Friday, September 20, 2024

ಪ್ರಾಯೋಗಿಕ ಆವೃತ್ತಿ

ಇಬ್ಬರು ಮಹಿಳೆಯರ ರುಂಡ-ಮುಂಡ ಬೇರ್ಪಡಿಸಿ ಕೊಂದ ಕಿರಾತಕರ ಬಂಧನ

ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿದ್ದ ಇಬ್ಬರು ಮಹಿಳೆಯರ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ ಇಬ್ಬರು ಕಿರಾತಕರನ್ನು ಬಂಧಿಸುವಲ್ಲಿ ಮಂಡ್ಯ ಪೋಲಿಸರು ಯಶಸ್ವಿಯಾಗಿದ್ದಾರೆ.

ಇಬ್ಬರು ಮಹಿಳೆಯರ ದೇಹಗಳನ್ನು ಅರ್ಧ ಭಾಗ ತುಂಡರಿಸಿ ಜಿಲ್ಲೆಯ ಎರಡು ಭಾಗಗಳಲ್ಲಿ ಪ್ರತ್ಯೇಕವಾಗಿ ಬಿಸಾಡಿದ್ದರು. ರುಂಡ- ಮುಂಡ ಬೇರ್ಪಡಿಸಿ ಭಯಾನಕವಾಗಿ ಕೊಂದ ಘಟನೆ ಜನರಲ್ಲಿ ಆತಂಕ ಮೂಡಿಸಿತ್ತು.

ರಾಜ್ಯಾದ್ಯಂತ ಈ ಕೊಲೆ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಮಂಡ್ಯ ಪೋಲಿಸರು ಎರಡು ತಿಂಗಳಿಂದ ತನಿಖೆ ನಡೆಸಿ ಓರ್ವ ವ್ಯಕ್ತಿ ಹಾಗೂ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಅವರು ಇಂದು ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿ, ಕೋಡಿಹಳ್ಳಿ ಕಾಲನಿಯ ವ್ಯಕ್ತಿ ಮತ್ತು ಪಾಂಡವಪುರ ತಾಲೂಕಿನ ಹರವು ಗ್ರಾಮದ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಇವರು ಒಟ್ಟು 3 ಕೊಲೆಗಳನ್ನು ಮಾಡಿದ್ದು, ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು.

ಹಣಕಾಸಿನ ವ್ಯವಹಾರ, ವೈಯಕ್ತಿಕ ಈರ್ಷ್ಯೆ, ಅಕ್ರಮ ಲಾಭಕ್ಕಾಗಿ ಆರೋಪಿಗಳಿಬ್ಬರೂ ಈ ಕೊಲೆಗಳನ್ನು ಮಾಡಿದ್ದಾರೆ. ಕೊಲೆಯಾದ ಮಹಿಳೆಯರಿಬ್ಬರು ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು, ಗಾರ್ಮೆಂಟ್ಸ್ ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ, ಚಾಮರಾಜನಗರ ಟೌನ್ ನಿವಾಸಿ ಗೀತಾ ಅಲಿಯಾಸ್ ಪುಟ್ಟಿ ಕೊಲೆಯಾದವರು. ಪಾರ್ವತಿಯನ್ನು ಮೇ. 30ರಂದು, ಗೀತಾಳನ್ನು ಜೂ.3ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್‌ಗಳನ್ನು ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆಗಳಲ್ಲಿ ಶವಗಳನ್ನು ಬಿಸಾಡಿಸಿದ್ದಾರೆ ಎಂದು ವಿವರಿಸಿದರು.

ಪಾಂಡವಪುರ ತಾಲೂಕು ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆಯ ಕೆಳಗೆ ಹರಿಯುವ ನೀರಿನಲ್ಲಿ 30-32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದ ಮಾಡರಹಳ್ಳಿ ರಸ್ತೆ ಬಳಿ ಸಿಡಿಎಸ್ ನಾಲೆಗೆ ಸಂಪರ್ಕಿಸುವ ಸಾರೋಡುಹಳ್ಳದ ಪಕ್ಕದ ಭತ್ತದ ಗದ್ದೆಯಲ್ಲಿ 40-45ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯರ ಶವಗಳು ಪತ್ತೆಯಾಗಿದ್ದವು.

ಎರಡೂ ಪ್ರಕರಣಗಳಲ್ಲಿ ತುಂಡರಿಸಿದ ಇಬ್ಬರು ಮಹಿಳೆಯರು ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ಎರಡೂ ಶವಗಳಲ್ಲಿ ಸೊಂಟದಿಂದ ಮೇಲ್ಭಾಗದ ದೇಹವೇ ಇರಲಿಲ್ಲ. ಹೀಗಾಗಿ ಶವಗಳ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು ಎಂದರು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ 10ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ, ಮೃತರ ಗುರುತು ಪತ್ತೆಗಾಗಿ ಜನರ ಸಹಕಾರ ಕೋರಲಾಗಿತ್ತು.
9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಲು 2 ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು.

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು. ಕಡೆಗೆ ಜೂ.3ರಂದು ಗೀತಾ ಕಾಣೆಯಾಗಿದ್ದ ಪ್ರಕರಣವು ಜುಲೈ 7ರಂದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಎರಡೂ ಪ್ರಕರಣಗಳನ್ನು ಒಂದೇ ರೀತಿಯ ಸಾಮ್ಯತೆಗಳು ಇದ್ದವು. ಹೀಗಾಗಿ ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ವಿಚಾರಣೆ ವೇಳೆ ಬೆಂಗಳೂರಿನ ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಕುಮುದ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ, ಚಿತ್ರದುರ್ಗದವರೆಗೆ ಬೈಕ್‌ನಲ್ಲೇ ಕೊಂಡೊಯ್ದು ಶವ ಬಿಸಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.

ಮಂಡ್ಯ ಎಸ್ಪಿ ಎನ್.ಯತೀಶ್ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಗಟ್ಟಣ ಡಿವೈಎಸ್‌ಪಿ ಸಂದೇಶ್ ಕುಮಾರ್ ನೇತೃತ್ವದ ತನಿಖಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಕರಣಗಳನ್ನು ಬೇಧಿಸಿವೆ. ಹೀಗಾಗಿ ತನಿಖಾ ತಂಡದಲ್ಲಿದ್ದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್‌ಪಿ ವೇಣುಗೋಪಾಲ್, ಶ್ರೀರಂಗಪಟ್ಟಣ ಡಿವೈಎಸ್‌ಪಿ ಸಂದೇಶ್‌ಕುಮಾರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!