರಳ, ತಮಿಳುನಾಡಿನಲ್ಲಿ ಬಿಜೆಪಿಗೆ ಯಾವ ನೆಲೆಯೂ ಇಲ್ಲ. ಇಲ್ಲೆಲ್ಲ ಬಿಜೆಪಿ ಖಾತೆ ತೆರೆದರೆ ದೊಡ್ಡ ಮಾತು ಎನ್ನುವ ಪರಿಸ್ಥಿತಿ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಎನ್ ಡಿ ಎ ಮೈತ್ರಿ ಕೂಟದಿಂದ ಹೊರ ನಡೆದಿರುವುದರಿಂದ ಅಲ್ಲೀಗ ಬಿಜೆಪಿ ಏಕಾಂಗಿ. ಕಳೆದ ಸಲ ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದ ತೆಲಂಗಾಣದಲ್ಲಿ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ನೀರಸ ಜನಸ್ಪಂದನೆಯೇ ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿ ಎನ್ನಬಹುದು. ಗೋವಾದಲ್ಲಿ ಇರುವ ಎರಡು ಸ್ಥಾನಗಳ ಪೈಕಿ ಒಂದರಲ್ಲಾಗಲೇ ಬಿಜೆಪಿ ಗೆದ್ದಾಗಿದೆ. ಹೆಚ್ಚುವರಿ ಸಾಧ್ಯತೆ ಇರುವುದು ಒಂದು ಕ್ಷೇತ್ರದಲ್ಲಿ ಮಾತ್ರ.

ಈಗ ಕರ್ನಾಟಕದ ರಾಜಕಾರಣಕ್ಕೆ ಬರೋಣ. ಮಂಡ್ಯವೂ ಸೇರಿದಂತೆ ಕಳೆದ ಸಲ ಬಿಜೆಪಿ ಇಲ್ಲಿ 26 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈಗ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು, ಮೂರು ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಅದು 25 ಸ್ಥಾನಗಳಲ್ಲಷ್ಟೇ ಸ್ಪರ್ಧೆ ಮಾಡುತ್ತಿದೆ. ಅಂದರೆ ಅದಾಗಲೇ ಒಂದು ಸ್ಥಾನವನ್ನು ಬಿಜೆಪಿ ಕಳೆದುಕೊಂಡಂತಾಗಿದೆ. ಇನ್ನು ಹೆಚ್ಚುವರಿಯಾಗಿ ಹಿಗ್ಗಿಸಿಕೊಳ್ಳುವುದು ಎಲ್ಲಿಂದ ಬಂತು!? ಆದರೆ ರಾಜಕೀಯ ಪರಿಸ್ಥಿತಿ ಬೇರೆಯದೆ ರೀತಿಯಲ್ಲಿದೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೈಹಿಡಿದಿವೆ. ಟಿಕೇಟು ಹಂಚಿಕೆಯ ನಂತರ ಬಿಜೆಪಿಯೊಳಗೆ ಭುಗಿಲೆದ್ದಿರುವ ಭಿನ್ನಮತಗಳು ಬಿಜೆಪಿಯನ್ನು ಹೈರಾಣಾಗಿಸಿವೆ. ಪ್ರಾದೇಶಿಕ ನಾಯಕತ್ವದ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ದಿಂಗಾಲೇಶ್ವರ ಸ್ವಾಮೀಜಿಯ ಸ್ಪರ್ಧೆಯಿಂದ ಧಾರವಾಡದಲ್ಲಿ ಪ್ರಭಾವಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯೇ ಗೆಲ್ಲಲು ಪರದಾಡುತ್ತಿದ್ದಾರೆ. ಇಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಕಳೆದುಕೊಳ್ಳುವಂತಹ ವಾತಾವರಣವಿದೆಯೇ ಹೊರತು, ಕಡೇ ಪಕ್ಷ ಹಳೆಯ ಸೀಟು ಗಳಿಕೆಯನ್ನು ಕಾಯ್ದುಕೊಳ್ಳುವ ಅವಕಾಶವೂ ಇಲ್ಲ.

ಬಿಜೆಪಿಯ ದಟ್ಟ ಪ್ರಾಬಲ್ಯವಿರುವ ಹಿಂದಿ ಹಾರ್ಟ್ ಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಔಟ್ ಆಫ್ ಔಟ್ ಗರಿಷ್ಠ ಸಾಧನೆ ಮಾಡುತ್ತದೆ ಎಂದುಕೊಂಡರೂ ಬೇರೆಕಡೆಯಿಂದ ಎಲ್ಲೂ ಸಹಾ ಹೆಚ್ಚುವರಿ 60-70 ಸ್ಥಾನಗಳು ಬಿಜೆಪಿಗೆ ಒದಗಿಬರುವ ಸಾಧ್ಯತೆ ಗೋಚರಿಸುತ್ತಿಲ್ಲ. ಹಾಗಿರುವಾಗ ಬಿಜೆಪಿ 400ರ ಗಡಿ ದಾಟುವುದಾದರು ಹೇಗೆ?

ಇದೆಲ್ಲವು ಸಹಾ ಬಿಜೆಪಿಗೆ ಪೂರಕವಾಗಿ ಹಾಕಿದ ಲೆಕ್ಕಾಚಾರಗಳು. ಆದರೆ ದೇಶದ ರಾಜಕಾರಣದಲ್ಲಿ ಅಂತಹ ವಾತಾವರಣ ಇಲ್ಲ. ಬೆಲೆಯೇರಿಕೆ, ಸರ್ವಾಧಿಕಾರ ಧೋರಣೆ, ರಾಜ್ಯಗಳಿಗೆ ತಾರತಮ್ಯ, ದೇಶದ ಅತಿದೊಡ್ಡ ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರ, ಅವಕಾಶವಾದಿ ಸೈದ್ಧಾಂತಿಕ ಹೊಂದಾಣಿಕೆಯಂತಹ ಕಾರಣಗಳಿಂದ ಜನ ಬಿಜೆಪಿಯಿಂದ ಭ್ರಮಾನಿರಸನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಘೋಷಿಸಿರುವ ನ್ಯಾಯದ ಗ್ಯಾರಂಟಿಗಳು ಬಡವರು ಮತ್ತು ಮಧ್ಯಮ ವರ್ಗಗಳನ್ನು ಅಂತರ್ಗತವಾಗಿ ತನ್ನತ್ತ ಸೆಳೆಯುತ್ತಿವೆ. ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲೆ ಬಿಜೆಪಿ ತೀರಾ ಕಳಪೆ ಸೀಟು ಗಳಿಕೆಗೆ ಕುಸಿದ ಸುದ್ದಿಗಳೂ ಹರಿದಾಡುತ್ತಿವೆ. ಬಿಜೆಪಿಯ ಈ ಹಿನ್ನಡೆಯು ಜನರ ಚರ್ಚೆಗೆ ಆಹಾರವಾಗಿ, ಮತ್ತಷ್ಟು ಪ್ರತಿಕೂಲ ವಾತಾವರಣ ನಿರ್ಮಾಣವಾಗುವುದನ್ನು ತಪ್ಪಿಸುವ ಸಲುವಾಗಿ 400 ಮಿಥ್ಯವನ್ನು ವ್ಯವಸ್ಥಿತವಾಗಿ ತೇಲಿಬಿಡಲಾಗುತ್ತಿದೆಯಷ್ಟೆ.

ಇಲ್ಲಿ ಇನ್ನೂ ಒಂದು ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇವಿಎಂ ಗಳ ಮೇಲೆ ಆರಂಭದಿಂದಲೂ ಅಪನಂಬಿಕೆಯ ಮಾತುಗಳು ಕೇಳಿಬರುತ್ತಲೇ ಇವೆ. ಯುಪಿಎ ಅವಧಿಯಲ್ಲಿ ಸ್ವತಃ ಬಿಜೆಪಿಯೂ ಇಂಥಾ ಆರೋಪ ಮಾಡಿತ್ತು. ಆದರೆ ಬಿಜೆಪಿ ಅಧಿಕಾರಕ್ಕೇರಿದ ನಂತರ ಈ ಅಪನಂಬಿಕೆಗಳು ಇನ್ನಷ್ಟು ದಟ್ಟವಾಗುತ್ತಾ ಬಂದಿವೆ. ಇವಿಎಂ ಟೆಕ್ನಾಲಜಿಯ ಟ್ಯಾಂಪರಿಂಗ್ ಪ್ರಶ್ನೆ ಒಂದುಕಡೆಯಾದರೆ, ಇವಿಎಂ ಗಳ ಅಕ್ರಮ ಸಾಗಾಟ, ಲೆಕ್ಕಕ್ಕೆ ತಾಳೆಯಾಗದ ಇವಿಎಂ ಸಂಖ್ಯೆಗಳು ಮತ್ತೊಂದು ರೀತಿಯ ಗುಮಾನಿ ಹುಟ್ಟಿಸುತ್ತಿವೆ. ದೇಶದಲ್ಲಿ ತನಗೆ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ಬಿಜೆಪಿ 400 ಗಡಿಯ ಮಾತನಾಡುತ್ತಿರುವುದಕ್ಕೂ, ಇವಿಎಂ ಮೇಲೆ ಗುಮಾನಿಗಳು ದಟ್ಟವಾಗುತ್ತಿರುವುದಕ್ಕೂ ಏನಾದರೂ ಸಂಬಂಧ ಇರಬಹುದೇ?

ಒಂದಂತೂ ಸತ್ಯ… ಹಾಗೊಮ್ಮೆ ಬಿಜೆಪಿ ಈ ಸಲ ತಾನು ಹೇಳಿದಂತೆ 400 ಸ್ಥಾನಗಳನ್ನು ಗೆದ್ದಿತು ಎಂದಾದರೆ, ನಾವು ಬೇರೆಲ್ಲ ವಾದಗಳಿಂದ ಕೊಂಚ ಬಿಡುವು ಪಡೆದು ಇವಿಎಂ ಗಳನ್ನು ನಮ್ಮ ಹೋರಾಟದ ಕೇಂದ್ರವಾಗಿಸಿಕೊಳ್ಳಬೇಕಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!